ಮೈಸೂರು: ಜಾನುವಾರು ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿದ್ದು ರೈತ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾದನೂರು ಒಡೆಯನಪುರದಲ್ಲಿ ನಡೆದಿದೆ. ರೈತ ಪುಟ್ಟಸ್ವಾಮಿ(46) ಮೃತ ದುರ್ದೈವಿ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿನ ನಂಜದೇವರ ಬೆಟ್ಟ ಬಳಿ ಘಟನೆ ನಡೆದಿದ್ದು ರೈತನ ಸಾವಿನಿಂದ ಜನರಿಗೆ ಹುಲಿ ಭಯ ಹೆಚ್ಚಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದು ಸ್ಥಳದಲ್ಲಿ ಪುಟ್ಟಸ್ವಾಮಿ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.
ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿದ ಒಂಟಿ ಸಲಗ
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತೇರುಬೀದಿ ಗ್ರಾಮದ ಬಳಿ ಒಂಟಿ ಸಲಗ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿದ ಘಟನೆ ನಡೆದಿದೆ. ಮರಳವಾಡಿ ಗ್ರಾಮದಿಂದ ತೇರುಬೀದಿ ಗ್ರಾಮಕ್ಕೆ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು ಈ ವೇಳೆ ಏಕಾಏಕಿ ರಸ್ತೆಗೆ ಬಂದು ಒಂಟಿ ಸಲಗ ಬಸ್ ಮುಂದೆ ನಿಂತಿದೆ. ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗೆ ಓಡಿಸಲು ಪ್ರಯತ್ನ ಮಾಡಲಾಗಿದ್ದು ಯಾವುದಕ್ಕೂ ಜಗ್ಗದೆ ಕೆಲವೊತ್ತು ರಸ್ತೆಯಲ್ಲೇ ನಿಂತಿತ್ತು. ಕೊನೆಗೆ ಒಂಟಿ ಸಲಗ ತೆರಳಿದ ನಂತರ ಬಸ್ ಪ್ರಯಾಣ ಮುಂದುವರೆಸಿತು.
ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸಾವು
ಹಾವೇರಿಯ ರಟ್ಟೀಹಳ್ಳಿ ತಾಲೂಕಿನ ಹೊಸಕಟ್ಟಿ ಗ್ರಾಮದ ಬಳಿ ಗದ್ದೆಯಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ನಾಗರಾಜ ತೋಟದ(26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಭತ್ತ ನಾಟಿ ಮಾಡಲು ಟ್ರ್ಯಾಕ್ಟರ್ ನಿಂದ ಭೂಮಿ ಸಜ್ಜುಗೊಳಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
Published On - 9:32 pm, Sun, 31 July 22