ಜಗತ್ತು ಕಾಣದ ಅಂಧ ಮಕ್ಕಳು ಬಾನಲ್ಲಿ ಹಾರಾಡಿ ಸಂಭ್ರಮ: ಸ್ವೀಟ್ನೆಸ್ ಆಫ್ ಬ್ಲೈಂಡ್‌ನೆಸ್ ಟೀಂನಿಂದ ವಿಶೇಷ ವ್ಯವಸ್ಥೆ

| Updated By: ಆಯೇಷಾ ಬಾನು

Updated on: Oct 29, 2022 | 10:09 AM

ದಿವ್ಯಾ ಚಾರಿಟೇಬಲ್ ಟ್ರಸ್ಟ್‌ನ ಮಕ್ಕಳು ಸೇರಿದಂತೆ ರಾಜ್ಯದ ವಿವಿಧ ಶಾಲೆಯ 32 ಅಂಧ ವಿದ್ಯಾರ್ಥಿನಿಯರು ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿ ಖುಷಿ ಪಟ್ಟರು.

ಜಗತ್ತು ಕಾಣದ ಅಂಧ ಮಕ್ಕಳು ಬಾನಲ್ಲಿ ಹಾರಾಡಿ ಸಂಭ್ರಮ: ಸ್ವೀಟ್ನೆಸ್ ಆಫ್ ಬ್ಲೈಂಡ್‌ನೆಸ್ ಟೀಂನಿಂದ ವಿಶೇಷ ವ್ಯವಸ್ಥೆ
ಜಗತ್ತು ಕಾಣದ ಅಂಧ ಮಕ್ಕಳು ಬಾನಲ್ಲಿ ಹಾರಾಡಿ ಸಂಭ್ರಮ
Follow us on

ಮೈಸೂರು: ಅವರೆಲ್ಲಾ ಅಂಧ ಮಕ್ಕಳು. ಜಗತ್ತನ್ನು ನೋಡಲಾಗದ ವಿಶೇಷ ಚೇತನರು. ಜಗತ್ತು ಕಾಣಲಾಗದ ಆ ಮಕ್ಕಳಿಗಾಗಿ ಉಚಿತವಾಗಿ ವಿಮಾನಯಾನ ಮಾಡಿಸಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಅಂಧರಿಗೆ ಉಚಿತ ವಿಮಾನಯಾನದ ವ್ಯವಸ್ಥೆ ಮಾಡಿ ಮಕ್ಕಳಲ್ಲಿ ನಗು ಮೂಡಿಸಲಾಗಿದೆ. ಸುಮಾರು 32 ಅಂಧ ಮಕ್ಕಳು ವಿಮಾನಯಾನ ಮಾಡಿ ವಿಮಾನದ ಅನುಭವ ಆನಂದಿಸಿದ್ದಾರೆ.

ಜಗತ್ತು ಹೇಗಿದೆ ಅಂತಾ ಸಹಾ ನೋಡದ ಈ ಮಕ್ಕಳು ವಿಮಾನ ಹತ್ತಿ ಸಂಭ್ರಮಿಸಿದ್ರು. ಮಕ್ಕಳ ಈ ಸಂಭ್ರಮಕ್ಕೆ ಬೆಂಗಳೂರು ಮೂಲದ ಸ್ವೀಟ್ನೆಸ್ ಆಫ್ ಬ್ಲೈಂಡ್‌ನೆಸ್ ಟೀಂ ಕಾರಣವಾಗಿದೆ. ಇದು ಕೆಲವು ಸಮಾನ ಮನಸ್ಕರು ಸೇರಿ ಕಟ್ಟಿಕೊಂಡಿರುವ ತಂಡ. ಈ ತಂಡ ಸತೀಶ್ ಎಂಬುವವರ ನೇತೃತ್ವದಲ್ಲಿ ಅಂಧ ಮಕ್ಕಳಿಗಾಗಿ ಹತ್ತು ಹಲವು ಕಾರ್ಯಕ್ರಮವನ್ನು ರೂಪಿಸಿಕೊಂಡು ಬಂದಿದೆ. ಇದರ ಅಂಗವಾಗಿ ಅಂಧ ವಿದ್ಯಾರ್ಥಿನಿಯರಿಗಾಗಿ ಉಚಿತವಾಗಿ ವಿಮಾನಯಾನ ಮಾಡಿಸಲಾಯ್ತು. ಇದನ್ನೂ ಓದಿ: ರಸ್ತೆಯಲ್ಲೇ ನಿಲ್ಲುವ ಹಸುಗಳು; ವಾಹನ ಸವಾರರಿಗೆ ತೊಂದರೆ

ಈ ಕಾರ್ಯಕ್ರಮದ ಅಂಗವಾಗಿ ದಿವ್ಯಾ ಚಾರಿಟೇಬಲ್ ಟ್ರಸ್ಟ್‌ನ ಮಕ್ಕಳು ಸೇರಿದಂತೆ ರಾಜ್ಯದ ವಿವಿಧ ಶಾಲೆಯ 32 ಅಂಧ ವಿದ್ಯಾರ್ಥಿನಿಯರನ್ನು ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಲಾಯ್ತು. ಇದಕ್ಕೆ ತಗುಲಿದ 81,913 ರೂಪಾಯಿ ಟಿಕೆಟ್ ದರವನ್ನು ಸ್ಬೇಟ್ನೆಸ್ ಆಫ್ ಬ್ಲೈಂಡ್‌ನೆಸ್ ತಂಡದವರೇ ಭರಿಸಿದರು. ಮಕ್ಳಳಿಗೆ ವಿಮಾನವನ್ನು ನೋಡಲು ಸಾಧ್ಯವಾಗದಿದ್ದರು, ಅದರ ಬಗ್ಗೆ ತಂಡದ ಸದಸ್ಯರು ವಿವರಿಸಿ ಹೇಳಿದರು. ಮಕ್ಕಳು ತಾವೇ ಬೋರ್ಡಿಂಗ್ ಪಾಸ್ ಪಡೆದು ವಿಮಾನ ಹತ್ತಿ ಸಂಭ್ರಮಿಸಿದ್ರು.

ವಿದ್ಯಾರ್ಥಿನಿಯರಿಗೆ ವಿಮಾನ ಯಾನದ ಹೊಸ ಅನುಭವ ಸಾಕಷ್ಟು ಖುಷಿ ನೀಡಿತು. ಜೊತೆಗೆ ಆತ್ಮವಿಶ್ವಾಸವನ್ನು ಮೂಡಿಸಿತು. ಇನ್ನು ಸ್ವೀಟ್ನೆಸ್ ಆಫ್ ಬ್ಲೈಂಡ್‌ನೆಸ್ ತಂಡದ ಸದಸ್ಯರು ಹೀಗಾಗಲೇ ಈ ರೀತಿಯ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಮುಂದೆಯೂ ಅಂಧ ಮಕ್ಕಳಿಗಾಗಿ ಕೆಲಸ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಒಟ್ಟಾರೆ ಜಗತ್ತನ್ನು ಕಾಣದವರಿಗೆ ನಾವು ಎಲ್ಲರಂತೆ ಅನ್ನೋ ಭಾವ ಮೂಡಿಸುವ ಇಂತಹ ಮತ್ತಷ್ಟು ಕಾರ್ಯಕ್ರಮ ಆಗಲಿ ಅನ್ನೋದೆ ಎಲ್ಲರ ಆಶಯ.

ವರದಿ: ರಾಮ್, ಟಿವಿ9 ಮೈಸೂರು

Published On - 10:09 am, Sat, 29 October 22