Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಹುಲಿ ದಾಳಿ

ನಂಜನಗೂಡು ತಾಲೂಕಿನ ಜೇನುಕಟ್ಟೆ ಗ್ರಾಮದಲ್ಲಿ ಹುಲಿ ದಾಳಿಗೆ ಎತ್ತು ಬಲಿಯಾಗಿದೆ. 22 ದಿನಗಳ ಹಿಂದೆ ಇದೇ ಜಾಗದಲ್ಲಿ ಹುಲಿ ಹಸುವನ್ನು ಕೊಂದು ದನಗಾಹಿ ವೆಂಕಟೇಶ್​​ ಮೇಲೆ ದಾಳಿ ಮಾಡಿತ್ತು. ಈಗ ಇದೇ ಜಾಗದಲ್ಲಿ ಎತ್ತು ಬಲಿಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಮತ್ತೊಂದೆಡೆ ಹೆಚ್​ಡಿ ಕೋಟೆ ತಾಲೂಕಿನ ದೇವರಾಜನಗರ ಗ್ರಾಮದ ಸುತ್ತಮುತ್ತ ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಚಿರತೆ ಸೆರೆ ಹಿಡಿಯಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಹುಲಿ ದಾಳಿ
ಚಿರತೆ ಸೆರೆ
Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Nov 23, 2023 | 8:12 AM

ಮೈಸೂರು, ನ.23: ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಾಡು ಪ್ರಾಣಿಗಳ ಆರ್ಭಟ ಹೆಚ್ಚಾಗಿದೆ. ಆಹಾರ ಅರಸಿಕೊಂಡು ನಾಡಿನತ್ತ ಬರುತ್ತಿರುವ ಆನೆ (Elephants), ಚಿರತೆ (Leopard), ಹುಲಿಗಳು (Tiger) ಜನರನ್ನು ಭಯ ಭೀತರನ್ನಾಗಿಸುತ್ತಿವೆ. ಮೈಸೂರಿನಲ್ಲಿ ಹುಲಿ (Tiger Attack) ಕಾಟಕ್ಕೆ ಜನ ರೋಸಿ ಹೋಗಿದ್ದಾರೆ. ಹುಲಿ ದಾಳಿಯಿಂದಾಗಿ 2 ಜೀವಗಳು ಬಲಿಯಾಗಿದ್ದು ವ್ಯಾಘ್ರನ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯ ನಂಜನಗೂಡು ತಾಲೂಕಿನ ಜೇನುಕಟ್ಟೆ ಗ್ರಾಮದಲ್ಲಿ ಹುಲಿ ದಾಳಿಗೆ ಎತ್ತು ಬಲಿಯಾಗಿದೆ. 22 ದಿನಗಳ ಹಿಂದೆ ಇದೇ ಜಾಗದಲ್ಲಿ ಹುಲಿ ಹಸುವನ್ನು ಕೊಂದು ದನಗಾಹಿ ವೆಂಕಟೇಶ್​​ ಮೇಲೆ ದಾಳಿ ಮಾಡಿತ್ತು. ಈಗ ಇದೇ ಜಾಗದಲ್ಲಿ ಎತ್ತು ಬಲಿಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.

ಕೃಷಿ ಚಟುವಟಿಕೆ, ಹಸು ಮೇಯಿಸಲು ತೆರಳಲು ಗ್ರಾಮಸ್ಥರು ಆತಂಕಪಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ಹೊರವಲಯದ ಮಹದೇವನಗರ, ಒಡೆಯನಪುರದ ಸಮೀಪದ ಜೇನುಕಟ್ಟೆ ಬಳಿ ಹುಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದೆ. ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮತ್ತೊಂದು ಚಿರತೆ ಸೆರೆ

ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ಹೆಚ್​ಡಿ ಕೋಟೆ ತಾಲೂಕಿನ ದೇವರಾಜನಗರ ಗ್ರಾಮದ ಸುತ್ತಮುತ್ತ ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಚಿರತೆ ಸೆರೆ ಹಿಡಿಯಲಾಗಿದೆ. ಗ್ರಾಮದ ಪ್ರಶಾಂತ್ ಎಂಬುವವರ ಜಮೀನಿನಲ್ಲಿ ಬೋನು ಇರಿಸಲಾಗಿತ್ತು. ಬೋನು ಇಟ್ಟ ಒಂದು ದಿನದಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೋನಿಗೆ ಬಿದ್ದ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ಅರಣ್ಯದಲ್ಲಿ ಚಿರತೆ ಬೇಟೆಯಾಡಿದ ಇಬ್ಬರ ಬಂಧನ, ಮತ್ತೊಬ್ಬನಿಗಾಗಿ ಶೋಧ

ಇನ್ನು ನಿನ್ನೆ (ನ.22) ಕೂಡ ಮೈಸೂರಿನ ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮಕ್ಕೆ ನುಗ್ಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದರು. ಕಳೆದ ಒಂದು ತಿಂಗಳಿನಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಾ ಈ ಚಿರತೆ ಉಪಟಳ ಕೊಡ್ತಿತ್ತು. ಸಾಕುನಾಯಿ, ದನ, ಕರುಗಳನ್ನು ಕೊಂದು ಹಾಕಿದ್ದ ಚಿರತೆ ಸೆರೆಗೆ ರೈತ ಮಹೇಶ್ ಎಂಬುವವರ ಜಮೀನಿನಲ್ಲಿ ಬೋನು ಇಡಲಾಗಿತ್ತು.

ನಟಿ ಲೀಲಾವತಿ ತೋಟದ ಬಳಿ ಚಿರತೆ

ಹಿರಿಯ ನಟಿ ಲೀಲಾವತಿಯವ್ರ ನೆಲಮಂಗಲದ ತೋಟದ ಗೇಟ್ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಇರೋ ತೋಟದ ಗೇಟ್ ಬಳಿ ಮೊನ್ನೆ ರಾತ್ರಿ 10.30ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಪ್ರತ್ಯಕ್ಷದಿಂದ ಸೋಲದೇವನಹಳ್ಳಿ, ಬಾಣಸವಾಡಿ, ಆಗಳಗುಪ್ಪೆ, ಚೋಡಸಂದ್ರ, ಹಂದಿಗುಟ್ಟೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅತಂಕ ಮನೆಮಾಡಿದೆ.

ಕಾರ್ಯಾಚರಣೆ ವೇಳೆ ಚಿರತೆ ಎಸ್ಕೇಪ್

ತುಮಕೂರಿನಲ್ಲಿ ಬಾವಿಗೆ ಬಿದ್ದಿದ್ದ ಚಿರತೆ ಸೆರೆ ಕಾರ್ಯಾಚರಣೆ ವೇಳೆ ಎಸ್ಕೇಪ್ ಆಗಿದೆ. ತಿಪಟೂರು ತಾಲೂಕಿನ ಮಾರನಗೆರೆಯಲ್ಲಿ ರಾತ್ರಿ ವೇಳೆ ಚಿರತೆ ಎಂ.ಆರ್. ಸಂಗಮೇಶಣ್ಣನವರ ಬಾವಿಗೆ ಬಿದ್ದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ನೀಡದೆ ಬಲೆ ಹಾಕಿ ಚಿರತೆ ಹಿಡಿಯಲು ಯತ್ನಿಸಿದ್ದಾರೆ. ಬಲೆಗೆ ಸಿಲುಕಿದ್ದ ಚಿರತೆ ಬಾವಿಯ ಮೇಲೆ ಬರ್ತಿದ್ದಂತೆ ಎಸ್ಕೇಪ್ ಆಗಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್  ಮಾಡಿ