ಮೈಸೂರು, ಜನವರಿ 30: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ (Chamundi Hills) ರೋಪ್ ವೇ (Ropeway) ನಿರ್ಮಾಣ ವಿಚಾರವಾಗಿ ಸಾಧಕ ಬಾಧಕಗಳ ಸಂಪೂರ್ಣ ಅಧ್ಯಯನದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹೆಚ್‌ಕೆ ಪಾಟೀಲ್ (HK Patil) ಹೇಳಿದ್ದಾರೆ. ಚಾಮುಂಡಿ ಬೆಟ್ಟದ ರೋಪ್‌ವೇ ಯೋಜನೆ ಅನುಷ್ಠಾನಗೊಂಡರೆ ಪರಿಸರ ವ್ಯವಸ್ಥೆಗೆ ಹಾನಿಯಾಗಬಹುದು ಎಂದು ವಿವಿಧ ಪರಿಸರ ಸಂಘಟನೆಗಳು ಮತ್ತು ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರೋಪ್ ವೇಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಚಾಮುಂಡಿ ಬೆಟ್ಟದ ಅಭಿವೃದ್ಧಿ ಯೋಜನೆಗಳ ಬಗ್ಗೆ ಪರಿಸರ ಹೋರಾಟಗಾರರು ಎತ್ತಿರುವ ಆಕ್ಷೇಪಗಳನ್ನು ಗಮನಿಸಿದ್ದೇವೆ. ಈ ಯೋಜನೆ ಸರ್ಕಾರದ ಮುಂದಿರುವುದು ನಿಜ. ಸರಿಯಾದ ಪರಾಮರ್ಶೆ, ಅಧ್ಯಯನ ನಡೆಸಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೋಪ್ ವೇ ಪ್ರಸ್ತಾವನೆ ಸರ್ಕಾರದ ಪರಿಗಣನೆಗೆ ಬಂದಿದೆ. ಈ ಮಧ್ಯೆ, ಯೋಜನೆಗೆ ವಿವಿಧ ವಲಯಗಳಿಂದ ಗಂಭೀರ ಆಕ್ಷೇಪಣೆ ಇರುವುದೂ ತಿಳಿದಿದೆ. ನಾವು ಯೋಜನೆಯ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ವಿಶ್ಲೇಷಿಸುತ್ತೇವೆ. ನಿರ್ಧಾರಕ್ಕೆ ಬರುವ ಮೊದಲು ಸ್ಥಳೀಯ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಅದರ ಪ್ರಭಾವವ ಏನಾಗಬಹುದು ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರೊಂದಿಗೂ ಚರ್ಚೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಕ್ಷೇತ್ರದ ಸಮಗ್ರ ಸಂರಕ್ಷಣೆ ಮತ್ತು ಅಭಿವೃದ್ಧಿಯ ಉಸ್ತುವಾರಿ ವಹಿಸಲಾಗುವುದು ಎಂದು ಪಾಟೀಲ್ ಮಾಹಿತಿ ನೀಡಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆಗೆ ಸಂಸದ ಪ್ರತಾಪ್ ಸಿಂಹ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಈ ಕುರಿತು ಹೇಳಿಕೆ ನೀಡಿದ್ದ ಅವರು, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಚಾಮುಂಡಿ ಬೆಟ್ಟ ಕೇವಲ ಪ್ರೇಕ್ಷಣೀಯ ಸ್ಥಳವಲ್ಲ. ಅದು ಧಾರ್ಮಿಕ ತಾಣವಾಗಿದ್ದು ಅಲ್ಲಿಗೆ ಭಕ್ತಿಯಿಂದ ತೆರಳಬೇಕೇ ವಿನಃ ರೋಪ್ ವೇಯಲ್ಲಿ ಹೋಗಿ ನೋಡುವುದಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಮಂಡ್ಯದಲ್ಲಿ ಹನುಮ ಧ್ವಜ ವಿವಾದ ಶುರುವಾಗಿದ್ಹೇಗೆ? ಯಾಕೆ? ಇಲ್ಲಿದೆ ಘಟನೆ ಹಿನ್ನೆಲೆ
ರೋಪ್ ವೇ ನಿರ್ಮಾಣ ಮಾಡಬಾರದು ಎಂಬ ಬಗ್ಗೆ ಶಾಸಕ ಜಿಟಿ ದೇವೇಗೌಡ ಸೇರಿದಂತೆ ನಾವೆಲ್ಲ ಈ ಹಿಂದೆಯೇ ಸಭೆ ನಡೆಸಿ ನಿರ್ಧಾರ ಕೈಗೊಂಡಿದ್ದೇವೆ. ನಂದಿ ಬೆಟ್ಟಕ್ಕೆ ಬೇಕಾದರೆ ರೋಪ್ ವೇ ಮಾಡಲಿ ಎಂದು ಪ್ರತಾಪ್ ಸಿಂಹ ಹೇಳಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ