
ಮೈಸೂರು, ಅಕ್ಟೋಬರ್ 28: ದಸರಾ ವೇಳೆ ಉಂಟಾದ ಗೊಂದಲಗಳ ಬಗ್ಗೆ ರಾಜಮಾತೆ ಪ್ರಮೋದಾದೇವಿ ಬೇಸರ ವ್ಯಕ್ತಪಡಿಸಿ ಬರೆದಿರುವ ಪತ್ರ ಕೋಲಾಹಲ ಸೃಷ್ಟಿಸಿದೆ. ಪ್ರಮೋದಾದೇವಿ ಪತ್ರಕ್ಕೆ ನಿನ್ನೆಯಷ್ಟೇ ಸಚಿವ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು. ನಮ್ಮದು ತಪ್ಪಿದ್ದರೆ ತಿದ್ದುಕೊಳ್ಳುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಕೂಡ ಹೇಳಿದ್ದಾರೆ. ಇದೀಗ ಸುದೀರ್ಘ ಪತ್ರ ಬರೆಯುವ ಮೂಲಕ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಕೂಡ ಕೌಂಟರ್ ನೀಡಿದ್ದಾರೆ.
ಪ್ರಮೋದಾದೇವಿ ಒಡೆಯರ್ ಆಕ್ಷೇಪಗಳಿಗೆ ಡಿಸಿಗೆ ಸುದೀರ್ಘ ಪತ್ರ ಬರೆಯುವ ಮೂಲಕ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದಾರೆ. ‘ಮೈಸೂರು ಅರಮನೆ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಿಲ್ಲ. ಅಗತ್ಯವಿದ್ದ ಕಡೆ ಮಾತ್ರ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದೆವು. ರಾಜ್ಯಪಾಲರು, ಸಿಎಂ, ಸಚಿವರು, ವಿದೇಶಿ ರಾಯಭಾರಿಗಳು, ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಭದ್ರತೆ, ಕಾಲ್ತುಳಿದಂತಹ ಅಹಿತಕರ ಘಟನೆ ತಡೆದಿದ್ದೇವೆ. ಧಾರ್ಮಿಕ ಚಟುವಟಿಕೆ ಸುಗಮವಾಗಿ ನಡೆಯುವಂತೆ ಕ್ರಮಕೈಗೊಳ್ಳಲಾಗಿದೆ. ಅರಮನೆ ಆಡಳಿತ ಮಂಡಳಿ ಜೊತೆ ಕಳೆದ ಎರಡು ತಿಂಗಳಿಂದ ಸಮನ್ವಯ ಸಭೆ ಮಾಡಿದ್ದೇವೆ. ಜಟ್ಟಿ ಕಾಳಗದಲ್ಲೂ ನಮ್ಮ ತಪ್ಪಿಲ್ಲ’ ಎಂದಿದ್ದಾರೆ.
‘ಪ್ರತಿ ವರ್ಷದಂತೆ ಈ ವರ್ಷ ಕೂಡ ವಜ್ರಮುಷ್ಠಿ ಕಾಳಗಕ್ಕೆ ಆಗಮಿಸುವ ಜಟ್ಟಿ ಸಮುದಾಯದವರಿಗೆ ಬ್ರಹ್ಮಪುರಿ ದ್ವಾರದ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಜ್ರಮುಷ್ಠಿ ಕಾಳಗಕ್ಕಾಗಿ ನಿಗದಿತ ಸಮಯವನ್ನು ನಿಗದಿಪಡಿಸಲಾಗಿದ್ದು, 3 ತಂಡ ಸರಿಯಾದ ಸಮಕ್ಕೆ ಬಂದಿತ್ತು, 4ನೇ ತಂಡ ತಡವಾಗಿದೆ. ತಮ್ಮ ಜೊತೆ ಪಾಸ್ ಇಲ್ಲದವರನ್ನ ಕರೆದುಕೊಂಡು ಬಂದಿದ್ದರು. ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಧಿಕೃತ ವ್ಯಕ್ತಿಗಳು ಇರಲಿಲ್ಲ. ಅಧಿಕಾರಿಗಳ ಕುಟುಂಬ ಸದಸ್ಯರಿಗೆ ಅವಕಾಶ ಕಲ್ಪಿಸಿರಲಿಲ್ಲ. ಹೊಸ ಆನೆ ನಿಯೋಜನೆಗೊಂಡ ಕಾರಣಕ್ಕೆ ದಸರಾ ಪಾಸ್ ಹೊಂದಿದ್ದವರಿಗಷ್ಟೇ ಅವಕಾಶ ನೀಡಿದ್ದೆವು. ಅಂಬಾರಿ ಸ್ವೀಕರಿಸುವಾಗ, ವಾಪಸ್ ಕೊಡುವಾಗ ಸುರಕ್ಷತೆ ಕಾಪಾಡಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಯಾವ ಕಾರಣಕ್ಕೂ ಕ್ಷಮೆ ಕೇಳಲ್ಲ: ನನಗೆ ರಾಜಮಾತೆ ಪ್ರಮೋದಾದೇವಿ ಜತೆ ಮಾತನಾಡುವ ಅಗತ್ಯ ಇಲ್ಲ ಎಂದ ಯತೀಂದ್ರ
‘ಅಧಿಕೃತ ಪಾಸ್ ಇದ್ದವರಿಗೆ ಅಂಬಾರಿ ಕಟ್ಟುವಾಗ ಹಾಗೂ ಅಂಬಾರಿ ವಾಪಸ್ ಕೊಡುವಾಗ ಅರಮನೆ ಪ್ರತಿನಿಧಿಗಳ ಉಪಸ್ಥಿತಿಗೆ ಮುಕ್ತ ಅವಕಾಶ ನೀಡಿದ್ದೆವು. ರಾಜ ಕುಟುಂಬದ ಪಾರ್ಕಿಂಗ್ ವ್ಯವಸ್ಥೆಗೂ ಭದ್ರತೆ ಕಲ್ಪಿಸಿದ್ದು, ಅರಮನೆ ಬ್ರಹ್ಮಪುರಿ ಗೇಟ್ ಬಳಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು’ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.