ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಉಲ್ಬಣ: ತುರ್ತು ಪರಿಹಾರ ಕೋರಿ ಕೇಂದ್ರ ಸಚಿವರಾದ ಅಮಿತ್ ಶಾ, ಶಿವರಾಜ್ಸಿಂಗ್ ಚೌಹಾಣ್ಗೆ ಡಿಸಿಎಂ ಪರಮೇಶ್ವರ್ ಪತ್ರ
ಕರ್ನಾಟಕದಲ್ಲಿ ಭೀಕರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ 177 ತಾಲೂಕುಗಳಲ್ಲಿ 27,576 ಕೋಟಿ ರೂ. ಬೆಳೆ ಹಾನಿಯಾಗಿದ್ದು, ರಾಜ್ಯಕ್ಕೆ 7,142 ಕೋಟಿ ರೂ. ತುರ್ತು ಎನ್‌ಡಿಆರ್‌ಎಫ್ ನೆರವು ಕೋರಿ ಕೇಂದ್ರ ಸಚಿವರಿಗೆ ಡಿಸಿಎಂ ಪರಮೇಶ್ವರ್ ಪತ್ರ ಬರೆದಿದ್ದಾರೆ. ರೈತರಿಗೆ ನೀಡಲಾಗುವ ಪರಿಹಾರವು ಇಂದಿನ ಕೃಷಿ ವೆಚ್ಚ ಹಾಗೂ ಅವರು ಅನುಭವಿಸಿರುವ ನೈಜ ನಷ್ಟಕ್ಕೆ ಅನುಗುಣವಾಗಿರಬೇಕು. ಹೀಗಾಗಿ ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿ ಸೇರಿದಂತೆ SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 01: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಡಿಸಿಎಂ ಡಾ.ಜಿ. ಪರಮೇಶ್ವರ್, ರಾಜ್ಯಕ್ಕೆ ತುರ್ತು ನೆರವು ಒದಗಿಸುವಂತೆ ಮನವಿ ಮಾಡಿದ್ದಾರೆ. ತೀವ್ರ ಮಳೆಯ ಅಭಾವದ ಕಾರಣ ಕರ್ನಾಟಕದಲ್ಲಿ ಈಗಾಗಲೇ 177 ತಾಲೂಕುಗಳನ್ನು ಬರ ಪೀಡಿತ ಎಂದು ಅದಾಗಲೇ ಘೋಷಿಸಿರೋದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಡಿಸಿಎಂ ಪರಮೇಶ್ವರ್ ಪತ್ರದಲ್ಲಿ ಏನಿದೆ?
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಹಾಗೂ ಕೇಂದ್ರ ಕೃಷಿ ಸಚಿವರಾದ ಶ್ರೀ @ChouhanShivraj ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಕರ್ನಾಟಕಕ್ಕೆ ತುರ್ತು ನೆರವು ಒದಗಿಸುವಂತೆ ಕೋರಿದ್ದೇನೆ.
ರಾಜ್ಯ ಸರ್ಕಾರವು ಈಗಾಗಲೇ 101 ಬರಪೀಡಿತ ತಾಲ್ಲೂಕುಗಳಿಗೆ… pic.twitter.com/KL5uyGOmit
— Dr. G Parameshwara (@DrParameshwara) October 1, 2026
ರಾಜ್ಯ ಸರ್ಕಾರವು ಈಗಾಗಲೇ 101 ಬರಪೀಡಿತ ತಾಲೂಕುಗಳಿಗೆ 3,705.30 ಕೋಟಿ ರೂ. ಹಣಕಾಸು ನೆರವು ಕೋರಿ ಖಾರಿಫ್–2026 ಬರ ಪರಿಹಾರ ಮೆಮೊರಾಂಡಮ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಮುಂದಿನ ವೈಜ್ಞಾನಿಕ ಮೌಲ್ಯಮಾಪನದ ಬಳಿಕ ಹೆಚ್ಚುವರಿಯಾಗಿ 76 ತಾಲೂಕುಗಳನ್ನು ಎರಡನೇ ಹಂತದಲ್ಲಿ ಬರಪೀಡಿತವೆಂದು ಘೋಷಿಸಲಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಇನ್ನೂ 40 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ನಿರಂತರ ಮೌಲ್ಯಮಾಪನದ ಆಧಾರದ ಮೇಲೆ ಮುಂಗಾರು ಅಂತ್ಯದ ವೇಳೆಗೆ ಇವುಗಳ ಸಂಖ್ಯೆ 220 ದಾಟುವ ಸಾಧ್ಯತೆ ಇದೆ.
ಇದನ್ನೂ ಓದಿ: ವರದಾ-ಬೇಡ್ತಿ ನದಿ ಜೋಡಣೆ: ವಿವಾದದ ನಡುವೆಯೂ ಯೋಜನೆ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಬೊಮ್ಮಾಯಿ ಪತ್ರ
ಹೊಸದಾಗಿ ಘೋಷಿಸಲಾದ 76 ಬರಪೀಡಿತ ತಾಲೂಕುಗಳಲ್ಲಿ ನಡೆಸಿದ ಬೆಳೆಹಾನಿ ಮೌಲ್ಯಮಾಪನದಲ್ಲಿ 26.08 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 1.49 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಹಾನಿಯ ಪ್ರಮಾಣ ಶೇ.33ರಿಂದ ಶೇ.100ರವರೆಗೆ ಇದ್ದು, ಈ ಬರಪೀಡಿತ ಪ್ರದೇಶಗಳಲ್ಲಿ ಬಹುಪಾಲು ಶೇ.50ಕ್ಕಿಂತ ಹೆಚ್ಚು ಬೆಳೆಹಾನಿ ದಾಖಲಾಗಿದೆ. ಒಟ್ಟಾರೆ 27.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ದಾಖಲಾಗಿದ್ದು, ಬೆಳೆ ಬೆಳೆಯುವ ವೆಚ್ಚದ ಆಧಾರದ ಮೇಲೆ 27,576.2 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ಪ್ರಸ್ತುತ SDRF ಮಾನದಂಡಗಳ ಪ್ರಕಾರ ಇನ್‌ಪುಟ್ ಸಬ್ಸಿಡಿಗೆ 2,981.34 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆ 177 ಬರಪೀಡಿತ ತಾಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಆರ್ಥಿಕ ನಷ್ಟ 46,324.5 ಕೋಟಿಗೆ ರೂ.ಗೆ ತಲುಪಿದೆ. ನಿರಂತರ ಮೌಲ್ಯಮಾಪನದ ಪ್ರಕಾರ 2026ರ ಖಾರಿಫ್ ಅವಧಿಯಲ್ಲಿ ಒಟ್ಟಾರೆ ಬೆಳೆಹಾನಿ 55 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಈ ಎರಡು ಹಂತಗಳ ಬರ ಘೋಷಣೆಯ ಮೂಲಕ ಎನ್‌ಡಿಆರ್‌ಎಫ್ ನಿಯಮಗಳಡಿ 7142.64 ಕೋಟಿ ರೂ. ಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ. ಇದರಲ್ಲಿ 4998.6 ಕೋಟಿ ರೂ. ಇನ್‌ಪುಟ್ ಸಬ್ಸಿಡಿಗಾಗಿ ಮತ್ತು 2144.04 ಕೋಟಿ ರೂ. ಮೇವು ಮತ್ತು ಕುಡಿಯುವ ನೀರು ಮುಂತಾದವುಗಳಿಗಾಗಿ ಕೇಳಲಾಗಿದೆ.
SDRF/NDRF ಪರಿಹಾರ ಮಾನದಂಡ ಪರಿಷ್ಕರಣೆಗೆ ಆಗ್ರಹ
ರೈತರಿಗೆ ನೀಡಲಾಗುವ ಪರಿಹಾರವು ಇಂದಿನ ಕೃಷಿ ವೆಚ್ಚ ಹಾಗೂ ಅವರು ಅನುಭವಿಸಿರುವ ನೈಜ ನಷ್ಟಕ್ಕೆ ಅನುಗುಣವಾಗಿರಬೇಕು. ಈ ಹಿನ್ನೆಲೆಯಲ್ಲಿ, ವಿಶೇಷವಾಗಿ ರೈತರಿಗೆ ನೀಡುವ ಇನ್‌ಪುಟ್ ಸಬ್ಸಿಡಿ ಸೇರಿದಂತೆ SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿರೋದಾಗಿ ಪರಮೇಶ್ವರ್ ತಿಳಿಸಿದ್ದಾರೆ. ಅದೇ ರೀತಿ, ಕೇಂದ್ರದ ಬರ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಕರ್ನಾಟಕಕ್ಕೆ ಅಗತ್ಯ ನೆರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿರೋದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:02 pm, Thu, 1 October 26




