
ಮೈಸೂರು, ಡಿಸೆಂಬರ್ 23: ರಸ್ತೆ ಅಪಘಾತಗಳು ಸಂಭವಿಸಿದಾಗ ಸಹಾಯ ಹಸ್ತ ಚಾಚುವುದು ಮಾನವೀಯತೆ. ಹಿಂದೆ ಅಕ್ಷರಸ್ಥರು ಕಡಿಮೆಯಿದ್ದಾಗ ನಡುರಸ್ತೆಯಲ್ಲಿ ಬಿದ್ದವನನ್ನು ಎತ್ತಲೂ ಜನ ಹಿಂದೆ ಮುಂದೆ ನೋಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಅಪಘಾತಕ್ಕೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುಲು ಸಾಕಷ್ಟು ಜನ ಮುಂದೆ ಬರುತ್ತಾರೆ. ಹೀಗೆ ಸಹಾಯಕ್ಕೆ ಬರುವವರನ್ನೂ ನಂಬಬಾರದೇನೋ ಎಂದೆನಿಸುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. ಸಹಾಯ ಮಾಡಲು ಮುಂದೆ ಬಂದವರು ಅಪಘಾತವಾಗಿ ಬಿದ್ದವನಿಂದಲೇ ಸಾವಿರಾರು ರೂ. ದೋಚಿದ್ದು, ಮಾಹಿತಿ ತಿಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರು ತಾಲೂಕಿನ ಕಡಕೊಳದ ಬಳಿ ನಡೆದ ಅಪಘಾತವೊಂದು ನಡೆದಿದ್ದು, ಮಾನವೀಯತೆಯ ಮುಖವಾಡದ ಹಿಂದಿನ ಕರಾಳ ಮನಸ್ಥಿತಿಯನ್ನು ಬಿಚ್ಚಿಟ್ಟಿದೆ. ಡಿಸೆಂಬರ್ 19ರ ಮಧ್ಯರಾತ್ರಿ, ಕಡಕೋಳದ ಕಾರ್ಖಾನೆಯಲ್ಲಿ ಕೆಲಸ ಮುಗಿಸಿದ ಗಣೇಶ್ ಎಂಬ ಯುವಕ ಮನೆಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಈತನ ಸಹಾಯಕ್ಕೆಂದು ಮಹದೇವಪುರ ನಿವಾಸಿಗಳಾದ ರಮೇಶ್ ಮತ್ತು ಮನು ಬಂದಿದ್ದರು. ಗಣೇಶ್‌ನನ್ನು ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಆತನ ಮೊಬೈಲ್ ವಶಪಡಿಸಿಕೊಂಡ ಪಾಪಿಗಳು, ಆತನ ಅಸಹಾಯಕತೆಯನ್ನೂ ಲೆಕ್ಕಿಸದೆ ಆತನ ಖಾತೆಯಿಂದ ಬರೋಬ್ಬರಿ 80 ಸಾವಿರ ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ ಮಾನವೀಯತೆ ಮರೆತ ಬೆಂಗಳೂರಿನ ಜನ: ರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ
ಗಾಯಗೊಂಡ ಸ್ಥಿತಿಯಲ್ಲಿದ್ದ ಗಣೇಶ್‌ನ ಮೊಬೈಲ್ ತೆಗೆದುಕೊಂಡ ಪಾಪಿಗಳು, ಆತನ ಫಿಂಗರ್ಪ್ರಿಂಟ್ ಬಳಸಿ ಯುಪಿಐ ಮೂಲಕ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಹಣ ವರ್ಗಾವಣೆ ಮುಗಿದ ಕೂಡಲೇ ಗಣೇಶ್‌ನನ್ನು ಆಸ್ಪತ್ರೆಗೂ ಸೇರಿಸದೆ ಅಸಹಯಕ ಸ್ಥಿತಿಯಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದ ಗಣೇಶ್‌ನ ಸಹೋದರ ಅಂಕನಾಯಕ ಸ್ಥಳಕ್ಕೆ ಆಗಮಿಸಿ, ಆತನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಘಟನೆಯ ಕುರಿತು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತ್ವರಿತವಾಗಿ ಹಣ ವರ್ಗಾವಣೆ ಮಾಹಿತಿಗಳನ್ನು ಸಂಗ್ರಹಿಸಿ, ರಮೇಶ್ ಮತ್ತು ಮನು ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 80 ಸಾವಿರ ರೂ. ನಗದು ಹಾಗೂ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.