
ಮೈಸೂರು, ನವೆಂಬರ್ 10: ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ರ್‍ಯಾಗಿಂಗ್ ಮತ್ತು ಹಲ್ಲೆ ಪ್ರಕರಣ ಸಂಬಂಧ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಬಾಲಕರ ವಿರುದ್ಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಎ1 ಆಗಿ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಶಿಕ್ಷಕರು, ಜೆ1, ಜೆ2, ಜೆ3 ಆಗಿ ಮೂವರು ಬಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನ್ನ ಸಹಪಾಠಿಗಳಿಂದಲೇ ರ್ಯಾಗಿಂಗ್ಗೆ ಒಳಗಾಗಿ ಹಲ್ಲೆಗೊಂಡಿದ್ದ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಗಂಭಿರ ಪೆಟ್ಟು ಬಿದ್ದಿದ್ದ ಹಿನ್ನಲೆ ಬಾಲಕ ಒಂದು ವೃಷಣವನ್ನೇ ವೈದ್ಯರು ತೆಗೆದ ಪ್ರಸಂಗ ನಡೆದಿತ್ತು. ಒಂದು ತಿಂಗಳ ಹಿಂದೆ ಬಾಲಕನ ಮೇಲೆ ಹಲ್ಲೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಆತನದ್ದೇ ತರಗತಿಯ ಮೂವರು ಬಾಲಕರು ಹಲ್ಲೆ ನಡೆಸಿದ್ದರು. ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದರು.
ತರಗತಿಯ ಲೀಡರ್ ಆಗಿದ್ದ 13 ವರ್ಷದ ಬಾಲಕನನ್ನು ಆತನ ಸಹಪಾಠಿಗಳೇ ಪ್ರತಿನಿತ್ಯ ರ್‍ಯಾಗಿಂಗ್ ಮಾಡುತ್ತಿದ್ದರು. ಈ ವಿಷಯವನ್ನು ಆತ ಶಿಕ್ಷಕರಿಗೆ ತಿಳಿಸಿದ್ದ. ಇದೇ ಕಾರಣಕ್ಕೆ ತರಗತಿಯ ಮೂವರು ಸಂತ್ರಸ್ತ ಬಾಲಕನನ್ನು ಅಕ್ಟೋಬರ್ 25ರಂದು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು ಗಂಭೀರ ಗಾಯಗೊಳಿಸಿದ್ದರು. ಆ ಬಳಿಕ ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಬಾಲಕ ಪೋಷಕರಿಗೆ ತಿಳಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕೊಡಿಸಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಕೂಡಲೇ ಆಪರೇಷನ್ ಮಾಡಬೇಕೆಂದು ತಿಳಿಸಿ, ಶಸ್ತ್ರ ಚಿಕಿತ್ಸೆ ಮಾಡಿ ಒಂದು ವೃಷಣವನ್ನ ತೆಗೆದಿದ್ದಾರೆ.
ಇದನ್ನೂ ಓದಿ: ಹಳೆಯ ದ್ವೇಷಕ್ಕೆ ಹರಿದ ನೆತ್ತರು: ಮಗನ ಜೀವ ಉಳಿಸಲು ಹೋಗಿ ತಾಯಿ ಬಲಿ
ಹಲ್ಲೆ ನಡೆಸಿರುವ ಆರೋಪಿತ ಮೂವರು ಬಾಲಕರು ಹಲವು ದಿನಗಳಿಂದ ರ್‍ಯಾಗಿಂಗ್ ನಡೆಸುತ್ತಿದ್ದ ಬಗ್ಗೆ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಗೆ ಫೊಷಕರು ದೂರು ಕೂಡ ನೀಡಿದ್ದರು. ಆದರೆ, ಶಾಲೆಯವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲದೆ ಶಾಲೆಯ ಮುಖ್ಯ ಶಿಕ್ಷಕಿ ಉಡಾಫೆಯಾಗಿ ನಡೆದುಕೊಂಡಿದ್ದಾರೆ. ಒಂದು ವೇಳೆ ದೂರನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈ ರೀತಿ ಸ್ಥಿತಿ ಮಗನಿಗೆ ಬರುತ್ತಿರಲಿಲ್ಲ ಎಂಬುದು ಸಂತ್ರಸ್ತ ಬಾಲಕನ ಪೋಷಕರ ಅಳಲು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿದ್ದೇವೆ. ಇಷ್ಟೆಲ್ಲಾ ಆದರೂ ಶಾಲೆಯ ಆಡಳಿತ ಮಂಡಳಿ ಮಾತ್ರ ಬಾಲಕನ ಆರೋಗ್ಯ ವಿಚಾರಿಸಿಲ್ಲ. ಅಲ್ಲದೆ, ಬಾಲಕನ ತಾಯಿ ಶಾಲೆಗೆ ತೆರಳಿದಾಗ ಕೆಟ್ಟದಾಗಿ ಮಾತನಾಡಿ ವಾಪಸ್ಸು ಕಳುಹಿಸಿದ್ದಾರೆ ಎಂಬ ಆರೋಪವೂ ಪೋಷಕರಿಂದ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:51 pm, Mon, 10 November 25