ಮೈಸೂರು, ನ.24: ರಾಜ್ಯದ ಅನೇಕ ಕಡೆಗಳಲ್ಲಿ ದೇವಸ್ಥಾನಗಳಿಗೆ ನುಗ್ಗಿ ಖದೀಮರು ಕಳ್ಳತನ ಮಾಡಿರುವ ಘಟನೆಗಳು (Temple Theft) ನಡೆದಿವೆ. ಮೈಸೂರು ಜಿಲ್ಲೆಯ ವಿನಾಯಕ ನಗರದ ವಿನಾಯಕ ದೇವಸ್ಥಾನದ (Vinayaka Temple) ಕಿಟಕಿ ಗಾಜು ಒಡೆದು ಚಿನ್ನದ ತಾಳಿ ಸೇರಿ ಬೆಲೆಬಾಳುವ ವಿಗ್ರಹಗಳನ್ನು ಕಳ್ಳತನ ಮಾಡಲಾಗಿದೆ. ವಿಷ್ಣು, ಗಣಪತಿ, ಮಹಾಲಕ್ಷ್ಮೀ, ಕೃಷ್ಣ, ಶಿವನವಿಗ್ರಹ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎರಡು ದೇವಸ್ಥಾನದ ಬಾಗಿಲಿನ ಬೀಗ ಮುರಿದು ಸುಮಾರು 4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಖದೀಮರು ಪರಾರಿಯಾಗಿರುವ ಘಟನೆ ಹಾವೇರಿ ತಾಲೂಕಿನ ನೀರಲಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮದೇವತೆ ಮತ್ತು ಹುಲಿಗೇಮ್ಮ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳತನ ನಡೆದಿದೆ. ದೇವಿಯ 6 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ, ಎರಡು ಮಾಂಗಲ್ಯ ಸರ ಸೇರಿದಂತೆ ಅನೇಕ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಬೆಳಗ್ಗೆ ದೇವಿಗೆ ಪೂಜೆ ಮಾಡಲೆಂದು ಪೂಜಾರಿ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಗ್ರಾಮದ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟೇಕಲ್ ನಿವಾಸಿಗಳಾದ ಚಂದನ್ಕುಮಾರ್, ಚಾನ್ ನವಾಜ್ ಬಂಧಿತ ಆರೋಪಿಗಳು. ಬಂಧಿತರ ಬಳಿ ಇದ್ದ 45,000 ಮೌಲ್ಯದ 930 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ರಾಮನಗರ: ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ, ಪಲ್ಟಿಯಾಗಿ ಹೊತ್ತಿ ಉರಿದ ಕಾರು
ಗೋವಾದಲ್ಲಿ ಬೀದರ್, ಧಾರವಾಡ, ಹುಬ್ಬಳ್ಳಿ, ಹಾವೇರಿ, ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ ಹಲವು ಭಾಗದ ಬಡ ವ್ಯಾಪಾರಿಗಳು ತರಕಾರಿ, ಹಣ್ಣು, ಹೂವು ವ್ಯಾಪಾರ ಮಾಡ್ತಿದ್ದಾರೆ. ನಿನ್ನೆ ಪಣಜಿಯಲ್ಲಿ ಬೀದಿ ಬದಿ ಹೂವು ಹಾಗೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ರು. ಆದ್ರೆ ಕರ್ನಾಟಕದ ವ್ಯಾಪಾರಿಗಳ ಗೋವನ್ ರೆವಲ್ಯೂಷನರಿ ಪಾರ್ಟಿ ಕಾರ್ಯಕರ್ತರು ದರ್ಪ ಮೆರೆದಿದ್ದಾರೆ. ವ್ಯಾಪಾರಕ್ಕೆ ಅಡ್ಡಿಪಡಿಸಿ ಹೂವು, ಹಣ್ಣು ಎಲ್ಲವನ್ನು ರಸ್ತೆಗೆ ಎಸೆದಿದ್ದಾರೆ. ಪೊಲೀಸರೇ ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆ ಅಂತಾ ಕನ್ನಡಿಗರು ಆರೋಪಿಸಿದ್ದಾರೆ. ಕರ್ನಾಟಕದ ವ್ಯಾಪಾರಿಗಳ ಮೇಲಿನ ದೌರ್ಜನ್ಯವನ್ನು ಕನ್ನಡ ಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ. ಗೋವಾದ ವಾಹನಗಳನ್ನು ತಡೆಗಟ್ಟಿ, ಹೆದ್ದಾರಿ ಬಂದ್ ಮಾಡೋದಾಗಿ ಎಚ್ಚರಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:18 am, Fri, 24 November 23