ಮೈಸೂರು, ಆಗಸ್ಟ್ 13: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಅತಿದೊಡ್ಡ ಆಸ್ಪತ್ರೆಯಾಗಿರುವ, ಶತಮಾನ ಪೂರೈಸಿರುವ ಪ್ರತಿಷ್ಠಿತ ಕೆಆರ್ ಸ್ಪತ್ರೆಯಲ್ಲಿ ಸಣ್ಣ ಮೂಲಸೌಕರ್ಯವೂ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಈ ಆಸ್ಪತ್ರೆಗೆ ನೂರು ಕೋಟಿ ರೂಪಾಯಿ ಅನುದಾನ ಕೂಡ ನೀಡಲಾಗಿದೆ. ಇಷ್ಟಾದರೂ ವ್ಹೀಲ್‌ಚೇರ್ ಇಲ್ಲದೆ ಪ್ಲಾಸ್ಟಿಕ್ ಚೇರ್ನಲ್ಲಿ ವೃದ್ಧ ರೋಗಿಯನ್ನು ಸಂಬಂಧಿಕರು ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಇದ್ದೊಂದು ವ್ಹೀಲ್ಚೇರ್ಗೆಗೆ ಸಿಬ್ಬಂದಿ ಬೀಗ ಹಾಕಿ ಕಟ್ಟಿಹಾಕಿರುವುದು ಕಂಡುಬಂದಿದೆ. ಸದ್ಯ ರೋಗಿಯನ್ನು ಪ್ಲಾಸ್ಟಿಕ್ ಚೇರ್ನಲ್ಲಿ ಕರೆದುಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದು, ನಾಲ್ಕು ಜಿಲ್ಲೆಗಳಿಗೆ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಕೆಆರ್ ಆಸ್ಪತ್ರೆಗೇ ಇದೀಗ ಚಿಕಿತ್ಸೆ ಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಾಸಕ ಹರೀಶ್‌ಗೌಡ ಕೆಆರ್ ಆಸ್ಪತ್ರೆಗೆ ಭೇಟಿ ನೀಡಿದರು. ವ್ಹೀಲ್ಚೇರ್ಗೆ ಬೀಗ ಹಾಕಿರುವುದನ್ನು ಕಂಡು ಕೆಂಡಾಮಂಡಲ ಆದ ಶಾಸಕರು, ‘ನಿಮಗೆ ಸರ್ಕಾರದಿಂದ ಸಂಬಳ ಬರುತ್ತಿಲ್ಲವೇ? ಹೊರ ಗುತ್ತಿಗೆಯವರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲವೇ? ಸುಮ್ಮನೆ ಸರ್ಕಾರದ ಮರಿಯಾದೆ ಯಾಕೆ ಕಳೆಯುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಎಂದು ಮೇಲ್ವೀಚಾರಕಿ ಶೋಭಾಗೆ ತಾಕೀತು ಮಾಡಿದರು.
ಶಾಸಕರ ಭೇಟಿ ವೇಳೆ ಆಸ್ಪತ್ರೆಯಲ್ಲಿ ಸ್ಟ್ರೆಚ್ಚರ್, ವ್ಹೀಲ್‌ಚೇರ್ ಸೇರಿ ಸಾಮಾಗ್ರಿಗಳಿದ್ದ ಕೊಠಡಿಗೆ ಬೀಗ ಹಾಕಿರುವುದು ಕಂಡುಬಂತು. ಶಾಸಕರು ಬಂದರೂ, ಡೀನ್ ಬಂದರೂ ಬೀಗ ಸಿಗಲಿಲ್ಲ. ಕೊನೆಗೆ ಶಾಸಕ ಹರೀಶ್‌ಗೌಡ ಬೀಗ ಹಾಕಿದ ಬಾಗಿಲು ತಳ್ಳಿ ತೆಗೆಯುವ ಯತ್ನ ಮಾಡಿದರು. ನಂತರ ಶಾಸಕರ ಸಮ್ಮುಖದಲ್ಲೇ ಸಿಬ್ಬಂದಿ ಕಲ್ಲಿನಿಂದ ಹೊಡೆದು ಬೀಗ ಮುರಿದರು.
ಇದೇ ವೇಳೆ, ವಸ್ತುಗಳು ಹಾಳಾಗಿರುವ ಬಗ್ಗೆ ಅಧಿಕಾರಿ ಹಾಗೂ ಸಿಬ್ಬಂದಿ ನಡುವೆ ಕೆಸರೆರಚಾಟ ನಡೆಯಿತು. ಶಾಸಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಮೇಲ್ವಿಚಾರಕಿ ರಾಜೀನಾಮೆ ಕೊಡುವ ಬೆದರಿಕೆ ಹಾಕಿದರು. ಸ್ಥಳದಿಂದ ಕಣ್ಣೀರು ಹಾಕುತ್ತ ತೆರಳಿದರು. ಕೊನೆಗೆ ಶಾಸಕರು ಮನವೊಲಿಸಿದರು.
ಇದನ್ನೂ ಓದಿ: ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣ ಕ್ಯಾಂಟೀನ್ ಆಹಾರದಲ್ಲಿ ಹುಳ ಪತ್ತೆ!
ನನಗೆ ಆರ್ಟಿಐ ಕಾರ್ಯಕರ್ತರ ಬೆದರಿಕೆ ಇದೆ. 10 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಸೆಕ್ಯೂರಿಟಿ ಸೇರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಬಗ್ಗೆ ಪತ್ರ ಬರೆದರೆ 20 ಕ್ಕೂ ಹೆಚ್ಚು ಆರ್ಟಿಐ ಕಾರ್ಯಕರ್ತರು ಬಂದು ಪ್ರಶ್ನೆ ಮಾಡುತ್ತಾರೆ. ಇಲ್ಲಿ ವ್ಯವಸ್ಥೆ ಮೊದಲಿನಿಂದಲೂ ಹಾಳಾಗಿದೆ. ಡೀನ್ ಸೇರಿದಂತೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದೇನೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ಆಸ್ಪತ್ರೆ ಮೇಲ್ವಿಚಾರಕಿ ಶೋಭಾ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Tue, 13 August 24