ಮೈಸೂರು: ನಂಜನಗೂಡಿನ ಬಳ್ಳೂರ್ ಹುಂಡಿಯಲ್ಲಿ ಹುಲಿ ದಾಳಿಗೆ ಮಹಿಳೆ ಬಲಿ
ನಂಜನಗೂಡು ತಾಲೂಕಿನಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿವೆ. 20 ದಿನಗಳ ಹಿಂದೆ ಜೇನುಕಟ್ಟೆ ಗ್ರಾಮದಲ್ಲಿ ಹುಲಿಯೊಂದು ಹಸುವನ್ನು ಕೊಂದು ಅದರ ಮಾಲೀಕ ಮೇಲೆ ದಾಳಿ ನಡೆಸಿತ್ತು. ಬಳಿಕ ಇದೇ ಪ್ರದೇಶದಲ್ಲಿ ಎತ್ತು ಬಲಿಯಾಗಿತ್ತು. ಇದೀಗ ಬಳ್ಳೂರ್ ಹುಂಡಿಯಲ್ಲಿ ಹುಲಿ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

ಮೈಸೂರು, ನ.24: ನಂಜನಗೂಡು ತಾಲೂಕಿನಲ್ಲಿ ಹುಲಿ ಕಾಣಿಸಿಕೊಳ್ಳುತ್ತಿದ್ದು, ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿವೆ. ಜನಸಾಮಾನ್ಯರು ಹೊರಗೆ ಓಡಾಡಲು ಭಯಪಡುವಂತಾಗಿದೆ. ಇದೀಗ ಹುಲಿ ದಾಳಿಗೆ (Tiger Attack) ಮಹಿಳೆಯೊಬ್ಬರು ಬಲಿಯಾದ ಘಟನೆ ಬಳ್ಳೂರ್ ಹುಂಡಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (55) ಮೃತಪಟ್ಟವರು.
ಮಧ್ಯಾಹ್ನದ ವೇಳೆ ದನ ಮೇಯಿಸಲು ಕಾಡಂಚಿಗೆ ತೆರಳಿದ್ದಾಗ ರತ್ನಮ್ಮ ಅವರ ಮೇಲೆ ಹುಲಿ ದಾಳಿ ನಡೆಸಿದೆ. ಅಲ್ಲದೆ, ರತ್ನಮ್ಮ ಅವರನ್ನು ಕೊಂದು ಎಡಭಾಗದ ದೇಹವನ್ನು ತಿಂದುಹಾಕಿ ಹೋಗಿದೆ. ಇದು ಸಹಜವಾಗಿ ಅಲ್ಲಿನ ಜನರನ್ನು ಭೀತಿಗೊಳಿಸಿದೆ. ಇನ್ನು, ಹುಲಿ ದಾಳಿಗೆ ಮಹಿಳೆ ಬಲಿಯಾದ ಹಿನ್ನೆಲೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ವ್ಯಾಘ್ರನ ಕಾಟ: ಹೊಲ, ತೋಟ, ರಸ್ತೆಯಲ್ಲೆಲ್ಲ ಹುಲಿ ಹೆಜ್ಜೆ ಗುರುತು ಪತ್ತೆ
ನಂಜನಗೂಡು ತಾಲೂಕಿನಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರೆದಿದೆ. 20 ದಿನಗಳ ಹಿಂದೆ ಜೇನುಕಟ್ಟೆ ಗ್ರಾಮದಲ್ಲಿ ಹುಲಿಯೊಂದು ಹಸುವನ್ನು ಕೊಂದು ಅದರ ಮಾಲೀಕ ಮೇಲೆ ದಾಳಿ ನಡೆಸಿತ್ತು. ಬಳಿಕ ಇದೇ ಪ್ರದೇಶದಲ್ಲಿ ಹುಲಿ ದಾಳಿಗೆ ಎತ್ತು ಬಲಿಯಾಗಿತ್ತು. ಇದೀಗ ಮಹಿಳೆಯೊಬ್ಬರು ಬಲಿಯಾಗಿದ್ದು, ಸಹಜವಾಗಿ ಕೃಷಿ ಚಟುವಟಿಕೆ, ಹಸು ಮೇಯಿಸಲು ತೆರಳಲು ಗ್ರಾಮಸ್ಥರು ಆತಂಕಪಡುತ್ತಿದ್ದಾರೆ.
ಯಾವಾಗ ತಮ್ಮ ಮೇಲೆ ಹುಲಿ, ಚಿರತೆ ದಾಳಿ ನಡೆಸುತ್ತೋ ಎಂಬ ಆತಂಕದಿಂದ ಜನರು ಜಾನುವಾರುಗಳಿಗೆ ಹುಲ್ಲು ತರಲು ಹಿಂದೇಟು ಹಾಕುತ್ತಿದ್ದಾರೆ. ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ಹೊರವಲಯದ ಮಹದೇವನಗರ, ಒಡೆಯನಪುರದ ಸಮೀಪದ ಜೇನುಕಟ್ಟೆ ಬಳಿ ಹುಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದೆ.
ಹೆಚ್ಡಿ ಕೋಟೆ ತಾಲೂಕಿನ ದೇವರಾಜನಗರ ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ಇತ್ತೀಚೆಗೆ, ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಚಿರತೆಯೊಂದು ಸೆರೆಯಾಗಿತ್ತು. ಬೋನು ಇಟ್ಟ ಒಂದು ದಿನದಲ್ಲೇ ಚಿರತೆ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ