ಮೈಸೂರು: ಮಂಡ್ಯದ ಬೇಬಿ ಬೆಟ್ಟದಲ್ಲಿ(Baby Betta) ಟ್ರಯಲ್ ಬ್ಲಾಸ್ಟ್ ನಡೆಸದಂತೆ ರಾಜವಂಶಸ್ಥೆ ಪ್ರಮೋದಾದೇವಿ(Rajmata Pramoda Devi Wadiyar) ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ರಾಜ ಮನೆತನಗಳನ್ನು ಸರಿಯಾಗಿ ನಡೆಸಿ ಕೊಳ್ಳುತ್ತಿಲ್ಲ. ನಾವೇನೂ ಯಾರದೋ ಆಸ್ತಿ ಕಬಳಿಸಲು ಹೊರಟ್ಟಿದ್ದೇವೇ ಎಂಬ ರೀತಿ ಸರ್ಕಾರ ಯೋಚಿಸುತ್ತಿವೆ. ಇದು ನಮಗೆ ಸರ್ಕಾರಗಳು ಕೊಡುತ್ತಿರುವ ಕಿರುಕುಳ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಮಂಡ್ಯದ ಕೆಆರ್ಎಸ್ ಜಲಾಶಯ ವಿಷ್ಯವಾಗಿ ದಂಗಲ್ ಶುರುವಾಗಿದೆ. ಡ್ಯಾಂನಿಂದ ಸುಮಾರು 10ಕಿಲೋ ಮೀಟರ್ ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದ್ರಿಂದಾಗಿ ಡ್ಯಾಂ ಬಿರುಕುಬಿಡ್ತಿದೆ ಅಂತ ಈ ಹಿಂದೆ ವಿವಾದ ಹೊತ್ತಿತ್ತು. ಬಳಿಕ, ಸರ್ಕಾರ ಬೇಬಿ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆಗೆ ನಿಷೇಧ ಹೇರಿತ್ತು. ಆದ್ರೀಗ, ಗಣಿಗಾರಿಕೆಯಿಂದ ನಿಜಕ್ಕೂ ಡ್ಯಾಂಗೆ ಹಾನಿಯಾಗುತ್ತಾ ಅನ್ನೋದರ ಪರೀಕ್ಷೆಗಾಗಿ ಟ್ರಯಲ್ ಬ್ಲಾಸ್ಟ್ ನಡೆಸಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ಹೆಜ್ಜೆಯಿಂದ ರೈತರು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿ ನಿನ್ನೆ(ಜುಲೈ 25)ರಂದು ಪ್ರತಿಭಟನೆ ನಡೆಸಿದ್ದರು. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡ್ತಿರೋದಕ್ಕೆ ಪರ,ವಿರೋಧ ಜಟಾಪಟಿ ನಡೀತಿದೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸದಂತೆ ರಾಜವಂಶಸ್ಥೆ ಪ್ರಮೋದಾದೇವಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಬೇಬಿ ಬೆಟ್ಟದ 1600 ಎಕರೆ ಪ್ರದೇಶ, ರಾಜಮನೆತನಕ್ಕೆ ಸೇರಿದೆ. ಹಾಗಿ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಪತ್ರ ಬರೆದಿದ್ದಾರೆ.
ಇನ್ನು ಈ ವಿವಾದದ ಬಗ್ಗೆ ಮಾತನಾಡಿರುವ ಪ್ರಮೋದಾ ದೇವಿ ಒಡೆಯರ್, 1950ರ ಕಾಲದಿಂದ ಆ ಬೆಟ್ಟದ 1,650 ಎಕರೆ ಜಾಗ ನಮ್ಮದು. ಭಾರತ ಸರಕಾರದ ಜೊತೆ ಮೈಸೂರು ಸಂಸ್ಥಾನ ಮಾಡಿಕೊಂಡ ಆಸ್ತಿ ಹಂಚಿಕೆಯ ಪತ್ರದಲ್ಲಿ ಬೇಬಿ ಬೆಟ್ಟ ಇದೆ. ಇದು ಖಾಸಗಿ ಆಸ್ತಿ ಇದರಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಸರಿಯಲ್ಲ. ಟ್ರಯಲ್ ಬ್ಲಾಸ್ಟ್ ಗೆ ತಜ್ಞರು ಸರಕಾರಿ ಜಾಗ ಗುರುತಿಸಿಕೊಳ್ಳಬೇಕು. ಬೇಬಿ ಬೆಟ್ಟದ ಜಾಗವನ್ನು ಉದ್ದೇಶ ಪೂರ್ವಕವಾಗಿ ಬಿ ಖರಬ್ ಪಟ್ಟಿಗೆ ಸೇರಿಸಲಾಗಿತ್ತು. ಹೀಗಾಗಿ ಆ ಜಾಗದ ವಿಚಾರದಲ್ಲಿ ನಾನು ಕೋರ್ಟ್ ಗೆ ಹೋಗಿರಲಿಲ್ಲ. ಮೈಸೂರಿನ ಕುರುಬಾರಹಳ್ಳಿ ಬಿ ಖರಾಬ್ ಜಾಗದ ವಿವಾದದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರಮನೆಗೆ ಜಯವಾಗಿದೆ. ಆ ತೀರ್ಪು ಈ ಬೇಬಿ ಬೆಟ್ಟದ ಜಾಗಕ್ಕೂ ಅನ್ವಯವಾಗುತ್ತೆ. ಆ ಜಾಗ ನಮ್ಮ ವ್ಯಾಪ್ತಿಗೆ ಬಂದರೆ ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲ್ಲ.
ಸರ್ಕಾರಗಳು ರಾಜ ಮನೆತನಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ನಾವೇನೂ ಯಾರದೋ ಆಸ್ತಿ ಕಬಳಿಸಲು ಹೊರಟ್ಟಿದ್ದೇವೇ ಎಂಬ ರೀತಿ ಸರ್ಕಾರ ಯೋಚಿಸುತ್ತಿವೆ. ಇದು ನಮಗೆ ಸರ್ಕಾರಗಳು ಕೊಡುತ್ತಿರುವ ಕಿರುಕುಳ. ದೇಶದ ಬೇರೆ ಯಾವ ರಾಜಮನೆತನಗಳಿಗೂ ಆಸ್ತಿಯ ವಿಚಾರದಲ್ಲಿ ಅಲ್ಲಿನ ಸರಕಾರಗಳು ಇಷ್ಟು ತೊಂದರೆ ಕೊಟ್ಟಿಲ್ಲ. 10 ರೂಪಾಯಿ ಬೆಲೆ ಬಾಳುವುದನ್ನು 10 ಪೈಸೆಗೆ ತೆಗೆದು ಕೊಳ್ಳುವ ಮನಃಸ್ಥಿತಿ ಸರಕಾರ ಪ್ರದರ್ಶಿಸುತ್ತಿದೆ. ಸರ್ಕಾರಕ್ಕೆ ನಾನು ಧನ್ಯವಾದ ಹೇಳ್ತಿದ್ದಿನಿ. ಇವರಿಂದ ನನ್ನ ಕಾನೂನು ಜ್ಞಾನ ಹೆಚ್ಚಾಯ್ತು. ಬೇಬಿ ಬೆಟ್ಟದ ವಿಚಾರದಲ್ಲಿ ಈಗ ಕಾನೂನು ತಜ್ಞರ ಜೊತೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ. ನಾನು ಪ್ರತಿಭಟನೆ ಸ್ಥಳಕ್ಕೆ ಹೋಗುವುದಿಲ್ಲ. ಕೆಆರ್ಎಸ್ ಜಲಾಶಯದ ದೃಷ್ಟಿಯಿಂದ ಅಲ್ಲಿ ಗಣಿಗಾರಿಕೆಗೂ ಅವಕಾಶ ಕೊಡಬಾರದು. ಅಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಕೂಡ ಸರಿಯಲ್ಲ. ಬೇರೆ ಜಾಗದಲ್ಲಿ ಮಾಡಿ ಅದನ್ನು ಪರೀಕ್ಷೆ ಮಾಡಿಕೊಳ್ಳಲಿ ಎಂದರು.