ಪ್ರವಾಸೋದ್ಯಮ ಇಲಾಖೆಯಿಂದ 31 ಅಡಿ ಎತ್ತರದ ಏಕ ಶಿಲಾ ಆಂಜನೇಯನ ಕಪ್ಪು ಶಿಳಾ ವಿಗ್ರಹ ಪ್ರತಿಷ್ಠಾಪನೆ: ಯದುವೀರ ಭಾಗಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 07, 2022 | 6:01 PM

ಆಕರ್ಷಕವಾಗಿ ಮೂಡಿಬಂದಿರುವ ಮೂರ್ತಿಯನ್ನು ಇಂದು ಮೈಸೂರಿನಿಂದ ಕೆ.ಆರ್ ನಗರಕ್ಕೆ ಕಳುಹಿಸಲಾಯಿತು. ಈ ವೇಳೆ ಮೂರ್ತಿಗರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯ್ತು. ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದರು.

ಪ್ರವಾಸೋದ್ಯಮ ಇಲಾಖೆಯಿಂದ 31 ಅಡಿ ಎತ್ತರದ ಏಕ ಶಿಲಾ ಆಂಜನೇಯನ ಕಪ್ಪು ಶಿಳಾ ವಿಗ್ರಹ ಪ್ರತಿಷ್ಠಾಪನೆ: ಯದುವೀರ ಭಾಗಿ
ಪ್ರವಾಸೋದ್ಯಮ ಇಲಾಖೆಯಿಂದ 31 ಅಡಿ ಎತ್ತರದ ಏಕ ಶಿಲಾ ಆಂಜನೇಯನ ಕಪ್ಪು ಶಿಳಾ ವಿಗ್ರಹ ಪ್ರತಿಷ್ಠಾಪನೆ
Follow us on

ಮೈಸೂರು: ದೇಶದಲ್ಲಿ ಈಗ ಎಲ್ಲೆಡೆ ಆಕರ್ಷಕ‌ ಮೂರ್ತಿಗಳ ಪರ್ವ ಆರಂಭವಾಗಿದೆ. ಇತ್ತೀಚೆಗಷ್ಟೇ ಪ್ರತಿಷ್ಠಾಪಿತವಾದ ಶಂಕರಾಚಾರ್ಯರ‌ ಬೃಹತ್ ಪ್ರತಿಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಬೃಹತ್ ಪ್ರತಿಮೆ ಕೆತ್ತಿದ ಕಲಾವಿದ ಮೈಸೂರು ಅರುಣ್ ಅವರ ಕೈ ಚಳಕದಲ್ಲಿ ಆಂಜನೇಯನ ವಿಗ್ರಹ ಮೂಡಿ ಬಂದಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಬೃಹದಾಕಾರದ ಏಕ ಶಿಲಾ ಆಂಜನೇಯನ ಕಪ್ಪು ಶಿಳಾ ವಿಗ್ರಹ. ನೋಡಿದರೆ ನೋಡುತ್ತಲೇ ಇರಬೇಕೆಂಬ ಸೆಳೆತ. ಅಜಾನುಭಾವ ಆಂಜನೇಯನ ಅದ್ಬುತ ಕಲಾಕೃತಿ. ಇದು ಮೂಡಿರುವುದು ಮೈಸೂರಿನ ಕಲಾವಿದ ಅರುಣ್ ಕೈ ಚಳಕದಲ್ಲಿ. ಈ ಬೃಹತ್ ವಿಗ್ರಹವನ್ನು ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಕೆತ್ತಲಾಗಿದೆ. ಸುಮಾರು 31 ಅಡಿ ಎತ್ತರದ ಈ ವಿಗ್ರಹಕ್ಕೆ ತಗುಲಿರುವ ವೆಚ್ಚ ಬರೋಬ್ಬರಿ 40 ಲಕ್ಷ. ಈ ಬೃಹತ್ ಮೂರ್ತಿಯನ್ನು ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆ ಶ್ರೀರಾಮ ದೇಗುಲದ ಬಳಿ ಪ್ರತಿಷ್ಠಾಪಿಸಲಾಗುತ್ತದೆ. ಆಕರ್ಷಕವಾಗಿ ಮೂಡಿಬಂದಿರುವ ಮೂರ್ತಿಯನ್ನು ಇಂದು ಮೈಸೂರಿನಿಂದ ಕೆ.ಆರ್ ನಗರಕ್ಕೆ ಕಳುಹಿಸಲಾಯಿತು. ಈ ವೇಳೆ ಮೂರ್ತಿಗರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯ್ತು. ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದರು.

ಶಾಸಕ ಸಾ.ರಾ ಮಹೇಶ್ ಪ್ರವಾಸೋದ್ಯಮ ಸಚಿವರಾಗಿದ್ದಾಗ ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಿದ್ದರು. ಇದರ ಜೊತೆಗೆ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಚುಂಚನಕಟ್ಟೆಯಲ್ಲಿ ಅಭಿವೃದ್ದಿ ಕಾರ್ಯಗಳನ್ನೂ ಸಹಾ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ಈ ಪ್ರತಿಮೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಭಾವೈಕ್ಯತೆಯ ಸಂಕೇತವಾಗಿದೆ. ಇದಕ್ಕೆ ಪೂರಕವೆಂಬಂತೆ ಕೆ ಆರ್ ನಗರಕ್ಕೆ ಆಗಮಿಸಿದ ಹನುಮಂತನ ಮೂರ್ತಿಯನ್ನು ಕ್ರಿಶ್ಚಿಯನ್, ಮುಸ್ಲಿಂ ಬಾಂಧವರು ವಿಶೇಷವಾಗಿ ಸ್ವಾಗತಿಸಿದರು‌. ಮುಸ್ಲಿಂ ಭಾಂದವರೇ ಮುಂದೆ ನಿಂತು ಆಂಜನೇಯನಿಗೆ ಜೈ ಅಂತಾ ಘೋಷಣೆ ಕೂಗಿ ಪುಷ್ಪಾರ್ಚನೆ ಮಾಡಿ ಮೂರ್ತಿಯನ್ನು ಸ್ವಾಗತಿಸಿದರು. ಕ್ರಿಶ್ಚಿಯನ್ ಧರ್ಮಗುರುಗಳ ಸಹಾ ಭಾಗಿಯಾಗಿದ್ದರು. ಈ ಮೂರ್ತಿ ಭಾವೈಕ್ಯತೆಯ ಸಂಕೇತ ಅನ್ನೋದು ಶಾಸಕ ಸಾ.ರಾ ಮಹೇಶ್ ಅಭಿಪ್ರಾಯ.

ಇನ್ನು ಈ ಮೂರ್ತಿ ತಯಾರಿಸಲು ಕಲಾವಿದ ಅರುಣ್ ತೆಗೆದುಕೊಂಡಿರುವ ಸಮಯ ಬರೋಬ್ಬರಿ ಒಂದು ವರೆ ವರ್ಷ ಇದಕ್ಕಾಗಿ ಸುಮಾರು 10 ಜನ ಕಲಾವಿದರು ಅರುಣ್‌ಗೆ ಸಾಥ್ ನೀಡಿದ್ದಾರೆ. ಬರೋಬ್ಬರಿ 31 ಅಡಿ ಎತ್ತರವಿರುವ ವಿಗ್ರಹ ಸರಿ ಸುಮಾರು 30 ಟನ್ ತೂಕವಿದೆ. ಮೂರ್ತಿಯಲ್ಲಿ ಜೀವ ಕಳೆ ಬಂದಿದ್ದು.‌ ಇದು ನಮ್ಮ ತಾತಾ ತಂದೆಯವರ ವರ ಹಾಗೂ ದೈವ ಸಂಕಲ್ಪ ಅಂತಾರೆ ಕಲಾವಿದ ಅರುಣ್. ಸದ್ಯ ಆಂಜನೇಯನ ಬೃಹತ್ ಪ್ರತಿಮೆ ಕೆಆರ್ ನಗರದ ಚುಂಚನಕಟ್ಟೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶಾಸ್ತ್ರೋಕ್ತವಾಗಿ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಇದು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಒಟ್ಟಾರೆ ಈ ಮೂಲಕ ಚುಂಚನಕಟ್ಟೆ ಎಲ್ಲರ ನೆಚ್ಚಿನ ಪ್ರವಾಸಿ ತಾಣವಾಗಲಿದೆ. ವಿಶ್ವದಲ್ಲೇ ಖ್ಯಾತಿ ಗಳಿಸಲಿ ಅನ್ನೋದೇ ಎಲ್ಲರ ಆಶಯ.

ಕೆಟ್ಟ ಶಕ್ತಿಗಳ ನಿವಾರಣೆಗಾಗಿ ಅತಿ ರುದ್ರಯಾಗ

ನಾಡಿನೆಲ್ಲೆಡೆ ಒಂದು ಕಡೆ ಧರ್ಮ ಸಂಘರ್ಷ ತಾರಕಕ್ಕೇರಿದೆ. ಮತ್ತೊಂದು‌ ಕಡೆ ಕೊರೊನಾ ಮಹಾಮಾರಿ ಮೆಲ್ಲಗೆ ಹೆಡೆ ಬಿಚ್ಚುತ್ತಿದೆ. ಮತ್ತೊಂದು ಕಡೆ ಪ್ರಕೃತಿ ವಿಕೋಪದ ಭೀತಿ ಆವರಿಸಿದೆ. ಇವೆಲ್ಲವೂ ನಿವಾರಣೆಯಾಗಲಿ ಅಂತಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತಿ ರುದ್ರಯಾಗ ನಡೆಸಲಾಯ್ತು. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಧಗ ಧಗಿಸುತ್ತಿರುವ ಅಗ್ನಿ ಕುಂಡಗಳು. ನಿರಂತರವಾಗಿ ವೇದ ಘೋಷ ಮಂತ್ರ ಪಠಣ ಮಾಡುತ್ತಿರುವ ಯತಿಗಳು. ಲೋಕೇಶ್ವರನಿಗೆ ವಿವಿಧ ಅಭಿಷೇಕ. ಇವತ್ತು‌ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಅತಿ ರುದ್ರಯಾಗದ ವಿಶೇಷತೆ. ಮೈಸೂರಿನ ಸೋನಾರ್ ಬೀದಿಯ ಸಾಯಿನೃಸಿಂಹ ಟ್ರಸ್ಟ್ ವತಿಯಿಂದ ಅರ್ಜುನ ಅವಧೂರು ಗುರುಗಳ ನೇತೃತ್ವದಲ್ಲಿ ಮೈಸೂರಿನ ಶಂಕರಮಠದಲ್ಲಿ ಅತಿ ರುದ್ರು ಮಹಾಯಾಗವನ್ನು ನಡೆಸಲಾಯ್ತು. ಎಲ್ಲೆಡೆ ಧರ್ಮ ಸಂಘರ್ಷ ಅಶಾಂತಿ ತಾಂಡವವಾಡುತ್ತಿದೆ. ಕೊರೊನಾ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಇದೆಲ್ಲದರ ನಿವಾರಣೆಗಾಗಿ ವಿಶೇಷದಲ್ಲಿ ವಿಶೇಷವಾದ ಅತಿ ರುದ್ರಯಾಗವನ್ನು ನಡೆಸಲಾಯ್ತು.

ಐದು ದಿನ ಶ್ರದ್ದಾ ಭಕ್ತಿಯಿಂದ ಅತಿ ರುದ್ರ ಯಾಗವನ್ನು ನಡೆಸಲಾಯ್ತು. ಒಂದಲ್ಲ‌ ಎರಡಲ್ಲ ಬರೋಬ್ಬರಿ 11 ಹೋಮ ಕುಂಡಗಳನ್ನು ಮಾಡಲಾಗಿತ್ತು. ಒಂದೊಂದು ಹೋಮ ಕುಂಡದಲ್ಲೂ 11 ಯತಿಗಳು ಕುಳಿತಿದ್ದರು. ಇದರ ಜೊತೆಗೆ ನೂರಾರು ಯತಿಗಳು ಸೇರಿಕೊಂಡು ಅತಿ ಮಹಾರುದ್ರ ಯಾಗವನ್ನು ನೆರವೇರಿಸಿದ್ರು. ಇದರ ಜೊತೆಗೆ ಶಿವ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಶಿವಲಿಂಗಕ್ಕೆ ಐದು ದಿನವೂ ವಿವಿಧ ಅಭಿಷೇಕವನ್ನು ನೆರವೇರಿಸಲಾಯ್ತು. ಆಕರ್ಷಕವಾದ ಹೂವಿನ ಅಲಂಕಾರ ಮಾಡಲಾಗಿತ್ತು. ಶಂಕರ ಮಠದ ಸಂಪೂರ್ಣ ಆವರಣವನ್ನು ರಂಗೋಲಿಯಿಂದ ಸಿಂಗರಿಸಲಾಗಿತ್ತು. ಕೈಲಾಸವೇ ಧರೆಗಿಳಿದಂತಿದ್ದ ಯಾಗ ಎಲ್ಲರಿಗೂ ಖುಷಿ ನೀಡಿತು.

ಪೂರ್ಣಾಹುತಿ ಮೂಲಕ ಐದು ದಿನದ ಅತಿರುದ್ರ ಮಹಾಯಾಗಕ್ಕೆ ತರೆ ಬಿದ್ದಿತು. ಸಾವಿರಾರು ಜನರು ಹೋಮದಲ್ಲಿ ಭಾಗಿಯಾಗಿ ಪುನೀತರಾದರು. ಲೋಕ ಕಲ್ಯಾಣಾರ್ಥವಾಗಿ ನಡೆದ ಅತಿರುದ್ರ ಮಹಾಯಾಗದಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಲಿ. ಎಲ್ಲೆಡೆ ಶಾಂತಿ ನೆಲೆಸಲಿ‌‌. ನಾಡು ಸಮೃದ್ದವಾಗಿರಲಿ ಅನ್ನೋದೆ ಎಲ್ಲರ ಆಶಯ‌

ವರದಿ: ರಾಮ್ ಟಿವಿ9 ಮೈಸೂರು

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:54 pm, Sat, 7 May 22