
ಮೈಸೂರು, (ಸೆಪ್ಟೆಂಬರ್ 28): ಇವತ್ತು ಬೆಳಗ್ಗೆ 9 ಗಂಟೆಗೆ ಜಿಲ್ಲಾಡಳಿತದಿಂದ ಗಜಪಡೆ ಮಾವುತರು ಕಾವಾಡಿಗಳು ಅವರ ಕುಟುಂಬಕ್ಕೆ ಉಪಹಾರ ಕೂಟ ಮತ್ತು ಕಿಟ್ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸುಮಾರು 800 ಜನರಿಗೆ ಭರ್ಜರಿ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಒಬ್ಬಟ್ಟು, ತುಪ್ಪ, ಇಡ್ಲಿ, ಸಾಂಬಾರ್, ಚಟ್ನಿ, ವಡೆ, ದೋಸೆ, ಸಾಗು, ಪೊಂಗಲ್, ಹುಳಿಗೊಜ್ಜು, ಉಪ್ಪಿಟ್ಟು, ಜಿಲೇಬಿ ಜೊತೆಗೆ ಕಾಫಿ. ಹೀಗೆ ಬಗೆಬಗೆಯ ತಿಂಡಿ ತಿನಿಸುಗಳು ಬಿಸಿ ಬಿಸಿಯಾಗಿದ್ವು. ಆದ್ರೆ ಇದರ ನಡುವೆ ಸಚಿವ ಶಾಸಕರ ಮುನಿಸು ಇದಕ್ಕಿಂತ ಕಾವು ಪಡೆದುಕೊಂಡಿತು. ಹೌದು…ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಬಾರದ ಹಿನ್ನೆಲೆ ಶಾಸಕ ತನ್ವೀರ್ ಸೇಠ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,’ಸಮಯ ಪ್ರಜ್ಞೆ ಇಲ್ವೇರಿ’ ಎಂದು ಗರಂ ಆಗಿರುವ ಪ್ರಸಂಗ ನಡೆದಿದೆ.
ಇಂದು ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿ ಕುಟುಂಬಕ್ಕೆ ಜಿಲ್ಲಾಡಳಿತ ವತಿಯಿಂದ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ನಿಗದಿತ ಸಮಯಕ್ಕೆ ಉಸ್ತುವಾರಿ ಸಚಿವ ಯತೀಂದ್ರ ಅವರು ಆಗಮಿಸಿರಲಿಲ್ಲ. ಸುಮಾರು ಅರ್ಥ ಗಂಟೆವರೆಗೂ ಕಾದು ಬೇಸರಗೊಂಡ ಶಾಸಕ ತನ್ವೀರ್ ಸೇಠ್, ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿಂದ ತೆರಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ, ಮಾವುತರು ಹಾಗೂ ಕಾವಾಡಿಗಳ ಕುಟುಂಬ ಹಾಗೂ ಅಧಿಕಾರಿಗಳು ಕಾಯುತ್ತಿದ್ದರು. ಇದರಿಂದ ಸಮಾಧಾನಗೊಂಡ ಶಾಸಕ ತನ್ವೀರ್ ಸೇಠ್, ಕೋಪದಿಂದ ಸಮಾರಂಭದಿಂದ ಹೋರಟು ಹೋದರು. ಆದರೆ ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಸಮಯ ಪ್ರಜ್ಞೆ ಇರಬೇಕು. ಬೇರೆ ಕಾರ್ಯಕ್ರಮ ಆದರೆ ತಡ ಆದರೂ ಹೇಗೋ ಸರಿ ಮಾಡಬಹುದು. ಮಾವುತರಿಗೆ ಕಾಯುಸಿವುದಾ? ಸಮಯ ಪ್ರಜ್ಞೆ ಇಲ್ಲ ಅಂದ್ರೆ ಏನ್ಮಾಡಬೇಕು? ಇಂತಹ ಕಾರ್ಯಕ್ರಮಕ್ಕೆ ತಡವಾಗಿ ಬಂದರೆ ಅದರ ಅರ್ಥ ಏನು? ಇದನ್ನೆಲ್ಲ ಸಹಿಸಿಕೊಳ್ಳಲು ಆಗಲ್ಲ. ಬೇರೆದೆಲ್ಲ ಏನು ಬೇಕಾದರೂ ಮಾಡಲಿ, ಆದರೆ ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್ ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯನವರ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ತೆರಳಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಸ್ಪಷ್ಟೀಕರಣ ಕೊಟ್ಟ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ,
ನಮ್ಮದು ಹೊಸ ಮನೆ ವಸ್ತುಗಳು ಬಹಳ ಕಡೆ ಚೆಲ್ಲಾ ಪಿಲ್ಲಿ ಆಗಿತ್ತು. ಮನೆಯಲ್ಲಿ ಅಮ್ಮ ಇರಲಿಲ್ಲ. ಕೆಲಸಗಾರರು ಇರಲಿಲ್ಲ. ಹೀಗಾಗಿ ಕೆಲವೊಂದಿಷ್ಟು ವ್ಯವಸ್ಥೆಗಳನ್ನು ಮಾಡಿ ಬರುವುದರಲ್ಲಿ ತಡವಾಯಿತು. ಉದ್ದೇಶಪೂರ್ವಕವಾಗಿ ನಾನು ತಡವಾಗಿ ಬಂದಿಲ್ಲ. ತನ್ವೀರ್ ಸೇಠ್ ಜೊತೆ ಫೋನ್‌ನಲ್ಲಿ ಈ ವಿಚಾರ ಮಾತನಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಹೊರತಪಡುಸಿ ಉಪಹಾರ ಕೂಟ ಸಖತ್ ಆಗಿತ್ತು. ಜೊತೆಗೆ ನೆನ್ನೆಯಷ್ಟೇ ಮೈಸೂರಿನ ಲಲಿತಮಹಲ್‌ನಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರಿಂದ ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ವಿಶೇಷ ಬಾಡೂಟ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕೇವಲ ಊಟದ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲ. ಮಾವುತರು, ಕಾವಾಡಿಗಳ ಜೊತೆಗೇ ಕುಳಿತು ಶಾಸಕ ಅನಿಲ್ ಚಿಕ್ಕಮಾದು ಊಟ ಸವಿದಿದ್ದಾರೆ. ಊಟದ ಬಳಿಕ ಕಾಡಿನ ಮಕ್ಕಳು ಹಾಡು, ಕುಣಿತದಲ್ಲಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದ್ದಾರೆ. ದಸರಾ ಗಜಪಡೆಯ ಹಿಂದಿನ ಶ್ರಮಜೀವಿಗಳಿಗೆ ಆತಿಥ್ಯದ ಮೂಲಕ ಗೌರವ ಸಲ್ಲಿಸಲಾಗಿದೆ.
ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಗೌರವದ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಉಪಹಾರ ಕೂಟದಲ್ಲಿ ಸಚಿವರಿಗಾಗಿ ಕಾಯುವಂತಾದರೆ, ಮತ್ತೊಂದೆಡೆ ಶಾಸಕ ಅನಿಲ್ ಚಿಕ್ಕಮಾದು ಅವರಿಂದ ಆತ್ಮೀಯ ಬಾಡೂಟದ ಆತಿಥ್ಯ. ದಸರಾ ಸಂಭ್ರಮದ ನಡುವೆ ರಾಜಕೀಯ ನಾಯಕರ ನಡೆ ಇದೀಗ ಗಮನ ಸೆಳೆದಿದೆ.
Published On - 6:05 pm, Mon, 28 September 26