
ಮೈಸೂರು, (ಡಿಸೆಂಬರ್ 12): ಮೈಸೂರು (Mysuru) ಅಂದ್ರೆ ತಟ್ಟನೆ ನೆನಪಾಗೋದು ಮೈಸೂರು ಅರಮನೆ (Mysuru Palace). ಇಂತಹ ಅರಮನೆ ಅಪಾಯದಲ್ಲಿದೆ. ಹೌದು ಮೈಸೂರು ಅರಮನೆಯ ವರಹಾ ದ್ವಾರದ ಕಮಾನಿನ ಮೇಲ್ಚಾವಣಿಯ ಗಾರೆ ಕಿತ್ತು ಕೆಳಗೆ ಬಿದ್ದಿದೆ. ಈ ವೇಳೆ ಅಲ್ಲಿ ಯಾರು ಇಲ್ಲದ ಕಾರಣ ಅದೃಷ್ಟವಶಾತ್ ಅಪಾಯ ತಪ್ಪಿದೆ. ಆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಬೈಕ್ ನಿಲ್ಲಿಸಿದ್ದು ಬೈಕ್ ಜಖಂಗೊಂಡಿದೆ. ಅಸಲಿಗೆ ಅರಮನೆ ನಿರ್ಮಿಸಿ 113 ವರ್ಷವಾಗಿದೆ. ಶತಮಾನದ ಹಳೆಯ ಕಟ್ಟಡಕ್ಕೆ ಕಾಯಕಲ್ಪ ನೀಡಬೇಕಾಗಿದೆ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಹಿಂದೆ ಇದೇ ರೀತಿ ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಲ್ಯಾನ್ಸಡೌನ್ ಕಟ್ಟಡ ಕುಸಿದು ಅಪಾರ ಸಾವು ನೋವು ಸಂಭವಿಸಿತ್ತು. ಮತ್ತೊಂದು ಕಡೆ ಮೈಸೂರು ರಾಜರು ಕಟ್ಟಿಸಿದ್ದ ದೇವರಾಜ ಮಾರುಕಟ್ಟೆನ ಒಂದು ಭಾಗ ಸಹ ಕುಸಿದು ಬಿದ್ದಿತ್ತು. ಇದೇ ಪರಿಸ್ಥಿತಿ ಮೈಸೂರು ಅರಮನೆಗೆ ಬರಬಾರದು ಎಂದಾದರೇ ತಕ್ಷಣ ಈ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ.
ಮೈಸೂರು ಅರಮನೆಗಳ ನಗರ ಎಂದು ಕರೆಯಲ್ಪಡುತ್ತದೆ. “ಮೈಸೂರು ಅರಮನೆ” ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು 1897ರಲ್ಲಿ. ಆದ್ರೆ, ನಿರ್ಮಾಣ ಮುಗಿದಿದ್ದು 1912ರಲ್ಲಿ. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಮಾಡಿದ್ದ ಅರಮನೆ ಇತ್ತು. ಆದ್ರೆ, ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲಾಗಿತ್ತು ಎನ್ನಲಾಗಿದೆ.
ಇದೀಗ ವಿಶ್ವವಿಖ್ಯಾತ ಮೈಸೂರು ಅರಮನೆಯ ವರಾಹ ದ್ವಾರದ ಛಾವಣಿಯ ಗಾರೆ ಕುಸಿದಿರುವ ಘಟನೆ ಎಚ್ಚರಿಕೆ ಗಂಟೆಯಾಗಿದೆ. ಮುಂದೆ ಆಗಬಹುದಾದ ಅಪಾಯದ ಮುನ್ಸೂಚನೆಯಾಗಿದೆ. ಮುಂದೆ ಇದು ಹೀಗೆ ಇರುತ್ತೆ ಅಂತ ಹೇಳಕ್ಕಾಗಲ್ಲ. ಹೀಗಾಗಿ ಆದಷ್ಟು ಬೇಗ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.
Published On - 8:30 pm, Fri, 12 December 25