ಬಡವರ ಪಾಲಾಗಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳರ ಪಾಲು, ಗದಗದಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ ವಶಕ್ಕೆ
ಗದಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಅನ್ನಭಾಗ್ಯ ಅಕ್ಕಿ ದಂಧೆ ನಡೆಯುತ್ತಿದೆ. ನರಸಾಪೂರ ಕೈಗಾರಿಕೆ ಪ್ರದೇಶದ ಗೋಡೌನ್ನಲ್ಲಿ ಅಪಾರ ಪ್ರಮಾಣದಲ್ಲಿ ಅಕ್ಕಿ ಸಂಗ್ರಹ ಮಾಡಲಾಗಿತ್ತು. ಖಚಿತ ಮಾಹಿತಿ ಪಡೆದ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ಅನ್ನಭಾಗ್ಯ ಅಕ್ಕಿ ಸೀಜ್ ಮಾಡಿದ್ದಾರೆ.
ಗದಗ: ಬಡವರ ಪಾಲಾಗಬೇಕಿದ್ದ ಅನ್ನಭಾಗ್ಯ ಯೋಜನೆಯ (Anna Bhagya Scheme) ಅಕ್ಕಿ ಕಳ್ಳರ ಪಾಲಾಗುತ್ತಿದೆ. ಗೋಡೌನ್ನಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಅಕ್ಕಿ ಸಂಗ್ರಹ ಮಾಡಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಅಕ್ಕಿ ವಶಕ್ಕೆ ಪಡೆದ ಘಟನೆ ಜಿಲ್ಲೆಯ ನರಸಾಪೂರ ಕೈಗಾರಿಕೆ ಪ್ರದೇಶದಲ್ಲಿ ನಡೆದಿದೆ.
ದಾಳಿ ವೇಳೆ ಲಕ್ಷಾಂತರ ಮೌಲ್ಯದ 50 ಕೆಜಿಯ 150 ಕ್ಕೂ ಹೆಚ್ಚು ಗೋಣಿ ಚೀಲಗಳು ಪತ್ತೆಯಾಗಿವೆ. ಯಾರಿಗೂ ಗೋತ್ತಾಗಬಾರದು ಅಂತ ಜನನೀಬಿಡ ಪ್ರದೇಶದ ಗೋಡೌನ್ನಲ್ಲಿ ದಂಧೆಕೋರರು ಅಪಾರ ಪ್ರಮಾಣದಲ್ಲಿ ಅಕ್ಕಿ ಸಂಗ್ರಹ ಮಾಡಿದ್ದರು. ಆದರೆ ಸಾರ್ವಜನಿಕರ ಮಾಹಿತಿ ಹಿನ್ನೆಲೆಯಲ್ಲಿ ಬೆಟಗೇರಿ ಸಿಪಿಐ ಬಿ ಜಿ ಸುಬ್ಬಾಪೂರಮಠ ಹಾಗೂ ಆಹಾರ ಇಲಾಖೆ ಆಹಾರ ನಿರೀಕ್ಷಕಿ ಸುವರ್ಣಾ ಜಂಟಿ ಕಾರ್ಯಾಚರಣೆ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಜೂನ್ ತಿಂಗಳಲ್ಲಿ ಅನ್ನಭಾಗ್ಯದ ಅಕ್ಕಿ ಪಡೆಯದವರಿಗಿಲ್ಲ ಹಣ; ಆಹಾರ ಇಲಾಖೆ ನಿರ್ಧಾರ
ಅಕ್ರಮ ಅನ್ನಭಾಗ್ಯ ಅಕ್ಕಿ ಸಂಗ್ರಹ ಮಾಡಿದ ಬಗ್ಗೆ ಅಧಿಕಾರಿಗಳಿಗೆ ಜುಲೈ 7ರ ತಡರಾತ್ರಿ ಮಾಹಿತಿ ತಿಳಿದುಬಂದಿದೆ. ಮಾಹಿತಿ ಸಿಕ್ಕಿದ್ದೇ ತಡ ರಾತ್ರೋರಾತ್ರಿ ಕೈಗಾರಿಕೆ ಪ್ರದೇಶದ ಗೋಡೌನ್ ಮೇಲೆ ದಾಳಿ ಮಾಡಿದ್ದಾರೆ. ತಡರಾತ್ರಿ ಆಗಿದ್ದರಿಂದ ಗೋಡೌನ್ ಸೀಲ್ ಮಾಡಿ ಹೋಗಿದ್ದರು. ಇಂದು ಮಧ್ಯಾಹ್ನ ಆಹಾರ, ಪೊಲೀಸ್ ಹಾಗೂ ಕಂದಾಯ ಇಲಾಖೆ ಸಮ್ಮುಖದಲ್ಲಿ ಸೀಲ್ ಓಪನ್ ಮಾಡಿದ ಅಧಿಕಾರಿಗಳು ಅನ್ನಭಾಗ್ಯ ಅಕ್ಕಿ ಸಂಗ್ರಹ ನೋಡಿ ಶಾಕ್ ಆಗಿದ್ದಾರೆ.
ಅಧಿಕಾರಿಗಳು ಅಕ್ಕಿ ಪರಿಶೀಲನೆ ಮಾಡಿದಾಗ ಅನ್ನಭಾಗ್ಯ ಯೋಜನೆಯಡಿ ನೀಡುವ ಅಕ್ಕಿ ಅಂತ ಖಚಿತವಾಗಿದೆ. ಹೀಗಾಗಿ ಅಕ್ಕಿ ತುಂಬಿದ್ದ ಗೋಣಿ ಚೀಲಗಳನ್ನು ಜಪ್ತಿ ಮಾಡಿದ ಪೊಲೀಸರು ಆಹಾರ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ. ಈ ಅಕ್ಕಿ ಯಾವುದೇ ಗೋಡೌನ್ಗಳಿಂದ ಹೋಗಿದ್ದಲ್ಲ. ಫಲಾನುಭವಿಗಳಿಗೆ ನೀಡಿದ ಅಕ್ಕಿ ಸಂಗ್ರಹ ಮಾಡಿರಬಹುದು ಅಂತ ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಗದಗ ಜಿಲ್ಲೆಯಲ್ಲಿ ಜೂನ್, ಜುಲೈ ತಿಂಗಳಲ್ಲೇ ಇದು ಮೂರನೇ ದಾಳಿಯಾಗಿದ್ದು, ಅಕ್ರಮ ಅಕ್ಕಿ ದಾಸ್ತಾನು ದಂಧೆಗೆ ಕಡಿವಾಣ ಹಾಕಲು ಸಾಕಷ್ಟು ಕ್ರಮ ಕೈಗೊಳ್ಳಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿ ಬಾಬುಸಾಬ್ ಹೇಳಿದ್ದಾರೆ.
ಅಕ್ರಮ ಅಕ್ಕಿ ಸಾಗಾಟಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ ಆಹಾರ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳ ಜಾಗೃತ ತಂಡಗಳು ರಚನೆ ಮಾಡಲಾಗಿದೆ. ಸರ್ಕಾರದ ಉದ್ದೇಶ ಯಶಸ್ವಿಗಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅವೆಲ್ಲವನ್ನು ಕಟ್ಟುನಿಟ್ಟಾಗಿ ಕೈಗೊಂಡಿದ್ದೇವೆ. ಈ ಬಾರಿ ಬಾಲ ಬಿಚ್ಚಿದರೆ ತಕ್ಕಪಾಠ ಕಲಿಸುತ್ತೇವೆ ಎಂದು ಆಹಾರ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Sat, 8 July 23