Gas Pipeline: ಮೈಸೂರಲ್ಲಿ ರಾಮದಾಸ್ ವರ್ಸಸ್ ಪ್ರತಾಪ್ ಸಿಂಹ: ಗ್ಯಾಸ್ ಸಂಪರ್ಕ ವಿಚಾರದಲ್ಲಿ ಹಗ್ಗಜಗ್ಗಾಟ

Pratap Simha: ‘ಶಾಸಕ ಎಸ್.ಎ.ರಾಮದಾಸ್ ಅವರು ಮೋದಿಗಿಂತ ಸೀನಿಯರ್. ಮೋದಿಗಿಂದ ರಾಮದಾಸ್ ಬುದ್ಧಿವಂತರು, ಜ್ಞಾನಿಗಳು’ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದರು.

Gas Pipeline: ಮೈಸೂರಲ್ಲಿ ರಾಮದಾಸ್ ವರ್ಸಸ್ ಪ್ರತಾಪ್ ಸಿಂಹ: ಗ್ಯಾಸ್ ಸಂಪರ್ಕ ವಿಚಾರದಲ್ಲಿ ಹಗ್ಗಜಗ್ಗಾಟ
ಮೈಸೂರು ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 27, 2022 | 7:59 PM

ಮೈಸೂರು: ನಗರದ ಮನೆಗಳಿಗೆ ಪೈಪ್​ಲೈನ್ ಮೂಲಕ ನೇರವಾಗಿ ಅನಿಲ ಸಂಪರ್ಕ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ರಾಮದಾಸ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಯೋಜನೆಗೆ ಅನುಮತಿ ನೀಡಬಾರದು ಎಂದು ಶಾಸಕ ರಾಮದಾಸ್ ಪತ್ರ ಬರೆದಿದ್ದಾರೆ, ಅನುಮತಿ ನೀಡಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ಈ ವಿಚಾರಕ್ಕೆ ಮೋದಿ ಅವರ ಹೆಸರನ್ನೂ ಎಳತಂದಿದ್ದು, ಮೈಸೂರಿನ ಜನರು ಒಂದೇ ಪಕ್ಷದ ಇವರಿಬ್ಬರ ನಡುವಣ ಭಿನ್ನಮತ ನೋಡಿ ನಗುವಂತಾಗಿದೆ. ಪೈಪ್​ಲೈನ್ ವಿಚಾರವಾಗಿ ಶಾಸಕ-ಸಂಸದರು ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮನೆಗಳಿಗೆ ನೇರವಾಗಿ ಗ್ಯಾಸ್ ಸಂಪರ್ಕ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಯೋಜನೆಗೆ ಅನುಮತಿ ನೀಡದಂತೆ ಶಾಸಕ ರಾಮದಾಸ್ ಅವರು ಪತ್ರ ಬರೆದಿದ್ದರು. ಇದನ್ನು ಆಕ್ಷೇಪಿಸಿರುವ ಸಂಸದ ಪ್ರತಾಪ್ ಸಿಂಹ, ‘ಶಾಸಕ ಎಸ್.ಎ.ರಾಮದಾಸ್ ಅವರು ಮೋದಿಗಿಂತ ಸೀನಿಯರ್. ಮೋದಿಗಿಂದ ರಾಮದಾಸ್ ಬುದ್ಧಿವಂತರು, ಜ್ಞಾನಿಗಳು’ ಎಂದು ವ್ಯಂಗ್ಯವಾಡಿದರು. ‘ಮೋದಿ ಯೋಜನೆ ವಿರೋಧಿಸಿದರೆ ಜನ ಪಾಠ ಕಲಿಸುತ್ತಾರೆ. ಯೋಜನೆಗೆ ಕಾಂಗ್ರೆಸ್, ಜೆಡಿಎಸ್ ಶಾಸಕರೇ ವಿರೋಧಿಸಿಲ್ಲ, ನಮ್ಮದೇ ಪಕ್ಷದ ಶಾಸಕರು ಯಾಕೆ ವಿರೋಧಿಸುತ್ತಿದ್ದಾರೆ. ಅವರನ್ನು ತಾಯಿ ಚಾಮುಂಡೇಶ್ವರಿಯೇ ನೋಡಿಕೊಳ್ಳುತ್ತಾರೆ. ಇಂತ ಚಿಲ್ಲರೆ ರಾಜಕಾರಣ ಮಾಡಬಾರದು. ಇಂಥ ಅಡ್ಡಿಗಳಿಗೆ ನಾನು ಕೇರ್ ಮಾಡುವುದಿಲ್ಲ. ಈ ಯೋಜನೆ ಪೂರ್ತಿ ಮಾಡುತ್ತೇನೆ’ ಎಂದು ಸವಾಲು ಹಾಕಿದರು.

ರಸ್ತೆ ಹಾಳಾಗುತ್ತೆ: ಯೋಜನೆಗೆ ರಾಮದಾಸ್ ಆಕ್ಷೇಪ ಮೈಸೂರಿನಲ್ಲಿ ಅನಿಲ ಪೈಪ್‌ಲೈನ್ ಅಳವಡಿಸುವ ಯೋಜನೆಗೆ ಅನುಮತಿ ನೀಡಬಾರದು ಎಂದು ಮೈಸೂರು ಪಾಲಿಕೆ ಆಯುಕ್ತರಿಗೆ ಶಾಸಕ ರಾಮದಾಸ್ ಪತ್ರ ಬರೆದಿದ್ದಾರೆ. ಕೆ.ಆರ್.ಕ್ಷೇತ್ರದಲ್ಲಿ ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದೇವೆ. ಈಗ ರಸ್ತೆಗಳನ್ನ ಅಗೆದು ಪೈಪ್​ಲೈನ್ ಹಾಕುವುದು ಬೇಡ. ಜನರ ಹಿತದೃಷ್ಟಿಯಿಂದ ಪೈಪ್​ಲೈನ್‌ ಅಳವಡಿಕೆಗೆ ಅನುಮತಿ ನೀಡಬಾರದು ಎಂದು ಅವರು ಒತ್ತಾಯಿಸಿದ್ದರು. ಕೇಂದ್ರ ಸರ್ಕಾರದ ಯೋಜನೆಗೆ ಬಿಜೆಪಿ ಶಾಸಕರಿಂದಲೇ ಆಕ್ಷೇಪ ವ್ಯಕ್ತವಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಕೋರಂ ಇಲ್ಲದ ಕಾರಣ ಪಾಲಿಕೆ ಸಭೆ ರದ್ದು: ಮೇಯರ್ ಅಸಮಾಧಾನ ಕೋರಂ ಇಲ್ಲದ ಕಾರಣ ಮೈಸೂರು ಮಹಾನಗರಪಾಲಿಕೆ ಕೌನ್ಸಿಲ್ ಸಭೆ ರದ್ದಾಯಿತು. ಕೋರಂ ಕೊರತೆ ವಿಚಾರದಲ್ಲಿ ನಾನು ಅಸಹಾಯಕಳು. ಜನವರಿ 31ಕ್ಕೆ ನನ್ನ ಮೇಯರ್ ಅಧಿಕಾರದ ಅವಧಿ ಮುಕ್ತಾಯವಾಗಲಿದೆ. ಸದಸ್ಯರನ್ನು ಕೌನ್ಸಿಲ್​ಗೆ ಬರಬೇಡಿ ಎಂದು ಯಾರು ಹೇಳಿದ್ದಾರೋ ಗೊತ್ತಿಲ್ಲ. ಇಂದಿನ ಸಭೆಯಲ್ಲಿ ನಾಲ್ಕು ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಮೈಸೂರು ಪಾಲಿಕೆ ಮೇಯರ್​ ಸುನಂದಾ ಪಾಲನೇತ್ರ ಬೇಸರ ವ್ಯಕ್ತಪಡಿಸಸಿದರು.

ಸಭೆ ರದ್ದು: ಪ್ರತಾಪ್ ಸಿಂಹ ಕೆಂಡಾಮಂಡಲ ಕೋರಂ ಅಭಾವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ರದ್ದಾದ ಸಂಗತಿಗೆ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶದಿಂದ ಪ್ರತಿಕ್ರಿಯಿಸಿದರು. ಗುರುವಾರ (ಜ.27) ಸಂಜೆ 3 ಗಂಟೆಗೆ ಸಭೆ ನಿಗದಿಯಾಗಿತ್ತು. ಸಭೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಸಭೆ ರದ್ದಾಯಿತು. ಇಂದಿನ ಸಭೆಯಲ್ಲಿ ಮನೆಮನೆಗೆ ಅನಿಲ ವಿತರಣೆ ಯೋಜನೆ ಬಗ್ಗೆ ಚರ್ಚೆ ನಡೆಯಬೇಕಿತ್ತು. ಬಿಜೆಪಿ ಶಾಸಕರಿಂದಲೇ ಇದಕ್ಕೆ ವಿರೋಧ ಸಹ ವ್ಯಕ್ತವಾಗಿತ್ತು. ಕೋರಂ ಅಭಾವ ಎಂಬ ಕಾರಣ ನೀಡಿ ಮೇಯರ್ ಸುನಂದಾ ಪಾಲನೇತ್ರ ಸಭೆ ರದ್ದುಪಡಿಸಿದ್ದರಿಂದ ಪ್ರತಾಪ್ ಸಿಂಹ ಸಿಟ್ಟಾದರು.

‘ನಾವೂ ಕೆಲಸ ಕಾರ್ಯ ಬಿಟ್ಟು ಬಂದಿದ್ದೇವೆ. ನೀವು ಏಕಾಏಕಿ ಸಭೆ ರದ್ದು ಮಾಡಿದ್ದು ಯಾಕೆ’ ಎಂದು ಪ್ರಶ್ನಿಸಿದರು. ಸಂಸದರ ಪ್ರಶ್ನೆಗೆ ತಬ್ಬಿಬ್ಬಾದ ಮೇಯರ್ ಸುನಂದಾ, ಕೋರಂ ಅಭಾವ ಇದೆ ಎಂದರು.

ಇದನ್ನೂ ಓದಿ: ಮೈಸೂರು: ಬಾಲ್ಯ ವಿವಾಹ ಪ್ರಶ್ನಿಸಿದ್ದಕ್ಕೆ ಚಾಕು ಇರಿತ; ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ ಇದನ್ನೂ ಓದಿ: Tourism: ಮೈಸೂರು: ವೀಕೆಂಡ್ ಕರ್ಫ್ಯೂ ತೆರವಾದರೂ ಪ್ರವಾಸಿ ತಾಣಗಳಿಗೆ ಬಾರದ ಪ್ರವಾಸಿಗರು