
ಮೈಸೂರು, ಅಕ್ಟೋಬರ್ 09: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಚಿನ್ನದ ಅಂಬಾರಿ ಹೊರುವ ಪ್ರಮುಖ ಆನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಬಾರಿ ಅಂಬಾರಿ ಹೊರುವ ರೇಸ್‌ನಲ್ಲಿದ್ದ ಮಹೇಂದ್ರ ಆನೆ, ತಾಲೀಮಿನ ವೇಳೆ ಅರ್ಧ ದಾರಿಯಲ್ಲೇ ನಿಂತುಬಿಟ್ಟಿದ್ದಾನೆ.
ಒಂದು ವಾರದ ಹಿಂದೆ ಮೊದಲ ಬಾರಿಗೆ ಮಹೇಂದ್ರನಿಗೆ ಮರದ ಅಂಬಾರಿ ಹೊರಿಸಿ ತಾಲೀಮು ಮಾಡಿಸಲಾಗಿತ್ತು. ಆದರೆ ವಿಪರೀತ ಮಳೆಯ ಕಾರಣ ತಾಲೀಮನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಇದೀಗ ಎರಡನೇ ಬಾರಿಯೂ ತಾಲೀಮಯ ಮೊಟಕುಗೊಂಡಿದ್ದು, ದಸರಾ ಅಂಬಾರಿ ಹೊರುವ ಕ್ಯಾಪ್ಟನ್ ರೇಸ್‌ನಿಂದ ಮಹೇಂದ್ರ ಬಹುತೇಕ ಹೊರಬೀಳುವ ಸಾಧ್ಯತೆ ಇದೆ.
280 ಕೆಜಿ ತೂಕದ ಮರದ ಅಂಬಾರಿ, ಗಾದಿ, ಮರಳು ಮೋಟೆ ಸೇರಿದಂತೆ ಸುಮಾರು ಸಾವಿರ ಕೆಜಿ ಭಾರ ಇರಿಸಿ ಮಹೇಂದ್ರನಿಗೆ ಮೂರನೇ ಹಂತದ ತಾಲೀಮು ನಡೆಸಲಾಗುತ್ತಿತ್ತು. ಆದರೆ, ಅರಮನೆಯಿಂದ ಹೊರಟ ಗಜಪಡೆ ನಗರದ ಆಯುರ್ವೇದಿಕ್ ವೃತ್ತದ ಬಳಿ ತಲುಪುತ್ತಿದ್ದಂತೆ ಮಹೇಂದ್ರ ಇದ್ದಕ್ಕಿದ್ದಂತೆ ನಿಂತು ಮುಂದೆ ಸಾಗಲು ನಿರಾಕರಿಸಿದ. ತಕ್ಷಣವೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು, ಹಗ್ಗದ ನೆರವಿನಿಂದ ಮರದ ಅಂಬಾರಿಯನ್ನು ಕೆಳಗಿಳಿಸಿ ಆಟೋ ಮೂಲಕ ಸ್ಥಳಾಂತರಿಸಿದ್ದಾರೆ. ಬಳಿಕ ಆನೆಯನ್ನು ಸುರಕ್ಷಿತವಾಗಿ ಅರಮನೆಗೆ ವಾಪಸ್ ಕರೆತರಲಾಗಿದೆ.

ಇದನ್ನೂ ಓದಿ ದಸರಾ 2026: ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಶುಭಸುದ್ದಿ, ಅ.16 ರಿಂದ 27 ರವರೆಗೆ 3,000 ಹೆಚ್ಚುವರಿ ಬಸ್ ಸೇವೆ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅರಣ್ಯಾಧಿಕಾರಿಗಳು, “ಮಹೇಂದ್ರ ಆನೆ ಸಂಪೂರ್ಣ ಆರೋಗ್ಯವಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ ನಾಲ್ಕು ಬಾರಿ ಅಂಬಾರಿ ಹೊತ್ತ ಅನುಭವವೂ ಇದಕ್ಕಿದೆ. ಆದರೆ ಆನೆಗಳಿಗೆ ಆಯಾಸವಾದಾಗ ಅಥವಾ ಮುಜುಗರವಾದಾಗ ತಾಲೀಮು ನಿಲ್ಲಿಸುವುದು ನಮ್ಮ ಕರ್ತವ್ಯ. ವಿಶ್ರಾಂತಿಯ ಅಗತ್ಯವಿರುವುದರಿಂದ ಸದ್ಯಕ್ಕೆ ತಾಲೀಮಿನಿಂದ ವಿರಾಮ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಈ ಬಾರಿಯ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ‘ಕ್ಯಾಪ್ಟನ್’ ಪಟ್ಟದ ರೇಸ್‌ನಿಂದ ಮಹೇಂದ್ರ ಬಹುತೇಕ ಹೊರಬಿದ್ದಂತಾಗಿದೆ. ಅಂತಿಮ ನಿರ್ಧಾರವನ್ನು ಅರಣ್ಯ ಇಲಾಖೆ ಕೈಗೊಳ್ಳಲಿದ್ದು, ಮುಂದಿನ ತಾಲೀಮಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Fri, 9 October 26