ಮೈಸೂರು, (ಸೆಪ್ಟೆಂಬರ್ 10) : ಮೈಸೂರು (Mysuru) ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಗಣಿಶೆಡ್, ಕೆ.ಜಿ ಗುಂಡಿ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ (KSRTC Bus) ಸಂಚಾರವೇ ಇರಲಿಲ್ಲ. ಆ ಊರಿಗೆ ಮೂರುವರೇ ಕಿಲೋಮೀಟರ್ ನಡೆದೇ ಸಾಗಬೇಕಿತ್ತು. ತಾತ, ಮುತ್ತಾತರ ಕಾಲದಿಂದಲೂ ಬಸ್ ಗಾಗಿ ಊರಿನ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು, ಸಾರಿಗೆ ಇಲಾಖೆಯನ್ನು ಎಡತಾಕಿ, ಮನವಿ ಪತ್ರ ಕೊಟ್ಟಿದ್ದು ಆಗಿತ್ತು. ಆದ್ರೇ ಅದ್ಯಾವುದೂ ಪ್ರಯೋಜನಕ್ಕೆ ಬಂದಿರಲಿಲ್ಲ. ಬಸ್ ಬರೋ ನಿರೀಕ್ಷೆಯನ್ನೇ ಬಿಟ್ಟಂತೆ ಮೂರು ಕಿಲೋ ಮೀಟರ್ ದೂರದ ಹುಣಸೂರು ರೋಡ್ ಗೆ ತೆರಳಿ ಸಾರಿಗೆ ಬಸ್ ನಲ್ಲಿ ತೆರಳುತ್ತಿದ್ದರು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬಂದ ಆ ಒಂದು ಕರೆಯಿಂದ ಅಲರ್ಟ್ ಆದ ಅವರು ಕೆಲವೇ ಕ್ಷಣಗಳಲ್ಲಿ ಆ ಊರಿಗೆ ಬಸ್ ಸಂಚಾರದ ವ್ಯವಸ್ಥೆ ಮಾಡಿದ್ದಾರೆ.
ಆ ಒಂದು ಕರೆಗೆ ಅಲರ್ಟ್ ಆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ. ಅದೊಂದು ದಿನ ತಮ್ಮ ಊರಿನ ಗ್ರಾಮಸ್ಥರ ಮೇಲೆ ಹುಲಿ ದಾಳಿಯಾಗಿರೋ ವಿಚಾರ ತಿಳಿದಂತ ತಸ್ಲಿಮ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ನಂಬರ್ ಪಡೆದು ನೇರವಾಗೇ ಕರೆ ಮಾಡುತ್ತಾರೆ. ಅತ್ತ ಕರೆ ಸ್ವೀಕರಿಸಿದಂತ ಸಾರಿಗೆ ಸಚಿವರಿಗೆ ಕಣ್ಣೀರಿಡುತ್ತಲೇ ತಮ್ಮ ಊರಿಗೆ ಬಸ್ ಇರದ ಕಷ್ಟ, ಅದರಿಂದ ಗ್ರಾಮಸ್ಥರಿಗೆ, ಶಾಲಾ ಮಕ್ಕಳಿಗೆ ಆಗುತ್ತಿರುವಂತ ತೊಂದರೆಯನ್ನು ಗೋಳೋ ಎಂದು ಅತ್ತು ಹೇಳಿದ್ದಾರೆ. ಅಲ್ಲದೇ ಹೆಚ್.ಡಿ ಕೋಟೆ ತಾಲೂಕಿನಿಂದ ಗಣಿಶೆಡ್, ಕೆ.ಜಿ ಗುಂಡಿ ಮಾರ್ಗವಾಗಿ ಸಾರಿಗೆ ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ಗ್ರಾಮಸ್ಥರ ಆ ಒಂದು ಕರೆಯಿಂದಾಗಿ ಅಲರ್ಟ್ ಆಗಿದ್ದಾರೆ. ಗಣಿಶೆಡ್ಡು ಗ್ರಾಮದ ತಸ್ಲಿಮ್ ಕರೆ ಮಾಡಿ, ತಮ್ಮೂರಿಗೆ ಸಂಕಷ್ಟ, ಸುತ್ತ ಮುತ್ತಲಿನ ಹಳ್ಳಿಗಳಿಗೆ ಸಾರಿಗೆ ಬಸ್ ಇಲ್ಲದ್ದರಿಂದ ಆಗುತ್ತಿರುವಂತ ತೊಂದರೆ ಹೇಳಿದ್ದನ್ನು ಸಾರಿಗೆ ವಿಭಾಗದ ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಜೊತೆಗೆ, ಕೂಡಲೇ ಹೆಚ್.ಡಿ ಕೋಟೆಯಿಂದ ಗಣಿಶೆಡ್ಡು, ಕೆ.ಜಿ ಗುಂಡಿ ಮಾರ್ಗವಾಗಿ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಗ್ರಾಮಸ್ಥರೊಬ್ಬರು ಕರೆ ಮಾಡಿ, ಕಷ್ಟ ಹೇಳಿಕೊಂಡ ಬಗ್ಗೆ ಸಾರಿಗೆ ಸಚಿವರ ಸೂಚನೆ ಮೇರೆಗೆ ಅಲರ್ಟ್ ಆದಂತ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು, ಸಾರಿಗೆ ಸಚಿವರ ಸೂಚನೆಯಂತೆ ಬಸ್ ವ್ಯವಸ್ಥೆ ಕಲ್ಪಿಸೋದಕ್ಕೆ ಕ್ರಮವಹಿಸಿದ್ದಾರೆ.
ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಫಲವಾಗಿ ಹೆಚ್.ಡಿ ಕೋಟೆ ತಾಲೂಕಿನಿಂದ ಗಣಿಶೆಡ್ಡು, ಕೆ.ಜಿ ಗುಂಡಿ ಮಾರ್ಗವಾಗಿ ದಿನಕ್ಕೆ ಎರಡು ಬಾರಿ ಸಂಚರಿಸೋದಕ್ಕೆ ಕೆಎಸ್ಆರ್ಟಿಸಿ ಬಸ್ ಆರಂಭಿಸಿದೆ. ಬೆಳಗ್ಗೆ ಒಮ್ಮೆ, ಸಂಜೆ ಮತ್ತೊಮ್ಮೆ ಎರಡು ಸುತ್ತುವಳಿಯನ್ನು ಸಾರಿಗೆ ಬಸ್ ಜನರ ಅನುಕೂಲಕ್ಕಾಗಿ ಸಂಚಾರ ಪ್ರಾರಂಭಿಸಿದೆ. ಇದೇ ಪ್ರಪ್ರಥಮ ಬಾರಿಗೆ ಹೆಚ್ ಡಿ ಕೋಟೆಯಿಂದ ಬಸ್ ಚಾಕಳ್ಳಿ, ಚೊಕಡಹಳ್ಳಿ, ಬೂದನೂರು, ಗಣಿಶೆಡ್ಡು, ಕೆ.ಜಿ ಹುಂಡಿ, ಚಿತ್ತಧಾಮ, ಶಾಂತಿಪುರದ ಮಾರ್ಗವಾಗಿ ಹೆಚ್.ಡಿ ಕೋಟೆಗೆ ತಲುಪುವಂತೆ ಸಂಚಾರವನ್ನು KSRTC ಬಸ್ ಆರಂಭಿಸಿದೆ.
ಈ ಬಗ್ಗೆ ಮಾತನಾಡಿದಂತ ಗಣಿಶೆಡ್ಡು ಗ್ರಾಮದ ತಸ್ಲೀಮ್, ನಮ್ಮ ಊರಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಹಲವು ವರ್ಷಗಳ ಬೇಡಿಕೆ ಆಗಿತ್ತು. ಆರು, ಏಳು ವರ್ಷಗಳಿಂದ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಕಳೆದ ಫೆಬ್ರವರಿಯಿಂದಲೂ ಪತ್ರವನ್ನು ಕೊಟ್ಟು ಮನವಿ ಮಾಡಲಾಗಿತ್ತು. ಹೆಚ್.ಡಿ ಕೋಟೆ ಡಿಪೋಗೂ ತೆರಳಿ ಮನವಿ ನೀಡಿದ್ದೆವು ಎಂದಿದ್ದಾರೆ.
ನಾವು ಎಷ್ಟೇ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನಾನೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನೇರವಾಗಿ ಕರೆ ಮಾಡಿ, ತಮ್ಮೂರಿನ ಕೆ ಎಸ್ ಆರ್ ಟಿ ಸಿ ಬಸ್ ಇಲ್ಲದೇ ಆಗುತ್ತಿರೋ ಕಷ್ಟ, ಜನರಿಗೆ ಆಗುತ್ತಿರುವ ಸಂಕಷ್ಟ, ಶಾಲಾ ಮಕ್ಕಳಿಗೆ ಆಗುತ್ತಿರುವಂತ ತೊಂದರೆಯನ್ನು ಮನವರಿಕೆ ಮಾಡಿಕೊಟ್ಟೆನು. ಬಸ್ ಸಂಚಾರದ ವ್ಯವಸ್ಥೆ ಮಾಡುವಂತೆಯೂ ಮನವಿ ಮಾಡಲಾಯಿತು ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಕರೆ ಮಾಡಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದಂತ ಕೆಲವೇ ದಿನಗಳಲ್ಲಿ ನಮ್ಮೂರಿಗೆ ಕೆ ಎಸ್ ಆರ್ ಟಿ ಸಿ ಬಸ್ ಬರುವಂತೆ ಆಗಿದೆ. ಇದೀಗ ಈ ಮಾರ್ಗದ ಹಲವು ಗ್ರಾಮಗಳ ಜನರು ನಗರ, ಜಿಲ್ಲಾ, ತಾಲೂಕು ಕೇಂದ್ರಗಳಿಗೆ ಸಂಚರಿಸೋದಕ್ಕೆ, ಶಾಲಾ ಮಕ್ಕಳು ಶಾಲೆಗಳಿಗೆ ತೆರಳೋದಕ್ಕೆ ಅನುಕೂಲವಾಗಿದೆ. ಬಸ್ ಸಂಚಾರ ವ್ಯವಸ್ಥೆಗೆ ಕಾರಣವಾದಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ತುಂಬುಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕು ಗಣಿಶೆಡ್ ಗ್ರಾಮದ ಕಲಂದರ್ ಪಾಷಾ, ಮೊಹಮ್ಮದ್ ಗಣಿ, ಚಂದ್ರೇ ಗೌಡ್ರು, ಬೂದನೂರು ಮಹದೇವ್, ಟೈಗರ್ ಬ್ಲಾಕ್ ಗ್ರಾಮದಿಂದ ಇವನ್ ರಾಜ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಟೈಗರ್ ಬ್ಲಾಕ್ ಸುಬ್ರಮಣಿ, ಕೆ.ಜಿ ಗುಂಡಿ ಮಂಜು ಮತ್ತು ಸಣ್ಣ ಸ್ವಾಮಿ ನಾಯಕ, ಲೋಕೇಶ್ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಸ್ಥರು ನೆರವಾಗಿದ್ದಾರೆ, ಅವರೆಲ್ಲರಿಗೂ ಕೃತಜ್ಞತೆಯನ್ನು ಹೇಳಿದ್ದಾರೆ.
ಇನ್ನಷ್ಟು ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Sun, 10 September 23