
ಬೆಂಗಳೂರು/ಮೈಸೂರು, ಅಕ್ಟೋಬರ್ 01: ನೈಋತ್ಯ ಮುಂಗಾರು ಬುಧವಾರ ಅಂತ್ಯಗೊಂಡಿದ್ದು, ಕರ್ನಾಟಕದಲ್ಲಿ ಮಳೆ ಕೊರತೆ ಶೇ.35ರಷ್ಟು ದಾಖಲಾಗಿದೆ. ಇದರಿಂದ 150 ವರ್ಷಗಳ ಇತಿಹಾಸದಲ್ಲೇ ರಾಜ್ಯವು ಅತ್ಯಂತ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ 551 ಮಿ.ಮೀ. ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.36 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.31ರಷ್ಟು ಮಳೆ ಕೊರತೆ ದಾಖಲಾಗಿದೆ.
ಕಳೆದ ವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ್ದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಜಿ. ಪರಮೇಶ್ವರ್ ಅವರು ರಾಜ್ಯದ ಮಳೆ ಕೊರತೆ ಶೇ.35ರಷ್ಟಿದೆ ಎಂದು ತಿಳಿಸಿದ್ದರು. ಆದರೆ ರಾಜ್ಯದ ಹಲವು ಭಾಗಗಳಲ್ಲಿ ಒಂದು ವಾರ ಮಳೆಯಾಗಿದ್ದರೂ ಕೊರತೆಯಲ್ಲಿ ಹೆಚ್ಚಿನ ಇಳಿಕೆಯಾಗಿಲ್ಲ. ಜಿಲ್ಲಾವಾರು ಪಟ್ಟಿಯಲ್ಲಿ ಮಾತ್ರ ಬದಲಾವಣೆಯಾಗಿದೆ. ಕಳೆದ ವಾರ ಅತೀ ಹೆಚ್ಚು ಕೊರತೆಯೊಂದಿಗೆ ವಿಜಯನಗರ ಜಿಲ್ಲೆ ಅತಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿದ್ದರೆ, ಇದೀಗ ವಿಜಯನಗರವನ್ನು ಹಿಂದಿಕ್ಕಿರುವ ಮೈಸೂರು ಜಿಲ್ಲೆಯಲ್ಲಿ ಶೇ.59ರಷ್ಟು ಕೊರತೆ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಪ್ರಕಾರ, ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲೂ ಮಳೆ ಕೊರತೆ ಮುಂದುವರಿದಿದೆ. ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆ ಮಾತ್ರ ಇದಕ್ಕೆ ಹೋಲಿಸಿದರೆ ಕೊಂಚ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿ ಋತುಮಾನದ ಮಳೆ ವಾಡಿಕೆಯ ಪ್ರಮಾಣಕ್ಕೆ ಸಮೀಪದಲ್ಲಿದ್ದು, ಶೇ.18ರಷ್ಟು ಕೊರತೆ ದಾಖಲಾಗಿದೆ. ಕಳೆದ ನಾಲ್ಕು ತಿಂಗಳ ಮುಂಗಾರು ಅವಧಿಯಲ್ಲಿ ಪ್ರತಿ ತಿಂಗಳ ಮಳೆ ಕೊರತೆ ಒಟ್ಟಾರೆ ಸರಾಸರಿ ಕೊರತೆಗೆ ಹತ್ತಿರದಲ್ಲೇ ಉಳಿದಿದೆ. ಜೂನ್‌ನಲ್ಲಿ ಶೇ.42, ಜುಲೈನಲ್ಲಿ ಶೇ.29 ಹಾಗೂ ಆಗಸ್ಟ್‌ನಲ್ಲಿ ಶೇ.23ರಷ್ಟು ಕೊರತೆ ದಾಖಲಾಗಿತ್ತು. ಆದರೆ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಕಡಿಮೆಯಾಗಬಹುದು ಮತ್ತು ನೀರಿನ ಸಮಸ್ಯೆ ತಗ್ಗಬಹುದು ಎಂಬ ರಾಜ್ಯ ಸರ್ಕಾರದ ನಿರೀಕ್ಷೆಗೆ ವಿರುದ್ಧವಾಗಿ, ಮುಂಗಾರು ಕೊನೆಯ ತಿಂಗಳಲ್ಲಿ ಶೇ.54ರಷ್ಟು ಕೊರತೆ ದಾಖಲಾಗಿದೆ.
ಮಾಹಿತಿಯ ಪ್ರಕಾರ, ರಾಜ್ಯದ ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.42ರಷ್ಟು ಮತ್ತು ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ.41ರಷ್ಟು ಕೊರತೆ ದಾಖಲಾಗಿದೆ. ಕೊಡಗು, ಶಿವಮೊಗ್ಗ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಮಲೆನಾಡು ಪ್ರದೇಶದಲ್ಲಿ ಶೇ.38ರಷ್ಟು ಕೊರತೆ ದಾಖಲಾಗಿದ್ದರೆ, ಕರಾವಳಿ ಕರ್ನಾಟಕದಲ್ಲಿ ಶೇ.28ರಷ್ಟು ಕಡಿಮೆ ಮಳೆಯಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.