ಮೈಸೂರಿನಿಂದ ತಿರುಪತಿ ಪಾದಯಾತ್ರೆ ಹೊರಟವರಿಗೆ ಸಮಸ್ಯೆ; ಕೆರೆಯಂತಾದ ಕನ್ನಿಕಪ್ಪಮ್ಮ ರಸ್ತೆಯಿಂದ ಅವಂತಾರ

ಕನ್ನಿಕಪ್ಪಮ್ಮ ರಸ್ತೆ ಕೆರೆಯಂತಾಗಿದ್ದು, ತಿರುಪತಿಗೆ ಹೊರಟ ಪಾದಯಾತ್ರಿಗರು ಸಮಸ್ಯೆಗೆ ಸಿಲುಕಿದ್ದಾರೆ. ಒಬ್ಬರ ಕೈ ಹಿಡಿದು ಮತ್ತೊಬ್ಬರು ಸಾಗಬೇಕಾದ ಅನಿವಾರ್ಯತೆ ಎದುರಾಗಿದ್ದು, ಅಪಾಯದಲ್ಲೇ ಭಕ್ತರು ತಿರುಪತಿ ಪಾದಯಾತ್ರೆ ಮುಂದುವರಿಸಿದ್ದಾರೆ.

ಮೈಸೂರಿನಿಂದ ತಿರುಪತಿ ಪಾದಯಾತ್ರೆ ಹೊರಟವರಿಗೆ ಸಮಸ್ಯೆ; ಕೆರೆಯಂತಾದ ಕನ್ನಿಕಪ್ಪಮ್ಮ ರಸ್ತೆಯಿಂದ ಅವಂತಾರ
ಮಳೆ


ಮೈಸೂರು: ನೆರೆಯ ಆಂಧ್ರ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಸತತವಾಗಿ ಸುರಿಯುತ್ತಿರುವ ಮಳೆಗೆ ಆಂಧ್ರ ಜನರು ಕಂಗೆಟ್ಟಿದ್ದು, ಕಡಪಾ, ಚಿತ್ತೂರ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಹೀಗಿರುವಾಗ ಮೈಸೂರಿನಿಂದ ತಿರುಪತಿಗೆ ಪಾದಯಾತ್ರೆ ಹೊರಟವರಿಗೆ ಕೂಡ ಸಮಸ್ಯೆ ಎದುರಾಗಿದೆ. 10 ದಿನದ ಹಿಂದೆ ಮೈಸೂರಿನಿಂದ ಪಾದಯಾತ್ರೆ ಹೊರಟಿದ್ದರು. ಆದರೆ ಮಳೆ ಹಿನ್ನೆಲೆ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು, ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದೆ. ಹೀಗಾಗಿ ಪಾದಯಾತ್ರೆಗೆ ಹೊರಟವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಿಕಪ್ಪಮ್ಮ ರಸ್ತೆ ಕೆರೆಯಂತಾಗಿದ್ದು, ತಿರುಪತಿಗೆ ಹೊರಟ ಪಾದಯಾತ್ರಿಗರು ಸಮಸ್ಯೆಗೆ ಸಿಲುಕಿದ್ದಾರೆ. ಒಬ್ಬರ ಕೈ ಹಿಡಿದು ಮತ್ತೊಬ್ಬರು ಸಾಗಬೇಕಾದ ಅನಿವಾರ್ಯತೆ ಎದುರಾಗಿದ್ದು, ಅಪಾಯದಲ್ಲೇ ಭಕ್ತರು ತಿರುಪತಿ ಪಾದಯಾತ್ರೆ ಮುಂದುವರಿಸಿದ್ದಾರೆ.

ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಇನ್ನು ಕೆಲವರು ಪ್ರತಿ ವರ್ಷಕ್ಕೊಮ್ಮೆಯಾದರೂ ತಿರುಪತಿಗೆ ಹೋಗಿ ತಿಮ್ಮಪ್ಪನ‌ ದರ್ಶನ ಪಡೆಯುತ್ತಾರೆ. ಮತ್ತೆ ಕೆಲವರು ಪ್ರತಿ ವರ್ಷ ತಿರುಪತಿಗೆ ಪಾದಯಾತ್ರೆ ಮೂಲಕ ತೆರಳಿ ದೇವರ ದರ್ಶನ ಪಡೆಯುತ್ತಾರೆ‌. ಅದರಲ್ಲಿ ಮೈಸೂರಿನ ಬಿಇಎಂಎಲ್​ ಬಡಾವಣೆಯ ನಿವಾಸಿ ಮಂಜುನಾಥ್ ದಂಪತಿ ಸಹಾ ಒಬ್ಬರು. ಪ್ರತಿ ವರ್ಷ ಇವರು ಮೈಸೂರಿನಿಂದ ತಪ್ಪದೆ ತಿರುಪತಿಗೆ ಪಾದಯಾತ್ರೆ ಮಾಡುತ್ತಾರೆ.

ಈ ಬಾರಿಯೂ ಮಂಜುನಾಥ್ ದಂಪತಿ ತಿರುಪತಿಗೆ ಪಾದಯಾತ್ರೆ ಹೊರಟಿದ್ದರು. ಈ ಬಾರಿ ಇವರ ಪಾದಯಾತ್ರೆಗೆ ವರುಣ ಸಾಕಷ್ಟು ತೊಂದರೆ ನೀಡಿದ್ದಾನೆ. ಮಂಜುನಾಥ್ ಹಾಗೂ ಅವರ ಪತ್ನಿ ಜೊತೆಗೆ ಸುಮಾರು 20 ಜನರ ತಂಡ ಮೈಸೂರು ಬೆಂಗಳೂರಿನಿಂದ ಹೊರಟು ಇನ್ನೇನು ತಿರುಪತಿ ತಲುಪುವ ವೇಳೆಗೆ ಮಳೆಯಿಂದ ಸಮಸ್ಯೆಯುಂಟಾಗಿದೆ. ತಿರುಪತಿ ಸುತ್ತಮುತ್ತ ಉಂಟಾದ ಭಾರಿ ಮಳೆಯಿಂದಾಗಿ ಅಲ್ಲಿನ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ರಸ್ತೆಯಲ್ಲಿ ಮಳೆ ನೀರು ಹೊಳೆಯಂತೆ ಹರಿಯುತ್ತಿದೆ. ಅದರಲ್ಲೂ ಕನ್ನಿಕಪ್ಪಮ್ಮ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಸ್ತೆಯಲ್ಲೇ ಒಬ್ಬರ ಕೈ ಹಿಡಿದು ಮತ್ತೊಬ್ಬರು ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಅಪಾಯದಲ್ಲೇ ಇವರೆಲ್ಲಾ ತಿರುಪತಿ ಪಾದಯಾತ್ರೆ ಮುಂದುವರಿಸಿದ್ದಾರೆ. ಇಷ್ಟೆಲ್ಲಾ ಸಮಸ್ಯೆ ಎದುರಾದರೂ ತಿರುಪತಿ ತಿಮ್ಮಪ್ಪನ ದಯೆಯಿಂದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಇಂದು ಅಥವಾ ನಾಳೆ ಇವರೆಲ್ಲಾ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದಾರೆ.

ಭಯಂಕರ ಮಳೆಯಿಂದ ಆಂಧ್ರದಲ್ಲಿ ಪ್ರಾಣಕಳೆದುಕೊಂಡವರು 44 ಮಂದಿ
ಈ ಬಾರಿ ಮಳೆಯ ಆರ್ಭಟಕ್ಕೆ ತತ್ತರಿಸಿದ ರಾಜ್ಯಗಳಲ್ಲಿ ಆಂಧ್ರ ಪ್ರದೇಶವೂ ಒಂದು. ಭರ್ಜರಿ ಮಳೆಯಿಂದಾಗಿ ಅಲ್ಲಿ ಅಪಾರ ಹಾನಿಯಾಗಿದೆ. ಮೃತಪಟ್ಟವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. 16 ಮಂದಿ ನಾಪತ್ತೆಯಾಗಿದ್ದಾರೆ. ಈ ಮಧ್ಯೆ ನಿನ್ನೆ ಹೇಳಿಕೆ ಬಿಡುಗಡೆ ಮಾಡಿರುವ ಆಂಧ್ರ ಸಿಎಂ ವೈ.ಎಸ್.ಜಗನ್​ ರೆಡ್ಡಿ, ಆಂಧ್ರದ ನಾಲ್ಕು ಜಿಲ್ಲೆಗಳಲ್ಲಿ ಮಳೆಯಿಂದಾದ ಹಾನಿಯ ಬಗ್ಗೆ ಮತ್ತು ಮಳೆ-ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾದವರಿಗೆ ಆಂಧ್ರ ಸರ್ಕಾರ ನೀಡಲಿರುವ ಪರಿಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಯಲ್​ಸೀಮಾ, ಕಡಪಾ ಮತ್ತು ಅನಂತಪುರ ಮತ್ತು ನೆಲ್ಲೋರ್​​ ಜಿಲ್ಲೆಗಳಲ್ಲಿ ಊಹಿಸಲೂ ಸಾಧ್ಯವಾಗದಷ್ಟು ಮಳೆಯಾಗಿದೆ. ನವೆಂಬರ್​ 16-17ರಿಂದ ಶುರುವಾದ ಮಳೆ ನಿರಂತರವಾಗಿ ಇವತ್ತಿನವರೆಗೂ ಬೀಳುತ್ತಲೇ ಇದೆ. ಆಂಧ್ರದಲ್ಲಿ ಹಿಂದೆಂದೂ ಕಂಡಿರದಷ್ಟು ಮಳೆಯಾಗಿದೆ. ರಾಯಲ್​ಸೀಮಾ ಮುಳುಗಿತ್ತು. ತಿರುಪತಿಯ ತಿರುಮಲದಲ್ಲಂತೂ ಪ್ರವಾಹದ ರಭಸಕ್ಕೆ ವಾಹನಗಳೆಲ್ಲ ಕೊಚ್ಚಿಕೊಂಡು ಹೋದವು ಎಂದು ಜಗನ್​ ಹೇಳಿದ್ದಾರೆ.

ನವೆಂಬರ್​ 19ರಂದು ಅಣ್ಣಮ್ಮಯ್ಯ ಜಲಾಶಯದ ಒಳಹರಿವು 3.2 ಕ್ಯೂಸೆಕ್ಸ್​​ಆಗಿತ್ತು. ಆಗ ಹೊರಹರಿವು ಕೇವಲ 2.17 ಕ್ಯೂಸೆಕ್ಸ್​ ಇತ್ತು. ಹೀಗಾಗಿ ಇದು ಹಲವು ಸ್ವರೂಪದ ಹಾನಿಗಳನ್ನುಂಟುಮಾಡಿತು. ಹಾಗೇ, ಪಿಂಚಾ ಡ್ಯಾಂನ ಒಳಹರಿವು 1.38ಕ್ಯೂಸೆಕ್ಸ್​​ಗೂ ಮೀರಿದ ಪರಿಣಾಮ ಅದರಿಂದಲೂ ಸಮಸ್ಯೆಯುಂಟಾಯಿತು.  ಅದರಲ್ಲೂ ಕಳೆದ 50 ವರ್ಷದಲ್ಲಿ ಅಣ್ಣಮ್ಮಯ್ಯ ಜಲಾಶಯ ಇಷ್ಟು ದೊಡ್ಡ ಪ್ರಮಾಣದಲ್ಲಿ ಒಳಹರಿವು ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಹಾಗೇ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಜಗನ್​ ರೆಡ್ಡಿ, ಮಳೆಯಿಂದ ವಿದ್ಯುತ್​ ಸಂಪರ್ಕ ಕಳೆದುಕೊಂಡಿದ್ದ ನಾಲ್ಕು ಜಿಲ್ಲೆಗಳಿಗೆ ಪುನಃ ವಿದ್ಯುತ್​ ಸಂಪರ್ಕ ಕಲ್ಪಿಸಲಾಗಿದೆ. ಹಾಗೇ 104 ನಂಬರ್​​ನ್ನು ಸಹಾಯವಾಣಿಯಾಗಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:
ಮೈಸೂರು: ಕೇರಳದಲ್ಲಿ ನೊರೊ ವೈರಸ್ ಪತ್ತೆ, ಕರ್ನಾಟಕದಲ್ಲಿ ಕಟ್ಟೆಚ್ಚರ; ಬಾವಲಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ

Karnataka Dams Water Level: ಮಳೆಯಿಂದ ಡ್ಯಾಂಗಳು ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

 


Published On - 9:44 am, Tue, 30 November 21

Click on your DTH Provider to Add TV9 Kannada