ಮೈಸೂರು: ಕೊರೊನಾ ಮಹಾಮಾರಿ ಭೀತಿ ಕಳೆದಿದ್ದು, ಈ ಸಲ ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಮಾಹಿತಿ ನೀಡಿದ್ದು, ಕಳೆದೆರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಆಷಾಡ ಮಾಸದಲ್ಲಿ ದೇವಿಯ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿಯ ಆಷಾಡ ಮಾಸದಲ್ಲಿ ಚಾಮುಂಡೇಶ್ವರಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಎರಡು ಡೋಸ್ ಕೊರೊನಾ ಲಸಿಕೆ ತೆಗೆದುಕೊಂಡಿರುವವರಿಗೆ ಪ್ರವೇಶ ನೀಡಲಾಗುವುದು. ಈ ಬಗ್ಗೆ ಆಯ್ದ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಈ ಬಾರಿಯೂ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯಿಂದ ಸಾರಿಗೆ ಬಸ್ ಗಳು ಹೊರಡಲಿವೆ. ಲಲಿತ ಮಹಲ್ ಹೆಲಿಪ್ಯಾಡ್ ಬಳಿಯಿಂದ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.
ಈ ಬಾರಿಯೂ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಷ್ಟಾಚಾರದ ಪ್ರಕಾರ ಖಾಸಗಿ ವಾಹನಗಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ. ಎಲ್ಲೆಡೆ ಹೆಚ್ಚುವರಿಯಾಗಿ ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಸರತಿ ಸಾಲಿನಲ್ಲಿ ಬರುವ ಭಕ್ತಾಧಿಗಳು ಎಲ್ಇಡಿ ಪರದೆಯಲ್ಲಿ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಚಾಮುಂಡೇಶ್ವರಿ ವರ್ಧಂತಿಯ ದಿನ ಮಾತ್ರ ಬೆಳಿಗ್ಗೆ 7 ಗಂಟೆಯಿಂದ ಸಾರಿಗೆ ಬಸ್ ಗಳ ಸಂಚಾರ ಆರಂಭವಾಗಲಿದೆ. ಇನ್ನುಳಿದ ಆಷಾಡ ಶುಕ್ರವಾರಗಳಂದು ಬೆಳಗಿನ ಜಾವ 3 ಗಂಟೆಯಿಂದ ಸಾರಿಗೆ ಬಸ್ ಗಳು ಸಂಚರಿಸಲಿವೆ. ಆಷಾಡ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
Also Read: