ಮೈಸೂರು: ಗ್ಯಾಸ್ ಪೈಪ್‌ಲೈನ್ (Gas Pipeline) ಬಂದರೆ ಜನರಿಗೆ 400 ರೂ ಉಳಿತಾಯವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹೇಳಿದ್ದಾರೆ. ಪೈಪ್ ಮೂಲಕ ನೇರ ಗ್ಯಾಸ್ ಸಂಪರ್ಕ ಯೋಜನೆಯ ಉದ್ದೇಶ, ಪ್ರಯೋಜನಗಳ ಬಗ್ಗೆ ಮೈಸೂರಿನಲ್ಲಿ ಮಾತನಾಡಿ, ಮಾಹಿತಿ ನೀಡಿದರು. ಗ್ಯಾಸ್ ಪೈಪ್‌ಲೈನ್ ಅತ್ಯಂತ ಮಹತ್ವದ್ದು ಎಂದು ತಿಳಿಸಿರುವ ಅವರು, ಅಡುಗೆ ಸಿಲಿಂಡರ್ ಬೆಲೆ ಈಗ 904 ರೂಪಾಯಿ ಇದೆ. ಸಿಲಿಂಡರ್ ಮನೆಗೆ ಸಾಗಿಸಲು ಪ್ರತ್ಯೇಕ ಬೆಲೆ ಇರುತ್ತದೆ. ಗ್ಯಾಸ್ ಸ್ಫೋಟದ ಪ್ರಕರಣ ಆಗಾಗ ನಡೆಯುತ್ತಿರುತ್ತದೆ. ಇದನ್ನು ತಪ್ಪಿಸಲು ಪೈಪ್ ಮೂಲಕ ಗ್ಯಾಸ್ ಸಂಪರ್ಕ ಮಾಡಲಾಗುತ್ತದೆ. ನ್ಯಾಚುರಲ್ ಗ್ಯಾಸ್ (ಎಲ್ಎನ್ಜಿ) ಎಲ್ಪಿಜಿಗಿಂತ ಕಡಿಮೆ ಅಪಾಯಕಾರಿ. ಹಾಗೆಯೇ ನೇರ ಗ್ಯಾಸ್ ಸಂಪರ್ಕದಿಂದ ಕಡಿಮೆ ಬೆಲೆಗೆ ದೊರೆಯುತ್ತದೆ. ಅರ್ಥಾತ್ ಎಲ್ಪಿಜಿ ಸಿಲಿಂಡರ್ ಪ್ರಮಾಣವನ್ನು ತೆಗೆದುಕೊಂಡರೆ- ಎಲ್ಎನ್ಜಿ ಸುಮಾರು ₹ 500ರಿಂದ ₹ 550ರ ಒಳಗೆ ದೊರೆಯಲಿದೆ. ಇದರಿಂದ 400 ರೂಗಳಷ್ಟು ಉಳಿತಾಯವಾಗಲಿದೆ ಎಂದಿದ್ದಾರೆ. ಗುಜರಾತ್‌ನಲ್ಲಿ ಈ ಯೋಜನೆ ಮೊದಲು ಆರಂಭಿಸಲಾಗಿತ್ತು ಎಂದಿರುವ ಪ್ರತಾಪ್ ಸಿಂಹ, ಈಗ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಹಾಸನ, ತುಮಕೂರು, ಶಿವಮೊಗ್ಗ, ಧಾರವಾಡ, ಹುಬ್ಬಳ್ಳಿ , ಚಿತ್ರದುರ್ಗ, ಕಲಬುರಗಿ ಸೇರಿ ಹಲವು ಜಿಲ್ಲೆಗಳಲ್ಲಿ ಜಾರಿ ಮಾಡಲು ತಿಳಿಸಲಾಗಿದೆ ಎಂದು ನುಡಿದಿದ್ದಾರೆ.
ಗ್ಯಾಸ್ ಪೈಪ್ಲೈನ್ಗೆ ವಿರೋಧ ವ್ಯಕ್ತಪಡಿಸಿದ ಶಾಸಕರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ:
ಮನೆಗಳಿಗೆ ಪೈಪ್ ಮೂಲಕ ನೇರ ಗ್ಯಾಸ್ ಸಂಪರ್ಕಕ್ಕೆ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಗ್ಯಾಸ್ಪೈಪ್ ಅಳವಡಿಸುವವರೇ ರಸ್ತೆಯನ್ನ ಸರಿ ಮಾಡುತ್ತಾರೆ. ಪೈಪ್ಲೈನ್ಗೆ ಬಳಸಿದ ಜಾಗಕ್ಕೆ ಪಾಲಿಕೆಗೆ ಹಣ ಕೊಡುತ್ತೇವೆ. ಲೈನ್ಗೆ ತೆಗೆದ ಹಳ್ಳವನ್ನು 24 ಗಂಟೆಯೊಳಗೆ ಮುಚ್ಚಬೇಕು ಎಂದಿದ್ದಾರೆ.
ಅಲ್ಲದೇ ವಿರೋಧ ವ್ಯಕ್ತಪಡಿಸಿದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ, ಮೊಬೈಲ್ ಕಂಪನಿಗಳು ರಸ್ತೆಯನ್ನು ಅಗೆದಾಗ ಸುಮ್ಮನಿದ್ದರು. ಖಾಸಗಿ ಕಂಪನಿಯ ಕೇಬಲ್ ಅಳವಡಿಕೆಯ ಸಮಯದಲ್ಲಿ ಏಕೆ ಯಾರೂ ಕೇಳಲಿಲ್ಲ? ಖಾಸಗಿ ಕಂಪನಿಯವರು ನಿಮ್ಮ ಜತೆ ಮಾತನಾಡಿದ್ದಾರಾ? ಎಂದು ತಮ್ಮದೇ ಪಕ್ಷದ ಶಾಸಕರ ವಿರುದ್ಧವೇ ಸಂಸದ ಪ್ರತಾಪ್ಸಿಂಹ ಕಿಡಿಕಾಡಿದ್ದಾರೆ.
ಶಾಸಕ ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು:
ಶಾಸಕ ನಾಗೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ರಾಜಕಾರಣಕ್ಕೆ ಯಾರು ಬೇಕಾದರೂ ಬರಬಹುದು. ಆದರೆ ಅವರ ಕೆಲಸ ನೋಡಿ ಜನರು ನಿರ್ಧರಿಸುತ್ತಾರೆ ಎಂದಿದ್ದಾರೆ. ಶಾಸಕ ಎಲ್.ನಾಗೇಂದ್ರ ಅವರು ಆಡಿ ಬೆಳೆದ ಜಾಗದಲ್ಲೇ ಲೀಡ್ ಪಡೆದಿಲ್ಲ. ಇನ್ನು ಅವರು ನನಗೆ ಲೀಡ್ ಕೊಡ್ಸಿದ್ದಾರಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಅತಿ ಹೆಚ್ಚು ಮತಗಳ ಅಂತರದಿಂದ ನಾನು ಗೆದ್ದಿದ್ದೇನೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ನನ್ನ ಗೆಲವಿಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಿದ್ದಾರೆ. ಪಾಲಿಕೆಯ ಮಾಜಿ, ಹಾಲಿ ಸದಸ್ಯರು ಶ್ರಮಿಸಿದ್ದಾರೆ. ನಾಗೇಂದ್ರ ಅವರಿಗೆ ಹುಟ್ಟೂರು ಕೆಜಿ ಕೊಪ್ಪಲಿನಲ್ಲೇ ಲೀಡ್ ಬರಲಿಲ್ಲ. ಅವರ ಮನೆಯ ಪಾಲಿಕೆ ಸದಸ್ಯರೇ ಬೇರೆ ಪಕ್ಷದವರಾಗಿದ್ದಾರೆ. ನಿಮಗೆ ನೀವೇ ಅಭಿವೃದ್ಧಿ ಹರಿಕಾರ ಎಂದುಕೊಳ್ಳಬೇಡಿ. ಅಭಿವೃದ್ಧಿ ಬಗ್ಗೆ ನನಗೆ ಪಾಠ ಹೇಳಬೇಡಿ ಎಂದು ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಾಪ್ ಸಿಂಹ ಅವರ ಸುದ್ದಿಗೋಷ್ಠಿ ಇಲ್ಲಿದೆ:
ಇದನ್ನೂ ಓದಿ:
Gas Pipeline: ಮೈಸೂರಲ್ಲಿ ರಾಮದಾಸ್ ವರ್ಸಸ್ ಪ್ರತಾಪ್ ಸಿಂಹ: ಗ್ಯಾಸ್ ಸಂಪರ್ಕ ವಿಚಾರದಲ್ಲಿ ಹಗ್ಗಜಗ್ಗಾಟ
ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಭಾರಿ ಅಪ್ ಸೆಟ್: ಕೊನೆಗೆ ಜಮೀರ್ ಅಹ್ಮದ್ರನ್ನ ತಮ್ಮ ಡೆಪ್ಯುಟಿ ಮಾಡಲು ದುಂಬಾಲು
Published On - 12:50 pm, Sat, 29 January 22