ಮೈಸೂರಿನಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Aug 07, 2022 | 2:27 PM

ಬಸವಣ್ಣನವರ ಅನುಭವ ಮಂಟಪದ ಕಲ್ಪನೆ ಅದ್ಭುತವಾಗಿದ್ದು, 12ನೇ ಶತಮಾನದಲ್ಲಿ ಜಾತಿ ವಿರುದ್ಧ ಕ್ರಾಂತಿ ಮಾಡಿದರು, ಆದರೆ ಇವತ್ತಿಗೂ ಜಾತಿ ಹೋಗಿಲ್ಲ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಮೈಸೂರು: ಬಸವಣ್ಣನವರ (Basavanna) ಅನುಭವ ಮಂಟಪದ (Anubhava Mantapa) ಕಲ್ಪನೆ ಅದ್ಭುತವಾಗಿದ್ದು, 12ನೇ ಶತಮಾನದಲ್ಲಿ ಜಾತಿ ವಿರುದ್ಧ ಕ್ರಾಂತಿ ಮಾಡಿದರು, ಆದರೆ ಇವತ್ತಿಗೂ ಜಾತಿ ಹೋಗಿಲ್ಲ ಎಂದು ಮೈಸೂರಿನಲ್ಲಿ (Mysore) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಿ ಮಾತನಾಡಿದ ಅವರು ಸಮಾಜದ ಪ್ರತಿಯೊಬ್ಬರಲ್ಲೂ ಮಾನವೀಯತೆ ಬೆಳೆಯಬೇಕು ಎಂದು ಹೇಳಿದ್ದಾರೆ.

ಎಲ್ಲಾ ಜಾತಿಗಳು ಶೈಕ್ಷಣಿಕ  ಆರ್ಥಿಕವಾಗಿ ಪ್ರಗತಿ ಆಗಬೇಕಿದೆ. ಬಸವಾದಿ ಶರಣರು ಬಂದು ಹೋಗಿ 900 ವರ್ಷಗಳಾದರೂ ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಅಸಮಾನತೆ ಹೋಗಿಲ್ಲ. ಯಾರೇ ಮಾಟಮಂತ್ರ ಮಾಡಿದರೂ ನನಗೆ ರೋಗ ಬರಲ್ಲ. ರೋಗ ಬಂದಾಗ ಯಾರ ರಕ್ತವಾದರೂ ಕೊಡಿ ಜೀವ ಉಳಿಸಿ ಎಂದು ವೈದ್ಯರಲ್ಲಿ ಕೇಳಿ ಕೊಳ್ಳುತ್ತೇವೆ. ರಕ್ತ ಅವಶ್ಯಕತೆ ಇದ್ದಾಗ ಇರದ ಜಾತಿ ಬೇರೆ ಕಡೆ ಯಾಕೆ ಬೇಕು ಹೇಳಿ? ಎಂದು ಪ್ರಶ್ನಿಸಿದರು.

ಕಾಯಕ ಮಾಡುವ ನಾವೆಲ್ಲಾ ಶೂದ್ರರು. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುಂಚೆ ನಾವು ಉತ್ಪಾದನೆ ಮಾಡಿದ ವಸ್ತುವನ್ನು ನಾವು ಅನುಭವಿಸುತ್ತಿರಲಿಲ್ಲ. ಬ್ರಾಹ್ಮಣರು, ಕ್ಷತ್ರಿಯರು ಅನುಭವಿಸುತ್ತಿದ್ದರು. ಮೂರ್ತಿ ಪ್ರತಿಷ್ಠಾಪನೆ ಆದ ಮೇಲೆ ವಿಶ್ವಕರ್ಮರನ್ನು ಹೊರಗಡೆ ಇಟ್ಟರು. ಪೂಜೆ ಮಾಡುವವರು ಮಾತ್ರ ಒಳಗಡೆ ಇರಬೇಕಿದೆ ಎಂದರು.

ಬೋವಿ ಸಮಾಜದವರು ಕಲ್ಲು ಒಡೆದು ಗೋಡೆ ಕಟ್ಟುತ್ತಾರೆ. ಆದರೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅವಕಾಶವಿಲ್ಲ. ದಲಿತರು ದೇವಸ್ಥಾನ ಒಳಗಡೆಯೇ ಹೋಗುವಂತಿರಲಿಲ್ಲ. ಇದು ಚಾತುರ್ವರ್ಣ ಪದ್ಧತಿಯಿಂದ ಸೃಷ್ಟಿಯಾದ ವ್ಯವಸ್ಥೆ ಎಂದು ವಾಗ್ದಾಳಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್, ಮುಖಂಡರಾದ ಮರಿಗೌಡ, ಹರೀಶ್ ಗೌಡ ಹಾಜರಿದ್ದರು.

Published On - 2:27 pm, Sun, 7 August 22