ಮೈಸೂರು: ಇವರು ಪಕ್ಷದಿಂದ ಹೊರಗೆ ಹಾಕುತ್ತಿದ್ದಾರಾ? ಅಥವಾ ನಾನು ಹೊರಗೆ ಹೋಗುತ್ತಿದ್ದೇನಾ ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನಿಸಿದರು. ಕಾರ್ಯಕರ್ತರ ತೇಜೋವಧೆ ಮಾಡುವ ಕೆಲಸವನ್ನು ಯಾರೂ ಮಾಡಬಾರದು. ನನ್ನ ತಪ್ಪಿದ್ದರೆ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆದ ನಂತರ ಅನೇಕ ನಾಯಕರು ಪಕ್ಷ ತೊರೆದಿದ್ದಾರೆ. ಈ ಬಗ್ಗೆ ಉನ್ನತ ನಾಯಕತ್ವವು ಒಂದೇ ಒಂದು ಸಭೆ ನಡೆಸಿಲ್ಲ. ಹೋದವರೆಲ್ಲಾ ಹೋಗಲಿ ಫುಟ್ಪಾತ್ ಎನ್ನುವ ಧೋರಣೆಗೆ ಬಂದಿದ್ದಾರೆ. ಸಿದ್ದರಾಮಯ್ಯ, ದೇಶಪಾಂಡೆ, ಸೇರಿದಂತೆ ಅನೇಕರು ಪಕ್ಷ ಬಿಟ್ಟಿದ್ದಾರೆ. ಅವರೆಲ್ಲಾ ಪುಟ್ಪಾತ್ ಆಗಿದ್ದಾರಾ? ನಂಜನಗೂಡು ದೇವಸ್ಥಾನದ ಮುಂದೆ ಭಿಕ್ಷಾ ಪಾತ್ರೆ ಹಿಡಿದಿದ್ದಾರಾ ಎಂದು ಮರಿತಿಬ್ಬೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಭಿಮಾನ ಬಿಟ್ಟುಕೊಟ್ಟು ಗುಲಾಮನಾಗಿ ಕೆಲಸ ಮಾಡಲು ನಾನು ಸಿದ್ಧನಿಲ್ಲ. ನಾನು ಬೇರೆ ಪಕ್ಷಕ್ಕೆ ಹೋಗುವುದೂ ಇಲ್ಲ, ಯಾವುದೇ ಪಕ್ಷದ ನಾಯಕರ ಸಂಪರ್ಕದಲ್ಲಿಯೂ ನಾನು ಇಲ್ಲ. ನಾನು ಪಕ್ಷ ಬಿಡುವುದು ಖಚಿತ. ಇನ್ನು ಮುಂದೆ ಜೆಡಿಎಸ್ ಪಕ್ಷದಿಂದ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ಶಿವನ ಆಣೆಯಾಗಿ ಕೀಲಾರ ಜಯರಾಮ್‌ಗೆ ಟಿಕೆಟ್ ಕೊಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಹೇಳಿದ್ದರು. ಅವರ ಮಾತಿಗೇ ಪಕ್ಷದಲ್ಲಿ ಬೆಲೆ ಇಲ್ಲ. ಕುಮಾರಸ್ವಾಮಿಗೆ ನಾಯಕತ್ವ ನೀಡಿದ ನಂತರ ಪಕ್ಷವು ಸೊರಗಿದೆ. ಕೀಲಾರ ಜಯರಾಮ್ ಅವರನ್ನು ಎಂಎಲ್‌ಸಿ ಮಾಡಿದರೂ ನಾನು ಪಕ್ಷದಲ್ಲಿ ಉಳಿಯುವುದಿಲ್ಲ. ನಾನು ಈ ಪದವೀಧರರ ಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ. ಜೆಡಿಎಸ್ ಅಭ್ಯರ್ಥಿ ರಾಮು ಪರ ಮತ ಕೇಳುವುದಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಕೊಡುತ್ತಿದ್ದಾರೆ ಎಂದು ಈ ಮೊದಲು ಹೇಳಿದ್ದೆ. ಆದರೆ ಹಣ ಪಡೆದು ಟಿಕೆಟ್ ಕೊಡುತ್ತಾರೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಹಾಗೆ ಹೇಳಿದ್ದರೆ ಅದನ್ನು ಸಾಬೀತುಪಡಿಸಲಿ, ನಂತರ ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಈ ಮೊದಲು ನಿಜವಾಗಿಯೇ ಏನು ಹೇಳಿದ್ದೇನೋ, ಅದಕ್ಕೆ ಬದ್ಧನಾಗಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಪದವೀಧರರ ಕ್ಷೇತ್ರಕ್ಕೆ ದುಡ್ಡಿರುವ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಲಾಗಿದೆ. ಕೀಲಾರ ಜಯರಾಮ್ ಬಳಿ ಹಣ ಇಲ್ಲ ಎನ್ನುವ ಕಾರಣಕ್ಕೇ ಟಿಕೆಟ್ ನಿರಾಕರಿಸಲಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಸಹ ಹಿಂದೆ ಇದನ್ನೇ ಹೇಳಿದ್ದಾರೆ ಎಂದು ಹೇಳಿದರು.
ಸೂಟ್ಕೇಸ್ ಇದ್ದವರಿಗೆ ಮುಂದಿನ ಸಾಲು. ಸೂಟ್ ಕೇಸ್ ಇಲ್ಲದವರಿಗೆ ಹಿಂದಿನ ಸಾಲು. ಸೂಟ್ಕೇಸ್ ಇರುವವರಿಗೆ ಮಣೆ ಹಾಕುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಸಹ ಹೇಳಿದ್ದರು. ಆಗ ಯಾರು ಈ ಬಗ್ಗೆ ಚಕಾರ ಎತ್ತಲಿಲ್ಲ. ಈಗ ನಾನು ಹೇಳದ ಮಾತಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪಕ್ಷಕ್ಕೆ ಮರಿತಿಬ್ಬೇಗೌಡ ಕೊಡುಗೆ ಏನು ಎಂಬ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ ನಾನು. ಪಕ್ಷದ ಬಂಟಿಂಗ್ ಬ್ಯಾನರ್ ಕಟ್ಟಿ ಎಲ್ಲ ಚುನಾವಣೆಗಳಲ್ಲಿಯೂ ಶ್ರಮಿಸಿದ್ದೇನೆ ಎಂದು ನುಡಿದರು.
ಮತ್ತಷ್ಟು ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Tue, 17 May 22