ಮೈಸೂರು ದಸರಾ ವಿಜಯದಶಮಿಯಂದು ಡಿಜಿಟಲ್ ರೈಲ್ವೆ ಟಿಕೆಟಿಂಗ್‌ಗೆ ಜನಫಿದಾ; ಇಲಾಖೆಗೆ ಬಂದ ಆದಾಯ ಎಷ್ಟು?
ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ದಿನದಂದು ಮೈಸೂರು ರೈಲು ನಿಲ್ದಾಣದಲ್ಲಿ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಶೇ. 53.4 ಕ್ಕೂ ಹೆಚ್ಚು ಪ್ರಯಾಣಿಕರು ಎಟಿವಿಎಂ ಮತ್ತು ಯುಟಿಎಸ್ ಆಪ್ ನಂತಹ ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಗಳನ್ನು ಬಳಸಿಕೊಂಡು ದಟ್ಟಣೆ ಕಡಿಮೆ ಮಾಡಿದ್ದಾರೆ. ಡಿಜಿಟಲ್ ಕ್ರಾಂತಿಯು ರೈಲ್ವೆ ಪ್ರಯಾಣವನ್ನು ಸುಗಮಗೊಳಿಸಿದೆ.

ಮೈಸೂರು, ಅ.23: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಹಾಗೂ ವಿಜಯದಶಮಿ ದಿನದಂದು (ಅಕ್ಟೋಬರ್ 21) ಮೈಸೂರು ರೈಲು ನಿಲ್ದಾಣದಲ್ಲಿ ಅಕ್ಷರಶಃ ಜನಸಾಗರವೇ ಹರಿದುಬಂದಿತ್ತು. ಒಂದೇ ದಿನ ಸುಮಾರು ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಮೈಸೂರು ನಿಲ್ದಾಣದ ಮೂಲಕ ಪ್ರಯಾಣಿಸಿದ್ದು, ಇದರಲ್ಲಿ ಶೇಕಡಾ 53.4 ಕ್ಕೂ ಹೆಚ್ಚು ಪ್ರಯಾಣಿಕರು ಡಿಜಿಟಲ್ ಹಾಗೂ ಸ್ವಯಂಚಾಲಿತ (Self-service) ಟಿಕೆಟಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ದಿವಿಸನಲ್ ರೈಲ್ವೆ ಮ್ಯಾನೇಜರ್ (DRM) ಮುದಿತ್ ಮಿತ್ತಲ್ ಮತ್ತು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (DCM) ಹಾಗೂ ಪಿಆರ್‌ಒ ಗಿರೀಶ್ ಧರ್ಮರಾಜ್ ಕಾಳಗೊಂಡ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆಯಿಂದಾಗಿ ನಿಲ್ದಾಣದಲ್ಲಿ ಕೌಂಟರ್‌ಗಳ ಮುಂಭಾಗದ ದಟ್ಟಣೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಡಿಜಿಟಲ್ ಟಿಕೆಟ್ ಕ್ರಾಂತಿ:
ಎಟಿವಿಎಂ ಯಂತ್ರಗಳ ಭಾರಿ ಬಳಕೆ:
ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ ಬಳಕೆಯಲ್ಲಿ ಶೇ. 33.23 ರಷ್ಟು ಭಾರಿ ಏರಿಕೆ ಕಂಡುಬಂದಿದೆ. 2025 ರ ವಿಜಯದಶಮಿಯಂದು 13,285 ಪ್ರಯಾಣಿಕರು ಎಟಿವಿಎಂ ಬಳಸಿದ್ದರೆ, ಈ ವರ್ಷ (2026) ಬರೋಬ್ಬರಿ 17,700 ಪ್ರಯಾಣಿಕರು ಎಟಿವಿಎಂ ಮೂಲಕ ಟಿಕೆಟ್ ಪಡೆದಿದ್ದಾರೆ. ಎಟಿವಿಎಂ ಮೂಲಕ ಸಂಗ್ರಹವಾದ ಆದಾಯ ಶೇ. 32.1 ರಷ್ಟು ಏರಿಕೆಯಾಗಿ 10.61 ಲಕ್ಷ ರೂ. ತಲುಪಿದೆ. ಯುಪಿಐ ಆಧಾರಿತ ಕ್ಯೂಆರ್ ಕೋಡ್ ಪಾವತಿಯು ತ್ವರಿತವಾಗಿ ಟಿಕೆಟ್ ಪಡೆಯಲು ನೆರವಾಗಿದೆ.
ಯುಟಿಎಸ್ ಮೊಬೈಲ್ ಆಪ್ ಪ್ರಗತಿ:
ಕಾಗದರಹಿತ ಹಾಗೂ ಆನ್‌ಲೈನ್ ಮೊಬೈಲ್ ಟಿಕೆಟ್ ಆಪ್ ‘ಯುಟಿಎಸ್’ ಬಳಸುವ ಪ್ರಯಾಣಿಕರ ಸಂಖ್ಯೆ ಶೇ. 13.04 ರಷ್ಟು ಹೆಚ್ಚಾಗಿದ್ದು, 5,495 ಪ್ರಯಾಣಿಕರು ಆಪ್ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆದಿದ್ದಾರೆ. ಬುಕಿಂಗ್ ಪ್ರಮಾಣದಲ್ಲೂ ಶೇ. 18.72 ರಷ್ಟು ಪ್ರಗತಿಯಾಗಿದೆ.
ಸಾಂಪ್ರದಾಯಿಕ ಕೌಂಟರ್‌ಗಳಲ್ಲಿ ಸರತಿ ಸಾಲು ಕಡಿತ:
ಸಾಮಾನ್ಯ ಬುಕಿಂಗ್ ಕೌಂಟರ್‌ಗಳನ್ನು ಬಳಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 23.54 ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ 26,180 ಪ್ರಯಾಣಿಕರು ಕೌಂಟರ್ ನೆಚ್ಚಿಕೊಂಡಿದ್ದರೆ, ಈ ಬಾರಿ ಆ ಸಂಖ್ಯೆ 20,018 ಕ್ಕೆ ಕುಸಿದಿದೆ. ಇದರಿಂದಾಗಿ ನಿಲ್ದಾಣದ ಮುಖ್ಯ ಆವರಣ ಹಾಗೂ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಯಿತು.
ಆದಾಯದಲ್ಲಿ ಹೆಚ್ಚಳ:
ವಿಜಯದಶಮಿ ದಿನದಂದು ಕಾಯ್ದಿರಿಸದ ಟಿಕೆಟ್ ವಿಭಾಗದಿಂದ ಒಟ್ಟು 25.33 ಲಕ್ಷ ರೂ. ಆದಾಯ ಹರಿದುಬಂದಿದೆ (23,277 ಟಿಕೆಟ್‌ಗಳು). ಕಳೆದ ವರ್ಷಕ್ಕೆ (₹28.56 ಲಕ್ಷ) ಹೋಲಿಸಿದರೆ ಆದಾಯ ಶೇ. 11.33 ರಷ್ಟು ಕಡಿಮೆಯಾಗಿದೆ. ಸರಾಸರಿ ಟಿಕೆಟ್ ಮೌಲ್ಯ 63.70 ರೂ. ರಿಂದ 58.28 ರೂ.ಗೆ ಕುಸಿದಿದ್ದು, ದಸರಾ ವೀಕ್ಷಣೆಗೆ ಬಂದ ಬಹುತೇಕ ಪ್ರಯಾಣಿಕರು ಮಂಡ್ಯ, ರಾಮನಗರ ಹಾಗೂ ಬೆಂಗಳೂರಿನಂತಹ ಹತ್ತಿರದ ನಗರಗಳಿಗೆ ಶಾರ್ಟ್ ಜರ್ನಿ ಮಾಡಿರುವುದನ್ನು ಇದು ಸೂಚಿಸುತ್ತದೆ.
ಇದನ್ನೂ ಓದಿ: 9 ತಿಂಗಳ ಗರ್ಭಿಣಿಯಾಗಿದ್ದರೂ ಕಯಾದು ವೇಷ ಧರಿಸಿದ ರಂಗಸ್ಥಳದಲ್ಲಿ ಕುಣಿದ ದಿಶಾ ಶೆಟ್ಟಿ: ವೈರಲ್ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ
‘ರೈಲ್ ಜನ ಸಂವಾದ’ ಕಾರ್ಯಕ್ರಮ:
ಗುರುವಾರ (ಅಕ್ಟೋಬರ್ 22) ಮೈಸೂರು ರೈಲು ನಿಲ್ದಾಣದಲ್ಲಿ ಡಿಆರ್‌ಎಂ ಮುದಿತ್ ಮಿತ್ತಲ್ ಅವರ ನೇತೃತ್ವದಲ್ಲಿ ‘ರೈಲ್ ಜನ ಸಂವಾದ’ ಕಾರ್ಯಕ್ರಮ ನಡೆಯಿತು. ಈ ವೇಳೆ ರೈಲ್ವೆ ಉನ್ನತಾಧಿಕಾರಿಗಳು ನಿಲ್ದಾಣದಲ್ಲಿದ್ದ ಪ್ರಯಾಣಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ದಸರಾ ಪ್ರಯಾಣದ ಅನುಭವ, ಕುಂದುಕೊರತೆಗಳು ಹಾಗೂ ರೈಲ್ವೆ ಸೇವೆಗಳನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವ ಕುರಿತು ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಸ್ವೀಕರಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




