ಮೈಸೂರು, ಸೆಪ್ಟೆಂಬರ್ 7: ಧರ್ಮದ ಬಗ್ಗೆ ತಿಳಿದುಕೊಂಡವರು ಮಾತನಾಡುವುದಿಲ್ಲ. ಧರ್ಮದ ಬಗ್ಗೆ ತಿಳಿದುಕೊಳ್ಳದವನು ತಮ್ಮ ಧರ್ಮದ ಬಗ್ಗೆಯೂ ಮಾತನಾಡುತ್ತಾನೆ. ಇತರೆ ಧರ್ಮಗಳ ಬಗ್ಗೆಯೂ ಮಾತನಾಡುತ್ತಾನೆ ಎಂದು ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಆದಿಚುಂಚನಗಿರಿ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಪರೋಕ್ಷವಾಗಿ ತರಾಟೆ ತೆಗೆದುಕೊಂಡಿದಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಡಾಳುವ ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆ ಗೌರವಿಸಬೇಕು. ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ಬೇರೊಂದು ಧರ್ಮಕ್ಕೆ ಸೆಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಹಿಂದೂ ಧರ್ಮದ ಪರ ಸ್ವಾಮೀಜಿಗಳ ಹೋರಾಟದ ಕುರಿತು ನಿರ್ಮಲಾನಂದನಾಥ ಸ್ವಾಮೀಜಿ ಸುಳಿವು ನೀಡಿದ್ದು, ಇದೇ ವಿಚಾರಕ್ಕೆ ಪ್ರತ್ಯೇಕವಾಗಿ ಸಭೆ ಕರೆಯುವ ಅನಿವಾರ್ಹತೆ ಬರಬಹುದು. ಬಂದಾಗ ಅದನ್ನು ಮುಖ್ಯವಾಗಿ ಇಟ್ಟುಕೊಂಡು ಚರ್ಚಿಸೋಣ. ಮುಂತಾದಾಳತ್ವದ ಬಗ್ಗೆ ಕೇಳಿದ ಪ್ರಶ್ನೆಗೆ ನಿರ್ಮಲಾನಂದನಾಥ ಸ್ವಾಮೀಜಿ ಮೌನವಹಿಸಿದರು.
ಇದನ್ನೂ ಓದಿ: ತಮ್ಮ ವಿರುದ್ಧ ಉತ್ತರ ಪ್ರದೇಶದಲ್ಲಿ FIR ದಾಖಲಾಗಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಪ್ರತಿಕ್ರಿಯೆ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಸನಾತನ ಪದಕ್ಕೆ ಶಾಶ್ವತ ಎನ್ನುವ ಅರ್ಥವಿದೆ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದಗಳ ಬಗ್ಗೆ ನಿಗಾ ಇರಬೇಕು ಎಂದು ಹೇಳಿದರು.
‘ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ ಸನಾತನ’. ಧರ್ಮ ಅಂದರೆ ಸಿದ್ಧ ಸಾಧನೆಯ ಮಾರ್ಗ. ಸನಾತನ ಪದಕ್ಕೆ ಪುರಾತನ ಅರ್ಥವಿದೆ, ಎಲ್ಲರಿಗೂ ಇತಿಹಾಸ ಗೊತ್ತಿದೆ. ಕ್ರೈಸ್ತ ಧರ್ಮ ಶುರುವಾಗಿದ್ದು 2 ಸಾವಿರ ವರ್ಷಗಳ ಹಿಂದೆ. ಮುಸ್ಲಿಂ ಧರ್ಮಕ್ಕೆ 1,600 ವರ್ಷಗಳ ಇತಿಹಾಸವಿದೆ ಎಂದರು.
2500 ವರ್ಷಗಳ ಹಿಂದೆ ಬೌದ್ಧ, ಜೈನ ಧರ್ಮ ಸ್ಥಾಪನೆಯಾಗಿದೆ. ಸಿಖ್, ಯಹೂದಿ ಸೇರಿದಂತೆ ಇತರೆ ಧರ್ಮಗಳು ನಂತರದಲ್ಲಿ ಬಂದವು. ಇದೆಲ್ಲಕ್ಕಿಂತ ಹಿಂದೂ ಧರ್ಮ ಪುರಾತನವಾದುದು. ಪ್ರಪಂಚದ ಪ್ರತಿ ವ್ಯಕ್ತಿಯೂ ಭಿನ್ನ, ಆದರೆ ಎಲ್ಲರಿಗೂ ಆಮ್ಲಜನಕ ಬೇಕು. ಆಮ್ಲಜನಕ ಇಲ್ಲದೆ ಇರುತ್ತೇನೆ ಎಂದರೆ ಏನಾಗುತ್ತೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಸಾಧ್ಯತೆ ವಿಚಾರವಾಗಿ ಮಾತನಾಡಿದ ಅವರು, ಇಂಗ್ಲಿಷ್ನಲ್ಲಿ ಇಂಡಿಯಾ ಹಿಂದಿಯಲ್ಲಿ ಭಾರತ ಅಂತಾ ಬಳಸುತ್ತಿದ್ದೇವೆ. ಈ ಚರ್ಚೆ ಯಾವಾಗ, ಹೇಗೆ ಶುರುವಾಯಿತು ಎಂದು ನನಗೆ ಗೊತ್ತಿಲ್ಲ. ಹಿಂದಿ ಹಾಗೂ ಕನ್ನಡದಲ್ಲಿ ಭಾರತ ಸರ್ಕಾರ ಎಂದೇ ಬರೆಯುತ್ತೇವೆ. ಕೆಲವೊಂದು ಬಾರಿ ಇಂಡಿಯನ್ ಗವರ್ನಮೆಂಟ್ ಎಂದು ಬಳಸುತ್ತೇವೆ. ಕೇಂದ್ರ ಸರ್ಕಾರವೇ ಮರುನಾಮಕರಣ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಚರ್ಚೆ ಅನಗತ್ಯ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.