ಮೈಸೂರು ದಸರಾ ಗಜಪಡೆ: ತೂಕದಲ್ಲಿ ಕ್ಯಾಪ್ಟನ್​ ಅಭಿಮನ್ಯುಗಿಂತ ಭೀಮ ಹೆಚ್ಚು ! ನಂ.1

ಮೈಸೂರಿನಲ್ಲಿ ದಸರಾ ಆನೆಗಳ ತೂಕ ಪರೀಕ್ಷೆ ನಡೆದಿದ್ದು, ಭೀಮ 5465 ಕೆಜಿ ತೂಕದೊಂದಿಗೆ ಅಗ್ರಸ್ಥಾನ ಪಡೆದಿದೆ. ಅಭಿಮನ್ಯು, ಲಕ್ಷ್ಮಿ ಮತ್ತಿತರ ಆನೆಗಳ ತೂಕವನ್ನು ಪರೀಕ್ಷಿಸಲಾಗಿದೆ. ಎಲ್ಲಾ ಆನೆಗಳು ಉತ್ತಮ ಆರೋಗ್ಯದಲ್ಲಿವೆ. ದಸರಾ ಹಬ್ಬದ ಮುನ್ನ ತೂಕ ಪರೀಕ್ಷೆ ನಡೆಸುವುದು ವಾಡಿಕೆ. ನಾಳೆಯಿಂದ ರಾಜಬೀದಿಯಲ್ಲಿ ಆನೆಗಳ ತಾಲೀಮು ಆರಂಭವಾಗಲಿದೆ.

ಮೈಸೂರು ದಸರಾ ಗಜಪಡೆ: ತೂಕದಲ್ಲಿ ಕ್ಯಾಪ್ಟನ್​ ಅಭಿಮನ್ಯುಗಿಂತ ಭೀಮ ಹೆಚ್ಚು ! ನಂ.1
ದಸರಾ ಆನೆಗಳ ತೂಕ ಪರೀಕ್ಷೆ
Updated By: ವಿವೇಕ ಬಿರಾದಾರ

Updated on: Aug 11, 2025 | 10:29 PM

ಮೈಸೂರು, ಆಗಸ್ಟ್​ 11: ವಿಶ್ವ ವಿಖ್ಯಾತ ನಾಡಹಬ್ಬ ದಸರಾ (Dasara) ಗಜಪಡೆ ಕಲರವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysore) ಆರಂಭವಾಗಿದೆ. ದಸರಾ ಆನೆಗಳು (Dasara Elephants) ನಾಡಿನ ಪರಿಸರಕ್ಕೆ ಹೊಂದಿಕೊಳ್ಳುತ್ತಿವೆ. ಕಾಡಿನಿಂದ ನಾಡಿಗೆ ಆಗಮಿಸಿದ ಗಜಪಡೆಯ ಆರೈಕೆ ಪ್ರಾರಂಭವಾಗಿದೆ. ಮೊದಲ ಹಂತವಾಗಿ ಇಂದು ಆನೆಗಳ ತೂಕವನ್ನು ಪರೀಕ್ಷಿಸಲಾಯಿತು. ತೂಕ ಮಾಪನ ಯಂತ್ರದ ಮೇಲೆ ನಿಂತ ಗಜ ಪಡೆಗಳು ತೂಕ ಪರೀಕ್ಷಿಸಲು ಸಹಕರಿಸಿದವು. ತೂಕದಲ್ಲಿ ಭೀಮ ಬಲಾಢ್ಯನಾಗಿ ಹೊರಹೊಮ್ಮಿ ನಂ.1 ಆಗಿದ್ದಾನೆ.

ಕಾಡಿನಿಂದ ನಾಡಿಗೆ ದಸರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜ ಪಡೆ ಸಾಂಸ್ಕೃತಿಕ ನಗರಿಯಲ್ಲಿ ಸಂಚಾರ ಆರಂಭಿಸಿವೆ. ಅಭಿಮನ್ಯು, ಭೀಮ, ಲಕ್ಷ್ಮೀ, ಕಾವೇರಿ, ಧನಂಜಯ, ಪ್ರಶಾಂತ್, ಕಂಜನ್, ಏಕಲವ್ಯ, ಮಹೇಂದ್ರ ಆನೆಗಳು ಮೈಸೂರಿನಲ್ಲಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುತ್ತಿವೆ. ಸೋಮವಾರ ಈ ಆನೆಗಳನ್ನು ತೂಕ ಮಾಪನ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿತ್ತು. ಎಲ್ಲ ಆನೆಗಳ ತೂಕವನ್ನು ಮಾಡಿ ನಮೂದಿಸಿಕೊಳ್ಳಲಾಯಿತು. ನಗರದ ದೇವರಾಜ ಮೊಹಲ್ಲಾದಲ್ಲಿರುವ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕವನ್ನು ಪರೀಕ್ಷಿಸಲಾಯ್ತು. ಕಾಡಿನಿಂದ ನಾಡಿಗೆ ಆಗಮಿಸಿರುವ ಆನೆಗಳ ಆರೋಗ್ಯದ ದೃಷ್ಠಿಯಿಂದ ತೂಕ ಮಾಡಲಾಯ್ತು.

ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಇಷ್ಟು ದಿನ‌ ಮೊದಲ ಸ್ಥಾನದಲ್ಲಿದ್ದನು. ಇದೀಗ ಬಲಾಢ್ಯ ಭೀಮ‌ ಹೆಸರಿಗೆ ತಕ್ಕಂತೆ ತೂಕದಲ್ಲಿ ನಾನೇ ನಂ.1 ಎಂಬುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾನೆ. ಭೀಮ ಆನೆ ಬರೋಬ್ಬರಿ 5,465 ಕೆಜಿ ತೂಕವಿದೆ. ಕ್ಯಾಪ್ಟನ್​ ಅಭಿಮನ್ಯು 5,360 ಕೆಜಿ ತೂಕ ಇದ್ದಾನೆ. ಉಳಿದ ಆನೆಗಳಾದ, ಪ್ರಶಾಂತ 5,110 ಕೆಜಿ, ಮಹೇಂದ್ರ 5,120 ಕೆಜಿ, ಏಕಲವ್ಯ 5,305 ಕೆಜಿ, ಲಕ್ಷ್ಮಿ 2480 ಕೆಜಿ, ಕಾವೇರಿ 3,010 ಕೆಜಿ, ಕಂಜನ್ 4,880 ಕೆಜಿ, ಧನಂಜಯ 5,310 ಕೆಜಿ ತೂಕ ಇದ್ದಾನೆ. ಎಲ್ಲ ಆನೆಗಳು ಉತ್ತಮ ಆರೋಗ್ಯವಾಗಿವೆ.

ಇದನ್ನೂ ಓದಿ: ನಾಡಹಬ್ಬ ಮೈಸೂರು ದಸರಾ 2025 ರ ಉದ್ಘಾಟಕರು ಯಾರು? ಸಚಿವ ಮಹದೇವಪ್ಪ ಕೊಟ್ಟರು ಸುಳಿವು

ಇನ್ಮುಂದೆ ಗಜಪಡೆಗೆ ಉತ್ತಮ ಆಹಾರ ಸೌಲಭ್ಯವನ್ನು ನೀಡಿ ತೂಕವನ್ನು ಹೆಚ್ಚಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಜೊತೆಗೆ ದಸರಾ ಹಿಂದಿನ ದಿನವೂ ಮತ್ತೊಮ್ಮೆ ತೂಕವನ್ನು ಪರೀಕ್ಷಿಸಲಾಗುತ್ತದೆ. ಹಲವು ದಶಕಗಳಿಂದ ಇದೇ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕವನ್ನು ಪರೀಕ್ಷಿಸಲಾಗುತ್ತಿದೆ. ಇದು ಸಹಜವಾಗಿ ಮಾಲೀಕರಿಗೆ ಖುಷಿ ನೀಡಿದೆ.

ನಾಳೆಯಿಂದ ಗಜಪಡೆಗಳು ಮೈಸೂರಿನ ರಾಜ ಬೀದಿಯಲ್ಲಿ ತಾಲೀಮು ನಡೆಸಲಿವೆ. ಗಜಪಡೆಯ ಗಜ ಗಾಂಭೀರ್ಯ ನಡಿಗೆಯನ್ನು ಕಣ್ತುಂಬಿಕೊಳ್ಳಲು ಮೈಸೂರಿಗರು ಕಾತುರದಿಂದ ಕಾಯುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:27 pm, Mon, 11 August 25