ಕೆಂಪೇಗೌಡರ ಜಯಂತಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಡಿ.ಕೆ ಶಿವಕುಮಾರ ಮತ್ತು ಕುಮಾರಸ್ವಾಮಿ

TV9 Web
| Updated By: ವಿವೇಕ ಬಿರಾದಾರ

Updated on:Jul 19, 2022 | 5:17 PM

ನಾನು, ಡಿಕೆ ಶಿವಕುಮಾರ ಎರಡನೇ ಬಾರಿಗೆ ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದು, ಈ ಮೊದಲು 2017ರಲ್ಲಿ ಚಿಕ್ಕಮಾದು ಇದ್ದಾಗ ಡಿಕೆಶಿ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​. ಡಿ ಕುಮರಾಸ್ವಾಮಿ  ಹೆಚ್.ಡಿ.ಕೋಟೆಯಲ್ಲಿ ಹೇಳಿದ್ದಾರೆ.

ಮೈಸೂರು: ನಾನು, ಡಿಕೆ ಶಿವಕುಮಾರ (DK Shivakumar) ಎರಡನೇ ಬಾರಿಗೆ ಒಂದೇ ವೇದಿಕೆಯಲ್ಲಿ ಭಾಗಿಯಾಗಿದ್ದು, ಈ ಮೊದಲು 2017ರಲ್ಲಿ ಚಿಕ್ಕಮಾದು ಇದ್ದಾಗ ಡಿಕೆಶಿ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​. ಡಿ ಕುಮರಾಸ್ವಾಮಿ (HD Kumarswamy)  ಹೆಚ್.ಡಿ.ಕೋಟೆ (HD Kote) ಯಲ್ಲಿ ಹೇಳಿದ್ದಾರೆ. ಮೈಸೂರು (Mysore) ಜಿಲ್ಲೆಯ ಹೆಚ್.ಡಿ.ಕೋಟೆಯಲ್ಲಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಕೆಂಪೇಗೌಡರ ಕಾಲದ ಸಾವಿರಾರು ಕೆರೆಗಳು ಮಾಯವಾಗಿವೆ ಎಂದರು.

ಭೂದಾಹಿಗಳ ದುರಾಸೆಯಿಂದಾಗಿ ಕೆರೆಗಳು ನಾಶವಾಗಿವೆ. ಆಡಳಿತ ನಡೆಸಿದವರು ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಬೆಂಗಳೂರಿನಲ್ಲಿ ಶ್ರೀಮಂತಿಕೆ ಮತ್ತು ಬಡತನ ಎರಡೂ ಇದೆ. ಬೆಂಗಳೂರಿನ ಆದಾಯ ರಾಜ್ಯದ ಅಭಿವೃದ್ಧಿಗೆ ವಿನಿಯೋಗವಾಗಬೇಕು ಇದೆಲ್ಲ ಕೆಂಪೇಗೌಡ ವಂಶಸ್ಥರ ದೂರದೃಷ್ಟಿಯಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.

ಭಾಗ್ಯಲಕ್ಷ್ಮಿ ಖಜಾನೆಯಲ್ಲಿ ತುಂಬಿ ತುಳುಕುತ್ತಿದ್ದಾಳೆ. ಆದರೆ ಅದನ್ನು ಹೇಗೆ ಬಳಸಬೇಕು ಎಂಬ ಹೃದಯವೈಶಾಲ್ಯತೆ ನಮ್ಮಂತಹ ರಾಜಕಾರಣಿಗಳಿಗೆ ಇಲ್ಲ.ಒಂದು ಕಡೆ ಬೆಂಗಳೂರು ನಗರ ಅಭಿವೃದ್ಧಿ ಹೆಸರಲ್ಲಿ ಲೂಟಿ ಆಗುತ್ತಿದೆ. ಮತ್ತೊಂದು ಕಡೆ ರಾಜ್ಯವನ್ನು ಲೂಟಿ ಮಾಡಲಾಗುತ್ತಿದೆ. ಎಲ್ಲಾ ಸಮುದಾಯದಲ್ಲಿನ ಬಡತನ ಹೋಗಲಾಡಿಸುವ ಶಕ್ತಿ ಇದೆ. ನಾವು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಅನ್ನೋದು ವಿಷಾದದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆ ಹಾನಿ ಬಗ್ಗೆ ಸರ್ಕಾರ ಕೇವಲ ಪರಿಹಾರ ಮಾತ್ರ ಘೋಷಿಸಿದೆ. ಆದರೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಿದ್ದು ನೋಡಿಲ್ಲ. ಕೊರೊನಾದಿಂದ ನಾನು ವಿಶ್ರಾಂತಿಯಲ್ಲಿದ್ದೆ. ವಿಶ್ರಾಂತಿ ನಂತರ ಇದೇ ಮೊದಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮತ್ತೆ ಹೆಚ್ ಡಿ‌ ಕೋಟೆಯಿಂದ ಕಾರ್ಯಕ್ರಮ ಆರಂಭಿಸಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮಾತನಾಡಿ ಕಳೆದ ಬಾರಿ ಅನಿಲ್ ಚಿಕ್ಕಮಾದು ತಂದೆ ಚಿಕ್ಕಮಾದು ಕಾರ್ಯಕ್ರಮಕ್ಕೆ ಕರೆದಿದ್ದರು. ರಾಜಕಾರಣಿಗಳು ಎಷ್ಟು ಸುಖಃವಾಗಿದ್ದೇವೆ ಅನ್ನೋದು ಮುಖ್ಯ ಅಲ್ಲ
ನಿಮ್ಮನ್ನು ಎಷ್ಟು ಸುಖಃವಾಗಿ ನೋಡಿಕೊಳ್ಳುತ್ತೇವೆ ಅನ್ನೋದು ಮುಖ್ಯ ಎಂದು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಹೇಳಿದರು.

ನಾನು 50 ಲಕ್ಷ ರೂಪಾಯಿ ಕೆಂಪೇಗೌಡ ಭವನಕ್ಕೆ ನೀಡುತ್ತೇನೆ. ನಾನು ಕೊಡುತ್ತೇನೋ ಬೇರೆಯವರು ಮೂಲಕ ಕೊಡಿಸುತ್ತೇನೋ ಒಟ್ಟಿನಲ್ಲಿ ಕೊಡುತ್ತೇನೆ. ಕೆಂಪೇಗೌಡ ಒಕ್ಕಲಿಗ ಜಾತಿಗೆ ಸೇರಿದವರಲ್ಲ. ಕುವೆಂಪು ಅವರ ತತ್ವ ಕೆಂಪೇಗೌಡರಲ್ಲಿ ಇತ್ತು. ನಾನು, ಕುಮಾರಸ್ವಾಮಿ ಅಮೂಲ್ಯ ಘಳಿಗೆಯಲ್ಲಿ ನಾವು ಇಲ್ಲಿಗೆ ಬಂದಿದ್ದೇವೆ ಎಂದರು.

ಅವಕಾಶ ಸಿಕ್ಕಿದನ್ನು ನೀವು ಬಿಡಬೇಡಿ. ದೊಡ್ಡಸ್ವಾಮಿ, ನಾನು,  ಕುಮಾರಣ್ಣ ಬಂದು ಗುದ್ದಲಿ ಪೂಜೆಯಲ್ಲಿ ಭಾಗಿಯಾಗುತ್ತೇವೆ. ಕೆಂಪೇಗೌಡರ, ಕುವೆಂಪು, ನಾರಾಯಣಗುರು, ಸಿದ್ದಗಂಗಾ ಶ್ರೀ ಸೇರಿದಂತೆ ಹಲವರ ಇತಿಹಾಸ ಬದಲಾಯಿಸಲು ಹೊರಟಿದ್ದಾರೆ. ನಾನು, ದೇವೇಗೌಡರು ಇದಕ್ಕೆ ಅವಕಾಶ ಕೊಡಲ್ಲ ಅಂತಾ ಹೇಳಿದ್ದೇವೆ ಎಂದು ಹೇಳಿದರು.

ನಮಗೆ ಕುವೆಂಪು, ಬಸವಣ್ಣ ಹಾಗೂ ಕೆಂಪೇಗೌಡರ ಕರ್ನಾಟಕ ಬೇಕು. ಕೆಂಪೇಗೌಡರು ಒಕ್ಕಲಿಗರಿಗೆ ಮಾತ್ರ ಬೆಂಗಳೂರು ಕಟ್ಟಲಿಲ್ಲ. ಎಲ್ಲಾ ಸಮುದಾಯದವರಿಗೂ ಕಟ್ಟಿದ್ದಾರೆ. ಎಲ್ಲರೂ ಮಠ, ಸಮಾಜದ ಜೊತೆ ಇರಿ
ಹುಟ್ಟಬೇಕಾದರೆ ಯಾರು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಮನೆ, ಮಠ ಮತ್ತು ಧರ್ಮವನ್ನು ಉಳಿಸಿಕೊಂಡು ಹೋಗಿ.  ಇಡಿ ಅವರು ಬಂಧಿಸಿ ಕಿರುಕುಳ ನೀಡಿದಾಗ ಹೆಚ್ ಡಿ ಕೋಟೆ ಜನ ನೀಡಿದ ಬೆಂಬಲ ಪ್ರೀತಿ ಮರೆಯಲ್ಲ ಎಂದು ಸ್ಮರಿಸಿದರು.

Published on: Jul 19, 2022 05:17 PM