ದಸರಾ ಅಂಬಾರಿ ಆನೆ ಆಯ್ಕೆ ವಿಚಾರ ನನ್ನಿಂದ ಮುಚ್ಚಿಡಲಾಗಿತ್ತು: ಪ್ರಮೋದಾದೇವಿ ಒಡೆಯರ್ ಬೇಸರ

ಈ ಬಾರಿಯ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಆನೆ ಯಾವುದು ಎಂದು ಸಾಕಷ್ಟು ಕುತೂಹಲ ಕೆರಳಿಸಿತ್ತು. ಬಳಿಕ ಆ ಜವಾಬ್ದಾರಿಯನ್ನ ಪ್ರಶಾಂತ ಆನೆಗೆ ನೀಡಲಾಗಿತ್ತು. ಆದರೆ ಗಜಪಡೆ ಕ್ಯಾಪ್ಟನ್ ಆಯ್ಕೆ ವಿಷಯವನ್ನು ನನ್ನ ಬಳಿ ಮುಚ್ಚಿಡಲಾಗಿತ್ತು ಎಂದು ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ಕಾರಕ್ಕೆ ಕೆಲ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.

ದಸರಾ ಅಂಬಾರಿ ಆನೆ ಆಯ್ಕೆ ವಿಚಾರ ನನ್ನಿಂದ ಮುಚ್ಚಿಡಲಾಗಿತ್ತು: ಪ್ರಮೋದಾದೇವಿ ಒಡೆಯರ್ ಬೇಸರ
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
Edited By:

Updated on: Oct 25, 2026 | 8:08 PM

ಮುಖ್ಯಾಂಶಗಳು

  • ಗಜಪಡೆ ಕ್ಯಾಪ್ಟನ್ ಆಯ್ಕೆ ವಿಷಯವನ್ನು ನನ್ನ ಬಳಿ ಮುಚ್ಚಿಡಲಾಗಿತ್ತು
  • ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಪ್ರಕಟಣೆ
  • ಸರ್ಕಾರಕ್ಕೆ 3 ಸಲಹೆ ನೀಡಿದ ಪ್ರಮೋದಾದೇವಿ ಒಡೆಯರ್

ಮೈಸೂರು, ಅಕ್ಟೋಬರ್​ 25: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೆ ಬಂಬೂಸವಾರಿ. ಈ ಬಾರಿಯ ಬಂಬೂಸವಾರಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕ್ಯಾಪ್ಟನ್ ಪ್ರಶಾಂತ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನ ಹೊತ್ತು ಮೆರೆಸಿದ್ದಾನೆ. ಆದರೆ ‘ಗಜಪಡೆ ಕ್ಯಾಪ್ಟನ್ ಆಯ್ಕೆ ವಿಷಯವನ್ನು ನನ್ನ ಬಳಿ ಮುಚ್ಚಿಡಲಾಗಿತ್ತು’ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾನೇ ಖುದ್ದಾಗಿ ಕೇಳಿದರೂ ಮಾಹಿತಿ ಕೊಡಲಿಲ್ಲ 

ಈ ಕುರಿತಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ‘45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಜಪಡೆ ಕ್ಯಾಪ್ಟನ್ ಆಯ್ಕೆ ವಿಚಾರ ಮುಚ್ಚಿಟ್ಟಿದ್ದಾರೆ. ಕೊನೆ ಕ್ಷಣದವರೆಗೂ ನನಗೆ ಅಂಬಾರಿ ಆನೆ ಬಗ್ಗೆ ಮಾಹಿತಿ ಕೊಡಲಿಲ್ಲ. ನಾನೇ ಖುದ್ದಾಗಿ ಕೇಳಿದರೂ ಡಿಸಿಎಫ್ ಯಾವುದೇ ಮಾಹಿತಿ ಕೊಡಲಿಲ್ಲ. ಒಂದು ವಾರ ಮುಂಚಿತವಾಗಿ ಅಂಬಾರಿ ಆನೆ ವಿಚಾರ ತಿಳಿಸಿ ಎಂದು ನಾನೇ ಕೇಳಿದರೂ ತಿಳಿಸಲಿಲ್ಲ. ಕೊನೆಗೆ DCF ಮೂಲಕ ಜಂಬೂಸವಾರಿ ಆನೆ ಬಗ್ಗೆ ತಿಳಿದುಕೊಳ್ಳಬೇಕಾಯ್ತು. ಇದು ನನಗೆ ತೀವ್ರ ಬೇಸರ ಉಂಟುಮಾಡಿದೆ’ ಎಂದಿದ್ದಾರೆ.

ಸರ್ಕಾರಕ್ಕೆ ಸಲಹೆ ನೀಡಿದ ಪ್ರಮೋದಾದೇವಿ ಒಡೆಯರ್

ಇನ್ನು ಮೈಸೂರು ದಸರಾ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಸರ್ಕಾರಕ್ಕೆ ಪ್ರಮೋದಾದೇವಿ ಒಡೆಯರ್ ಕೆಲ ಸಲಹೆ ನೀಡಿದ್ದಾರೆ. ಮೊದಲ ದಿನದಿಂದ 7ನೇ ದಿನದವರೆಗೆ ಸರ್ಕಾರ ಎಂದಿನಂತೆಯೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಹುದು. ಆಯುಧ ಪೂಜೆ, ವಿಜಯದಶಮಿ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ 2026: ಈ ಬಾರಿ ಜಟ್ಟಿ ಕಾಳಗ ಸ್ಥಗಿತ ಆಗಿದ್ಯಾಕೆ? ರಾಜಮಾತೆ ಪ್ರಮೋದಾ ದೇವಿ ಏನು ಹೇಳಿದ್ರು ನೋಡಿ

ಇದರಿಂದ ರಾಜ ಕುಟುಂಬ ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಆಯುಧ ಪೂಜೆ, ವಿಜಯದಶಮಿ ಆಚರಣೆ ನಡೆಸಲು ಸಾಧ್ಯವಾಗುತ್ತದೆ. ಚಾಮುಂಡಿಬೆಟ್ಟದಲ್ಲಿ ರಥೋತ್ಸವ ನಡೆಯುವ ದಿನದಂದೇ ಸರ್ಕಾರ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಮೆರವಣಿಗೆ ನಡೆಸಬಹುದು. ಅಂದು ಸಂಜೆ ಸೂಕ್ತ ಸಮಯದಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಈ ಮೆರವಣಿಗೆಯನ್ನು ನಡೆಸುವುದು ಸೂಕ್ತವಾಗಿರುತ್ತದೆ ಎಂದು ಸರ್ಕಾರಕ್ಕೆ ಪ್ರಮೋದಾದೇವಿ ಒಡೆಯರ್ ಸಲಹೆ ನೀಡಿದ್ದಾರೆ.

ಜಟ್ಟಿ ಕಾಳಗ ರದ್ದಾಗಿದ್ದು ಇದೇ ಮೊದಲಲ್ಲ ಎಂದ ಪ್ರಮೋದಾದೇವಿ 

ಜಟ್ಟಿ ಕಾಳಗ ರದ್ದಾದ ಬಗ್ಗೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ‘ಜಟ್ಟಿ ಕಾಳಗ ರದ್ದಾಗಿದ್ದ ಇದೇ ಮೊದಲಲ್ಲ. 1970 ಮತ್ತು 1980ರಲ್ಲಿ ಎರಡು ಬಾರಿ ರದ್ದಾಗಿತ್ತು. ಜಟ್ಟಿ ಕಾಳಗಕ್ಕೆ ಯಾವುದೇ ಧಾರ್ಮಿಕ‌ ಮಹತ್ವವೂ ಇಲ್ಲ, ಯಾವುದೇ ಸಂಕೇತವೂ ಅಲ್ಲ. ಅದು ಕುಸ್ತಿ ಪಂದ್ಯದ ಅಂತ್ಯ ಅಷ್ಟೇ, ಇದು ಒಂದು ಕ್ರೀಡೆಯ ಭಾಗ. ಇದರ ಆಚೆಗೆ ಇದಕ್ಕೆ ಪ್ರತ್ಯೇಕ ಮಹತ್ವ ಇಲ್ಲ. ಬೂದುಕುಂಬಳಕಾಯಿ ಕತ್ತರಿಸುವ ವಿಧಿ ಮಾತ್ರ ನಮ್ಮ ಆಚರಣೆಯ ಸೂಚಕ. ಜಟ್ಟಿ ಕಾಳಗ ಇದರ ಭಾಗ ಅಲ್ಲ. ನಾವು, ನಮ್ಮ ಮುಹೂರ್ತದಂತೆ ವಿಜಯಯಾತ್ರೆ ನಡೆಸಿದ್ದೇವೆ. ಪೊಲೀಸರು, ಜಟ್ಟಿ ಉಸ್ತಾದ ಸಮನ್ವಯ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ಈ ಸಮಸ್ಯೆ ಪ್ರತಿ ವರ್ಷವೂ ಇದೆ, ಇದು ಹೊಸದಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Pramoda Devi Wadiyar Unhappy Over Dasara Elephant Selection And Palace Rituals

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us