ಮೈಸೂರು: ಮಹಾಮಾರಿ ಕೊರೊನಾ ಬಳಿಕ ಇದೀಗ ಕರ್ನಾಟಕ ರಾಜ್ಯದಲ್ಲಿ ಕೊರೊನಾದ ಮತ್ತೊಂದು ರೂಪಾಂತರ ಒಮಿಕ್ರಾನ್ ಆತಂಕ ಹುಟ್ಟಿಸಿದೆ. ಶರವೇಗದಲ್ಲಿ ಹರಡೋ ಈ ವೈರಸ್ ಭಾರತದಲ್ಲಿ ಸವಾರಿ ಶುರು ಮಾಡಿಲ್ಲ. ಆದ್ರೆ, ಈಗಿರುವ ಕೊರೊನಾವೇ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅಬ್ಬರಿಸುತ್ತಿದೆ. ಈ ಎರಡೂ ರಾಜ್ಯಗಳ ನಂಟಿನಿಂದಾಗಿ ರಾಜ್ಯದಲ್ಲೂ ಸೋಂಕಿನ ಸಂಖ್ಯೆ ನಿಧಾನಕ್ಕೆ ಹೆಚ್ಚಳವಾಗ್ತಿದೆ. ಇದ್ರಿಂದ ಎಚ್ಚೆತ್ತ ಸರ್ಕಾರ ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರವಹಿಸುತ್ತಿದೆ. ಗಡಿಯಲ್ಲಿ ಹೈ ಅಲರ್ಟ್ ಕೈಗೊಂಡಿದ್ದು ಆರ್ಟಿಪಿಸಿಆರ್ ಕಡ್ಡಾಯ ಮಾಡಿದೆ. ಇದೇ ಕಾರಣಕ್ಕೆ ಮೈಸೂರಿನ ಅಜ್ಜಿಯೊಬ್ಬರು ಗಡಿಯಲ್ಲಿ ಮೊಮ್ಮಗಳನ್ನು ತಪ್ಪಿ ಮುದ್ದಾಡಿ ಕೇರಳಕ್ಕೆ ಕಳಿಸಿದ ಅಪರೂಪದ ದೃಶ್ಯ ಕಂಡು ಬಂದಿದೆ.
ಕೇರಳಕ್ಕೆ ಹೋಗಿ ಬರಲು ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ಗಡಿಯಲ್ಲಿ ಮೊಮ್ಮಗಳನ್ನು ಮುದ್ದಾಡಿ ಮಹಿಳೆ ಕಳಿಸಿಕೊಡುವಂತ ಪರಿಸ್ಥಿತಿ ಬಂದಿದೆ. ಪುಣಾಣಿ ಮೊಮ್ಮಗಳು ಮೈಸೂರಿನಲ್ಲಿ ಅಜ್ಜಿ ಜೊತೆ ಅಜ್ಜಿ ಮನೆಯಲ್ಲಿದ್ದಳು. ಮೊಮ್ಮಗಳನ್ನು ಕೇರಳಕ್ಕೆ ಹೋಗಿ ಬಿಟ್ಟು ಬಂದರೆ ಆರ್ಟಿಪಿಸಿಆರ್ ರಿಪೋರ್ಟ್ ತೋರಿಸಬೇಕು. ಹೀಗಾಗಿ ಮಹಿಳೆ ತನ್ನ ಮಗಳು ಮತ್ತು ಅಳಿಯನನ್ನ ಕರ್ನಾಟಕ ಕೇರಳ ಗಡಿ ಭಾಗಕ್ಕೆ ಕರೆಸಿಕೊಂಡು ಮೊಮ್ಮಗಳನ್ನ ಗಡಿಯಲ್ಲೇ ಮುದ್ದುಮಾಡಿ ಮಗಳು ಮತ್ತು ಅಳಿಯನ ಜೊತೆ ಕಳಿಸಿದ್ದಾರೆ.
ಬಾವಲಿ ಚೆಕ್‌ಪೋಸ್ಟ್ನಲ್ಲಿ ತಪಾಸಣೆ
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‌ಪೋಸ್ಟ್ ಮೂಲಕ ಕೂಡಾ ಕೇರಳದಿಂದ ನಿತ್ಯ ಸಾವಿರಾರು ವಾಹನಗಳು ಬರುತ್ವೆ. ಹೀಗಾಗಿ ಇಲ್ಲಿಯೂ ಕಟ್ಟೆಚ್ಚರವಹಿಸಲಾಗಿದ್ದು, 72 ಗಂಟೆಯೊಳಗೆ ಮಾಡಿಸಿರೋ ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ಕೇರಳದವರನ್ನ ರಾಜ್ಯಕ್ಕೆ ಬಿಟ್ಟುಕೊಳ್ಳಲಾಗ್ತಿದೆ. ಆದ್ರೆ ನಿತ್ಯ ಸಂಚಿರಿಸೋ ಗೂಡ್ಸ್ ವಾಹನಗಳಿಗೆ 15 ದಿನಗಳ ರಿಲೀಫ್ ನೀಡಲಾಗಿದೆ. ಇನ್ನು ಚೆಕ್‌ಪೋಸ್ಟ್‌ಗೆ ಡಿಹೆಚ್‌ಒ ಕೂಡಾ ಭೇಟಿ ನೀಡಿ ಪರಿಶೀಲಿಸಿದ್ರು.
ಮೈಸೂರು ಜಿಲ್ಲೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಮೈಸೂರು ಉಸ್ತುವಾರಿ ಸಚಿವ S.T.ಸೋಮಶೇಖರ್ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದಾರೆ. ಚೆಕ್ಪೋಸ್ಟ್ಗಳಲ್ಲಿ ದಿನದ 24 ಗಂಟೆ ಶಿಫ್ಟ್ನಲ್ಲಿ ಕೆಲಸ ಮಾಡ್ಬೇಕು ಅಂತಾ ತಿಳಿಸಿದ್ದಾರೆ. ಇಷ್ಟೇ ಅಲ್ಲ, ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಪರೀಕ್ಷೆ ನಡೆಸುವಂತೆಯೂ ಜಿಲ್ಲಾಡಳಿತಕ್ಕೆ ಸೋಮಶೇಖರ್ ಸೂಚನೆ ನೀಡಿದ್ದಾರೆ.
ನೆಗೆಟಿವ್ ರಿಪೋರ್ಟ್ ಇದ್ರಷ್ಟೇ ರಾಜ್ಯಕ್ಕೆ ಎಂಟ್ರಿ
ಕೇರಳದ ಜೊತೆ ಅತೀ ಹೆಚ್ಚು ನಂಟಿರೋ ಜಿಲ್ಲೆ ಅಂದ್ರೆ ಅದು ದಕ್ಷಿಣ ಕನ್ನಡ. ಕೇರಳದ ವಿವಿಧೆಡೆಯಿಂದ ಮಂಗಳೂರಿಗೆ ನಿತ್ಯ ಸಾವಿರಾರು ಜನ ಬರ್ತಾರೆ. ಹೀಗಾಗಿ ದಕ್ಷಿಣ ಕನ್ನಡದ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ಬರೋರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದ್ದು, ರಿಪೋರ್ಟ್ ತೋರಿಸಿದವರನ್ನ ಮಾತ್ರ ರಾಜ್ಯದೊಳಗೆ ಬಿಟ್ಟುಕೊಳ್ಳಲಾಗ್ತಿದೆ.
ಇದನ್ನೂ ಓದಿ: Coronavirus: ಕೇರಳ, ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ಮೂವರಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ
Published On - 12:44 pm, Mon, 29 November 21