ಅಮರನಾಥ ಯಾತ್ರೆ ಕೈಗೊಂಡಿದ್ದ 300 ಕನ್ನಡಿಗರು ಸೇಫ್: ಹೆಚ್ಕೆ ಪಾಟೀಲ್
ಅಮರನಾಥ ಯಾತ್ರೆ ಕೈಗೊಂಡಿದ್ದ ಕರ್ನಾಟಕದ 300 ಯಾತ್ರಿಗಳು ಸುರಕ್ಷಿತರಾಗಿದ್ದಾರೆ ಎಂದು ಹೆಚ್ಕೆ ಪಾಟೀಲ್ ಹೇಳಿದ್ದಾರೆ.
ಗದಗ: ಅಮರನಾಥ ಯಾತ್ರೆ ಕೈಗೊಂಡಿದ್ದ ಕರ್ನಾಟಕದ 300 ಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ಸಚಿವ ಹೆಚ್ಕೆ ಪಾಟೀಲ್ (HK Patil) ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಅಮರನಾಥ ಯಾತ್ರೆಗೆ (Amarnath Yatra 2023) ತೆರಳಿದ್ದ 300 ಕನ್ನಡಿಗರು ಅಲ್ಲೇ ಸಿಲುಕಿದ್ದಾರೆ. ಎಲ್ಲರೂ ರಾತ್ರಿಯಿಡೀ ಚಳಿಯಲ್ಲಿ ತೊಂದರೆ ಅನುಭವಿಸಿದ್ದಾರೆ. ಇವರ ಬಗ್ಗೆ ಸೇನೆ ಮತ್ತು ಅಮರನಾಥ ದೇಗುಲ ಆಡಳಿತ ಮಂಡಳಿ ಕಾಳಜಿ ವಹಿಸಿದೆ. ಆತಂಕ ಪಡುವ ಅಗತ್ಯವಿಲ್ಲ, ಪಂಚತರಣಿಯಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ ಎಂದರು.
ಯಾತ್ರೆಗೆ ತೆರಳಿದ್ದ ಗದಗ ಜಿಲ್ಲೆಯ 23 ಜನರು ಸಿಲುಕಿದ್ದಾರೆ. ಈ ಪೈಕಿ ವಿಶಾಲ್, ವಿನೋದ್ ಎಂಬುವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಸಂಪರ್ಕದಲ್ಲಿದ್ದೇನೆ. ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ಹಿರಿಯ ಅಧಿಕಾರಿಗಳ ತಂಡ ರಚಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೆಲವು ಹಿರಿಯ ಐಎಎಸ್ ಅಧಿಕಾರಿಗಳು ಯಾತ್ರಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.
ಇದನ್ನೂ ಓದಿ: Amarnath Yatra: ಭಾರಿ ಮಳೆ, ಭೂಕುಸಿತ, ಸತತ 3ನೇ ದಿನವೂ ಅಮರನಾಥ ಯಾತ್ರೆ ಸ್ಥಗಿತ, ಸಾವಿರಾರು ಯಾತ್ರಿಕರ ಪರದಾಟ
ಹವಾಮಾನ ಸುಧಾರಣೆ ಹಿನ್ನೆಲೆ ಹೆಲಿಕಾಪ್ಟರ್ ಮೂಲಕ ಯಾತ್ರಾರ್ಥಿಗಳನ್ನು ಪಂಚತರಣಿಯಿಂದ ನೀಲಗ್ರತ್ ಸ್ಥಳಾಂತರಿಸಲಾಗಿದೆ. ಭಯದ ವಾತಾವರಣದಿಂದ ಯಾತ್ರಾರ್ಥಿಗಳು ಹೊರ ಬಂದಿದ್ದಾರೆ. ಬೆಂಗಳೂರಿನ ರಾಜೇಂದ್ರ ಎಂಬುವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕೈದು ಗಂಟೆಗಳಲ್ಲಿ ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತಲುಪುತ್ತಾರೆ. ಇಂದು ಸಂಜೆಯೊಳಗೆ ಶ್ರೀನಗರಕ್ಕೆ ತಲುಪಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಯಾತ್ರಾರ್ಥಿಗಳು ಸುರಕ್ಷಿತ
ದಕ್ಷಿಣ ಕನ್ನಡ ಜಿಲ್ಲೆಯ 20 ಮಂದಿ ಯಾತ್ರಾರ್ಥಿಗಳು ಸಿಆರ್ಪಿಎಫ್ನ ಕ್ಯಾಂಪ್ನಲ್ಲಿ ಸುರಕ್ಷಿತವಾಗಿದ್ದಾರೆ. ಬಂಟ್ಬಾಳ ತಾಲೂಕಿನ ನರಿಕೊಂಬಿನ ಸಂತೋಷ್ ಮಾರುತಿನಗರ ನೇತೃತ್ವದ ತಂಡ ರಂಭಾನ್ ಎಂಬಲ್ಲಿ ಉಂಟಾದ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಮಣ್ಣು ತೆರವು ಕಾರ್ಯ ನಡೆಯುತ್ತಿದ್ದರೂ ಮತ್ತೆ ಭೂಕುಸಿತ ಉಂಟಾಗಿದೆ. ಹೀಗಾಗಿ ಯಾತ್ರಿಗಳು ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ. ಆದರೆ ಈ ತಂಡಕ್ಕೆ ಇತ್ತ ಅಮರನಾಥ ದೇವಾಲಯಕ್ಕೂ ಹೋಗಲು ಸಾಧ್ಯವಾಗದೆ, ಅತ್ತ ಕೆಳಗೆ ಜಮ್ಮು ಕಾಶ್ಮೀರಕ್ಕೂ ಹೋಗಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಹೀಗಾಗಿ ಸಿಆರ್ಪಿಎಫ್ ಕ್ಯಾಂಪ್ನಲ್ಲಿ ಸುರಕ್ಷಿತವಾಗಿ ನೆಲೆಸಿದ್ದಾರೆ.
ನರಿಕೊಂಬುನಿಂದ 5 ಮಂದಿ, ಮಂಗಳೂರಿನ ಅಡ್ಯಾರಿನಿಂದ 8, ಪುತ್ತೂರು, ಉಡುಪಿ, ಮೂಡಬಿರೆ, ಉಪ್ಪಿನಂಗಡಿ ಕರಾಯದಿಂದ ತಲಾ ಒಬ್ಬೊಬ್ಬರು, ಸಜೀಪದಿಂದ ಮೂವರು ಯಾತ್ರಿಗಳು ಜುಲೈ 4ರಂದು ರೈಲಿನ ಮೂಲಕ ಯಾತ್ರೆ ಕೈಗೊಂಡಿದ್ದರು.
ವರದಿ: ಸಂಜೀವ್ ಪಾಂಡ್ರೆ ಗದಗ ಮತ್ತು ಪೃಥ್ವಿರಾಜ್ ಮಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Sun, 9 July 23