ಸಿದ್ದರಾಮಯ್ಯ ತವರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಜಗುಲಿ ಮೇಲೆ ಪಾಠ ಕೇಳುವ ಭಾಗ್ಯ!
ಚಿಕ್ಕಹುಣಸೂರಿನ ಆಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಸ್ತೆಗೆ ಸನಿಹದಲ್ಲೇ ಇದೆ. ಏಳು ತರಗತಿಗಳು ನಡೆಯುತ್ತಿದ್ದರೂ ಶಿಕ್ಷಕರ ಕೊರತೆಯಿದೆ. ಶಾಲೆಗೆ ಆಟದ ಮೈದಾನವಂತೂ ಮರೀಚಿಕೆಯಾಗಿದೆ. ಮಳೆ ಬಂದರಂತೂ ಮಕ್ಕಳ ಸ್ಥಿತಿ ಅಧೋಗತಿಯದ್ದಾಗುತ್ತದೆ.
ಮೈಸೂರು: ಆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿದ್ದಾರೆ (students) ಕೊಠಡಿಗಳಿಲ್ಲ. ಇನ್ನು ಜಗುಲಿಯಲ್ಲೇ ಪಾಠ ಪ್ರವಚನ ನಡೆಯುತ್ತದೆ. ಸರ್ಕಾರಿ ಶಾಲೆಯ (government school) ಈ ದುಃಸ್ಥಿತಿಯನ್ನು ಕೇಳೋರೇ ಇಲ್ಲದಂತಾಗಿದೆ. ಈ ಸರ್ಕಾರಿ ಶಾಲೆಯ ಮಕ್ಕಳು ಮೂಲಭೂತ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಇದು ಹುಣಸೂರು ತಾಲೂಕು ಚಿಕ್ಕಹುಣಸೂರಿನ ಆಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದು:ಸ್ಥಿತಿಯ ಒಂದು ಚಿತ್ರಣ. ಮೂಲಭೂತ ಸೌಕರ್ಯದಿಂದ ವಂಚಿತವಾಗಿರುವ ಈ ಸರ್ಕಾರಿ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ವ್ಯಾಸಂಗ ನಡೆಸುತ್ತಿದ್ದರೂ ಕೊಠಡಿಗಳೇ (school rooms) ಇಲ್ಲವಾಗಿದೆ. ಒಟ್ಟು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ನಡೆಯುವ ಏಳೂ ತರಗತಿಗಳಿಗೆ ಇರೋದು ಒಂದೇ ಒಂದು ಕೊಠಡಿ ಎಂದರೆ ನಂಬಲೇಬೇಕಿದೆ. ಮಕ್ಕಳಿಗೆ ಶಾಲೆಯ ಹೊರ ಆವರಣದ ಜಗುಲಿಯೇ ಕೊಠಡಿಯಾಗಿದೆ (Hunsur News).
ರಸ್ತೆಗೆ ಸನಿಹದಲ್ಲೇ ಇರುವ ಜಗುಲಿಯ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇವರದ್ದಾಗಿದೆ. ಇನ್ನು ಏಳು ತರಗತಿಗಳು ನಡೆಯುತ್ತಿದ್ದರೂ ಶಿಕ್ಷಕರ ಕೊರತೆಯಿದೆ. ಶಾಲೆಗೆ ಆಟದ ಮೈದಾನವಂತೂ ಮರೀಚಿಕೆಯಾಗಿದೆ. ಮಳೆ ಬಂದರಂತೂ ಮಕ್ಕಳ ಸ್ಥಿತಿ ಅಧೋಗತಿಯದ್ದಾಗುತ್ತದೆ. ಎಲ್ಲಾ ಮಕ್ಕಳು ಒಂದೇ ಕೊಠಡಿಯಲ್ಲಿ ಕೈಕಟ್ಟಿ ನಿಲ್ಲುವ ದುಃಸ್ಥಿತಿಯಿದೆ.
ಸದರಿ ಶಾಲೆಗೆ 25 ಗುಂಟೆ ಜಮೀನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ 2021 ರಲ್ಲೇ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹುಣಸೂರು ತಹಸೀಲ್ದಾರ್ ಗೆ ಪತ್ರ ರವಾನೆಯಾಗಿದೆ. ಹೀಗಿದ್ದೂ ತಹಸೀಲ್ದಾರ್ ಕಚೇರಿಯಿಂದ ಯಾವುದೇ ಕ್ರಮ ಜರುಗಿಲ್ಲ. ಖಾಸಗಿ ಶಾಲೆಗಳ ಪ್ರವಾಹದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಆದರೆ ಈ ಶಾಲೆಗೆ ಪ್ರವೇಶಾತಿಯಲ್ಲಿ ಉತ್ತಮ ಪ್ರತಿಕ್ರಿಯೆ ಇದ್ದರೂ ಸರ್ಕಾರದ ಸೌಲಭ್ಯಗಳು ಇಲ್ಲದ ಕಾರಣ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:15 am, Fri, 24 November 23