ಸಿಎಂ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆಯೇ ತಾಲೂಕು ಕಚೇರಿಗೆ RDX ಬಾಂಬ್ ಬೆದರಿಕೆ

ಮೈಸೂರಿನ ಸರಗೂರು ತಾಲೂಕು ಕಚೇರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನಡುವೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಆತಂಕ ಸೃಷ್ಟಿಸಿದೆ. ಈ ಹಿಂದೆ ಗದಗ, ಭಟ್ಕಳ, ತುಮಕೂರಿನಲ್ಲೂ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದವು. ಸದ್ಯಕ್ಕೆ ಮೈಸೂರಿನ ಕಚೇರಿಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆಯೇ ತಾಲೂಕು ಕಚೇರಿಗೆ RDX ಬಾಂಬ್ ಬೆದರಿಕೆ
ಸಿಎಂ ಸಿದ್ದರಾಮಯ್ಯ ಮೈಸೂರು ಭೇಟಿಯ ವೇಳೆಯೇ ತಾಲೂಕು ಕಚೇರಿಗೆ RDX ಬಾಂಬ್ ಬೆದರಿಕೆ
Edited By:

Updated on: Dec 22, 2025 | 1:37 PM

ಮೈಸೂರು, ಡಿಸೆಂಬರ್ 22: ಇತ್ತೀಚಿಗೆ ಮಂಗಳೂರು, ಭಟ್ಕಳ ಸೇರಿದಂತೆ ರಾಜ್ಯದಲ್ಲಿ ಹುಸಿ ಬಾಂಬ್ ಬೆದರಿಕೆ (Bomb Threat) ಇ-ಮೇಲ್​ಗಳು ಹೆಚ್ಚಿದ್ದು, ಇದೀಗ ಸಿಎಂ ಮೈಸೂರು ಭೇಟಿಯ ನಡುವೆಯೇ ಸರಗೂರು ತಾಲೂಕು ಕಚೇರಿಗೂ ಇದೇ ರೀತಿಯ ಇ-ಮೇಲ್ ಬಂದಿರುವುದು ಆತಂಕ ಸೃಷ್ಟಿಸಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಇ-ಮೇಲ್​ನಲ್ಲಿ ನಟ ಅಜಿತ್ ಕುಮಾರ್ ಹೆಸರು ಉಲ್ಲೇಖ

ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಿರುವ ವೇಳೆಯಲ್ಲಿಯೇ ಮೈಸೂರಿನ ಸರಗೂರು ತಾಲ್ಲೂಕು ಕಚೇರಿಗೆ ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಬಂದಿದೆ. ಮಧ್ಯಾಹ್ನ 1 ಗಂಟೆಗೆ ಸ್ಫೋಟಗೊಳ್ಳುವ ಎಚ್ಚರಿಕೆ ನೀಡಲಾಗಿದ್ದು, ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ನಟ ಅಜಿತ್ ಕುಮಾರ್ ಹೆಸರನ್ನೂ ಸಹ ಮೇಲ್​ನಲ್ಲಿ ಉಲ್ಲೇಖಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ.

ಇದೇ ಮೊದಲೇನಲ್ಲ ಹುಸಿ ಬೆದರಿಕೆ

ಡಿ.12ರಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಬಾಂಬ್ ಬೆದರಿಕೆ ಇಮೇಲ್ ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿದ್ದು, ತಮಿಳುನಾಡಿನ 13 ವರ್ಷದ ಬಾಲಕಿಯಿಂದ ಬಂದ ಹುಸಿ ಬೆದರಿಕೆ ಎಂದು ತಿಳಿದುಬಂದಿತ್ತು. ಡಿ.15ರಂದು ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಡಿಸಿ ಕಚೇರಿಗೆ ಬಾಂಬ್​​ ಬೆದರಿಕೆ ಹಾಕಲಾಗಿದ್ದು, ಪಾಕ್​ನ ಐಎಸ್​​ಐ ಮತ್ತು ಎಲ್​​​ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್​ಗಳಿಂದ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದರು.

ಇದನ್ನೂ ಓದಿ ಗದಗ, ಮಂಗಳೂರು ಆಯ್ತು ಈಗ ಭಟ್ಕಳದ ತಹಶೀಲ್ದಾರ್ ಕಚೇರಿಗೂ ಬಾಂಬ್ ಬೆದರಿಕೆ!

ಇದಷ್ಟೇ ಅಲ್ಲದೇ ಉತ್ತರ ಕನ್ನಡದ ಭಟ್ಕಳ ಮತ್ತು ತುಮಕೂರಿನ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರ ಅಧಿಕೃತ ಇ-ಮೇಲ್ ಐಡಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಪೊಲೀಸರು ಡಿಸಿ ಕಚೇರಿಗೆ ಧಾವಿಸಿ ಒಳಭಾಗದಲ್ಲಿ ತೀವ್ರ ತಪಾಸಣೆ ನಡೆಸಿದ್ದರು. ಈ ಎಲ್ಲಾ ಇ-ಮೇಲ್​ಗಳೂ ಹುಸಿ ಬೆದರಿಕೆಗಳೆಂದು ತಿಳಿದುಬಂದಿದ್ದವು. ಇದೀಗ ಮತ್ತೊಮ್ಮೆ ಮೈಸೂರಿನಲ್ಲಿಯೂ ಬೆದರಿಕೆ ಇ-ಮೇಲ್ ಬಂದಿದ್ದು, ಗೊಂದಲ ಸೃಷ್ಟಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.