ಮೈಸೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಅನ್ನ ಭಾಗ್ಯವು ಒಂದು, ಆದರೆ ಅನೇಕ ಅಡೆತಡೆಗಳಿಂದ 10 ಕೆಜಿ ಅಕ್ಕಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಪರ್ಯಾಯವಾಗಿ ಹಣ ನೀಡುವ ಪ್ಲಾನ್ ಹಾಕಿಕೊಂಡಿದೆ. ಈಗಾಗಲೇ ಅಕ್ಕಿ ಭಾಗ್ಯ ಯೋಜನೆಯಡಿಯಲ್ಲಿ ನೀಡುತ್ತಿದ್ದ ಆಹಾರ ಧಾನ್ಯಗಳು ಇತರ ಜಿಲ್ಲೆಗಳಿಗೆ ಸಮರ್ಪಕವಾಗಿ ತಲುಪುತ್ತಿದೆ. ಆದರೆ ನಾಗಮಲೆ ಹಾಗೂ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳಿಗೆ ತಲುಪುತ್ತಿಲ್ಲ. ಪುದೂರಿನಿಂದ ನಾಗಮಲೆವರೆಗಿನ ರಸ್ತೆ (10 ಕಿ.ಮೀ) ಡಾಂಬರೀಕರಣಗೊಳ್ಳದೆ ಅದೋಗತಿಯಲ್ಲಿದೆ. ಇದರಿಂದಾಗಿ ನಾಗಮಲೆ ಮತ್ತು ಸಮೀಪದ ಗ್ರಾಮಗಳಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಬರುವ ಆಹಾರಧಾನ್ಯ ಮತ್ತು ಇತರ ವಸ್ತುಗಳನ್ನು ಸಾಗಿಸಲು ಟ್ರಕ್ ಚಾಲಕರು ನಿರಾಕರಿಸುತ್ತಿದ್ದಾರೆ.
ಸುಮಾರು 50 ಕುಟುಂಬಗಳು ಸ್ಥಳೀಯವಾಗಿ ದೊರೆಯುವ ಆಹಾರಧಾನ್ಯಗಳನ್ನು ಅವಲಂಬಿಸಿವೆ. ಇತ್ತೀಚಿನವರೆಗೂ, ಮಲೆ ಮಹದೇಶ್ವರ ಬೆಟ್ಟದ ಹಳ್ಳಿಗಳಿಗೆ ಆಹಾರ ಧಾನ್ಯಗಳು ಮತ್ತು ಇತರ ಸರಕುಗಳನ್ನು ತಲುಪಲು ಹೇಸರಗತ್ತೆಗಳನ್ನು ಬಳಸಲಾಗುತ್ತಿತ್ತು. ಆದರೆ ಅವುಗಳನ್ನು ಸಾಕಲು ಬಹಳ ಖರ್ಚಾಗುತ್ತದೆ ಎಂದು ಹೇಸರಗತ್ತೆ ಮಾಲೀಕರು ಅವುಗಳನ್ನು ಸಾಕುವುದನ್ನು ನಿಲ್ಲಿಸಿದ್ದಾರೆ, ಇದೀಗ ಈ ಸಾರಿಗೆ ವಿಧಾನವು ಕೂಡ ಲಭ್ಯವಿಲ್ಲ ಎಂದು ದಿ ನ್ಯೂ ಇಂಡಿಯಾ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಬಡವರ ಪಾಲಾಗಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲು, ಗದಗದಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ ವಶಕ್ಕೆ
ಇನ್ನೂ ಈ ಬಗ್ಗೆ ಮಾತನಾಡಿದ ನಿವಾಸಿ ಚಂದ್ರು, ಪ್ರತಿ ತಿಂಗಳು ಆಹಾರಧಾನ್ಯ ಸಿಗುತ್ತಿಲ್ಲ, ಕಳಪೆ ಸಾರಿಗೆ ಸೌಲಭ್ಯದಿಂದಾಗಿ ನಾಲ್ಕು ತಿಂಗಳಿಗೊಮ್ಮೆ ಆಹಾರ ತಲುಪುತ್ತದೆ. ಎಂಎಂ ಹಿಲ್ಸ್‌ನ ಮೇಲಿರುವ ಪಡಸುಲನಾಥ ಗ್ರಾಮದ ಅನೇಕ ಕುಟುಂಬಗಳು ಆಹಾರ ಧಾನ್ಯಗಳನ್ನು ಪಡೆಯಲು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಪಾಲಾರ್‌ಗೆ ಹೋಗುತ್ತಾರೆ. ಸರ್ಕಾರ ವಾಹನ ವ್ಯವಸ್ಥೆ ಮಾಡಿದ್ದರೂ ರಸ್ತೆಯಿಂದಾಗಿ ಬೆಟ್ಟದ ಮೇಲಿನ ಹಳ್ಳಿಗಳಿಗೆ ಈ ವಾಹನಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ರಾಜಾ, ಅನ್ನ ಭಾಗ್ಯದ ಸದುಪಯೋಗ ಪಡೆಯುವ ಭರವಸೆಯನ್ನು ಹಲವು ಕುಟುಂಬಗಳು ಕೈಬಿಟ್ಟಿವೆ. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಶೀಘ್ರವೇ ಸಭೆ ಕರೆದು ತಮಗಿರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.
ರಸ್ತೆ ಹದಗೆಟ್ಟಿರುವ ಕಾರಣ ಎಂ.ಎಂ.ಹಿಲ್ಸ್‌ನ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಆಹಾರಧಾನ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಪಿಡಿಎಸ್ ಡೀಲರ್ ಮಣಿ ಹೇಳಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ ಮಾತನಾಡಿ, ಫಲಾನುಭವಿಗಳಿಗೆ ಧಾನ್ಯಗಳನ್ನು ಕೊಂಡೊಯ್ಯಲು ಪಿಡಿಎಸ್ ಪೂರೈಕೆದಾರರು ಬಾಡಿಗೆ ವಾಹನಗಳಿಗೆ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:07 pm, Thu, 13 July 23