ಮೈಸೂರು: ಕೇರಳದಲ್ಲಿ ನೊರೊ ವೈರಸ್ ಪತ್ತೆ, ಕರ್ನಾಟಕದಲ್ಲಿ ಕಟ್ಟೆಚ್ಚರ; ಬಾವಲಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ
ಕೇರಳದಲ್ಲಿ ನೊರೊ ವೈರಸ್ ಪತ್ತೆಯಾಗಿದ್ದು, ಕರ್ನಾಟಕದ ಗಡಿ ಗ್ರಾಮ ಬಾವಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೇ ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು, ಇಂದು ಸಂಜೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ.
ಕೇರಳದಲ್ಲಿ ನೊರೊ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಸದ್ಯ ಗಡಿಯಲ್ಲಿ ಮನೆ ಮನೆಗೆ ತೆರಳಿ ಸರ್ವೆ ನಡೆಸುತ್ತಿದ್ದಾರೆ. ಸದ್ಯ ಕೇರಳದ ವಯನಾಡಿನಲ್ಲಿ 13 ಪ್ರಕರಣ ಪತ್ತೆಯಾಗಿದ್ದು, ಕೇರಳದಿಂದ ಬಂದಿರುವವರ ಬಗ್ಗೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಕೇರಳದಿಂದ ಬಂದು ವಾಂತಿ ಭೇದಿ ಕಾಣಿಸಿಕೊಂಡರೆ ಅಂತವರು ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ನೊರೊ ವೈರಸ್ ಲಕ್ಷಣ ಹಾಗೂ ಎಚ್ಚರಿಕೆ ವಹಿಸುವುದರ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಆನೇಕಲ್ ಸುತ್ತಮುತ್ತ ಕೊರೊನಾ ಹೆಚ್ಚಳ; ಜಿಲ್ಲಾಧಿಕಾರಿ ಭೇಟಿ ಬೆಂಗಳೂರು: ಆನೇಕಲ್ ಸುತ್ತಮುತ್ತ ಕೊವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮರಸೂರು ಬಳಿ ಇರುವ ಸ್ಫೂರ್ತಿ ನರ್ಸಿಂಗ್ ಕಾಲೇಜಿಗೆ ಜಿಲ್ಲಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದಾರೆ. ನಂತರ ಮಾತನಾಡಿದ ಅವರು, ‘‘ಎರಡು ದಿನಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿವೆ. ಸ್ಫೂರ್ತಿ ಕಾಲೇಜಿನಲ್ಲಿ 168 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಆ ಪೈಕಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಬಳಿಕ ಎಲ್ಲರಿಗೂ ಕೊವಿಡ್ ಟೆಸ್ಟ್ ಮಾಡಲಾಗಿದೆ. ಎಲ್ಲರನ್ನೂ ಟೆಸ್ಟ್ ಮಾಡಿದ ಬಳಿಕ 9 ಜನರಿಗೆ ದೃಢಪಟ್ಟಿದೆ. ಇಂಟರ್ನ್ಯಾಷನ್ ಸ್ಕೂಲ್ನಲ್ಲೂ 34 ಕೇಸ್ ಪತ್ತೆಯಾಗಿದ್ದು, ಆ ಬೋರ್ಡಿಂಗ್ ಶಾಲೆ ಬಂದ್ ಮಾಡಿದ್ದೇವೆ. ಸೋಂಕಿತ ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಬಂದವರೆಲ್ಲರೂ ಬಿಎಸ್ಸಿ ವಿದ್ಯಾರ್ಥಿಗಳಾಗಿದ್ದು, ಎಲ್ಲರೂ 2 ಡೋಸ್ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. 85 ವಿದ್ಯಾರ್ಥಿಗಳು ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಆನೇಕಲ್ ಸೆನ್ಸಿಟಿವ್ ಪ್ರದೇಶವಾಗಿದ್ದು, ಹಾಗಾಗಿ ಖಾಸಗಿ ಹಾಸ್ಟೆಲ್, ಬೋರ್ಡಿಂಗ್ ಶಾಲೆಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ’’ ಎಂದು ಹೇಳಿದ್ದಾರೆ.
ಕೊರೊನಾ ಹೊಸ ರೂಪಾಂತರಿ ಹಿನ್ನೆಲೆ; ಕಟ್ಟೆಚ್ಚರ ವಹಿಸುವಂತೆ ಸೂಚನೆ: ಕೊರೊನಾ ಹೊಸ ರೂಪಾಂತರಿ ತಳಿ ಒಮಿಕ್ರಾನ್ (B.1.1529) ಪತ್ತೆ ಹಿನ್ನೆಲೆಯಲ್ಲಿ, ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಹೊಸ ತಳಿ ಹೆಚ್ಚು ವೇಗವಾಗಿ ಹರಡಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿರುವುದರಿಂದ ಹೈ ಅಲರ್ಟ್ ಘೋಷಿಸಲಾಗಿದೆ. ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ತೀವ್ರಗೊಳಿಸುವ ಬಗ್ಗೆ ತಜ್ಞರು ಎಚ್ಚರಿಸಿದ್ದು, ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಹಾಂಗ್ಕಾಂಗ್, ದಕ್ಷಿಣ ಆಫ್ರಿಕಾ, ಬೋಟ್ಸವಾನಾ ದೇಶಗಳಿಂದ ಬರುವವರಿಗೆ ಕಡ್ಡಾಯ ಟೆಸ್ಟ್, ಸ್ಕ್ರೀನಿಂಗ್ ಹಾಗೂ ಟ್ರಾಕಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ. ವಿದೇಶಗಳಿಂದ ಬಂದವರಲ್ಲಿ ಪಾಸಿಟಿವ್ ಕಂಡುಬಂದರೆ ಸ್ಯಾಂಪಲ್‌ಗಳನ್ನು ಸೀಕ್ವೆನ್ಸಿಂಗ್ ಮಾಡುವಂತೆ ಸಲಹೆ ನೀಡಲಾಗಿದೆ.
ಇಂದು ಸಿಎಂ ಬೊಮ್ಮಾಯಿ ಸಭೆ: ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಸಂಬಂಧ ಇಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯ ನಂತರ ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಘೋಷಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:
Norovirus ಕೇರಳದ ವಯನಾಡಿನಲ್ಲಿ ನೊರೊವೈರಸ್ ಪತ್ತೆ: ಏನಿದರ ರೋಗಲಕ್ಷಣ, ತಡೆಗಟ್ಟುವ ಕ್ರಮಗಳೇನು?
ದೇಶಕ್ಕೀಗ ಒಮಿಕ್ರಾನ್ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ