ಮೈಸೂರು: ಗುತ್ತಿಗೆದಾರರಿಂದ ಕಮಿಷನ್ (commission) ಪಡೆಯುವುದು ಶೇ.3-4ರಷ್ಟಿದೆ. ಉಪನೋಂದಣಿ ಕಚೇರಿಯಲ್ಲಿ ಚಂದಾ ಎತ್ತುವುದೂ ಇದೆ. ಇದು ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. ಈ ಹಿಂದೆ ಜನ ಸಂತೋಷವಾಗಿ ಕೊಟ್ಟು ಹೋಗುತ್ತಿದ್ದರು. ಆದರೆ ಈಗ ಬಲವಂತವಾಗಿ ಕೀಳುವ ಕೆಲಸ ಆಗುತ್ತಿದೆ. ಇದು ವ್ಯವಸ್ಥೆಯ ದೋಷ, ಯಾರನ್ನೂ ದೂರುವುದಿಲ್ಲ. ಇದು ಬಿಜೆಪಿಯಿಂದ ಆರಂಭವಾಗಿದ್ದು ಎಂದ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. 2008ರ ಬಿಜೆಪಿ ಸರ್ಕಾರದಿಂದ ಇಂತಹ ವಾತಾವರಣ ಸೃಷ್ಟಿಯಾಗಿದೆ. ಬಿಜೆಪಿಯ ಆಪರೇಷನ್ ಕಮಲದಿಂದ ಇಂತಹ ವಾತಾವರಣ ನಿರ್ಮಾಣವಾಗಿದೆ. ನಾನು ಸಿಎಂ ಆಗಿದ್ದಾಗ ಇಂತಹ ಕಮಿಷನ್ ವ್ಯವಸ್ಥೆ ಇರಲಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿ ಶಾಸಕರ ಹಂತದಲ್ಲಿ ಕಮಿಷನ್ ಇದೆ ಎಂದು ಹೇಳಿದರು.
ಎಲ್ಲಾ ಪಕ್ಷಗಳ ಶಾಸಕರು ಗಣಿಗಾರಿಕೆ ಲೈಸೆನ್ಸ್ ಪಡೆದಿದ್ದಾರೆ. ಮರಳು ದಂಧೆ ಆರಂಭವಾಗಿದ್ದು ಬಿಜೆಪಿ ಸರ್ಕಾರದಿಂದ. ನನ್ನ ಕಾಲದಲ್ಲೂ ಕೆಲ ಇಲಾಖೆಯಲ್ಲಿ ಪರ್ಸೆಂಟೇಜ್ ಇತ್ತು. ಬೆಕ್ಕಿಗೆ ಘಂಟೆ ಕಟ್ಟುವರು ಯಾರು ಎಂದು ಹೆಚ್ಡಿ ಕುಮಾರಸ್ವಾಮಿ ಪ್ರಶ್ನಿಸಿದರು. ಗುತ್ತಿಗೆದಾರರು ಟೆಂಡರ್ ಬಾಯ್ಕಾಟ್ ಮಾಡಿ ಎಂದು ಸಲಹೆ ನೀಡಿದ್ದು, ಇಂತಹ ವ್ಯವಸ್ಥೆಗೆ ಪಾಲುದಾರರಾಗಲ್ಲವೆಂದು ದೂರ ಉಳಿಯಲಿ ಎಂದು ಗುತ್ತಿಗೆದಾರರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸಲಹೆ ನೀಡಿದರು.
ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ನವರು ಕಮಿಷನ್ ದಂಧೆಯಲ್ಲಿದ್ರು. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಸಚಿವರಿಗೆ ಅವಕಾಶ ನೀಡಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರಿಂದ ನನ್ನ ಮೇಲೆ ನಿರಂತರವಾಗಿ ಒತ್ತಡ ಹಾಕಲಾಗಿತ್ತು. ನಾನು ಬಡ್ತಿ ಕೊಟ್ಟವರಿಗೆ ಪೋಸ್ಟ್ ಕೊಡದೆ ಆಟ ಆಡಿಸಿದರು. ಕಾಂಗ್ರೆಸ್ನವರಿಗೂ ಈ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಸುಲಭವಾಗಿ ಸಂಪಾದಿಸುವುದು ನಿಂತಿದ್ದಕ್ಕೆ ನನ್ನ ಸರ್ಕಾರ ತೆಗೆದ್ರು. 3 ಜನ ಬಿಡಿಎ ಸಭೆಗೆ ಬಂದರೆ ಇಷ್ಟು ಹಣ ನೀಡಬೇಕಿತ್ತು.
ನಾನು ಬಂದ್ಮೇಲೆ ಅದು ನಿಂತಿತು ಎಂದು ಅಧಿಕಾರಿ ಹೇಳಿದ್ರು.
ಇನ್ನೆಷ್ಟು ಜೀವ ಬಲಿ ಬೇಕು?
ಬೆಂಗಳೂರಿನ ರಸ್ತೆಯಲ್ಲಿ ಗುಂಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ರಸ್ತೆ ಗುಂಡಿಯಿಂದ ಎರಡು ಅಮಾಯಕ ಜೀವ ಬಲಿಯಾಗಿದೆ. ಇನ್ನೆಷ್ಟು ಜೀವ ಬಲಿ ತೆಗೆಯಬೇಕು ಅಂತಾ ಪ್ರಶ್ನಿಸಿದರು. ರಸ್ತೆ ಗುಂಡಿಗಳಿಗೂ 40 ಪರ್ಸೆಂಟ್ ಹಾಗೂ ಕಮಿಷನ್ ವಿಚಾರವೇ ಕಾರಣ. ರಸ್ತೆ ಗುಂಡಿಗಳಿಗೆ ಪ್ರಮುಖ ಕಾರಣ ಕಳಪೆ ಕಾಮಗಾರಿ. ಕೆಲಸವೇ ಮಾಡದೇ ಬಿಲ್ ಮಾಡಲಾಗಿದೆ. ಬೇರೆ ದೇಶದಲ್ಲಿ ದೊಡ್ಡ ಮಳೆ ಆದರೂ ರಸ್ತೆ ಏನು ಆಗಲ್ಲ? ಬೆಂಗಳೂರು ನಗರದ ರಸ್ತೆಗಳ ಹಾಳಾಗಿರುವುದಕ್ಕೆ ಸರ್ಕಾರ ಬಿಬಿಎಂಪಿ ಕಾರಣ. ಶಾಸಕರು ಮಂತ್ರಿಗಳಿಗೆ ಗುಣಮಟ್ಟದ ಕಾಮಗಾರಿ ಬೇಡ. ತಮಗೆ ವೈಯಕ್ತಿಕ ಅನಕೂಲ ಆಗುವುದರ ಬಗ್ಗೆ ಗಮನ ಕೊಡುತ್ತಿದ್ದಾರೆ. ಇದರಿಂದಾಗಿ ಇಂತಹ ವಾತಾವರಣ ನಿರ್ಮಾಣವಾಗಿದೆ.
ಸರ್ಕಾರಕ್ಕೆ ಕೋರ್ಟ್ ಚೀಮಾರಿ ಹಾಕಿದೆ. ಸರ್ಕಾರ ಮೂಲಭೂತ ಸೌಕರ್ಯ ನೀಡುತ್ತಿಲ್ಲ. ಅಧಿಕಾರಿಗಳು ಸಹಾ ಇದರಲ್ಲಿ ಸೇರಿಕೊಂಡಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಗುತ್ತಿಗೆದಾರರು ಮೂರು ಜನರಿಂದ ಈ ಪರಿಸ್ಥಿತಿ ಬಂದಿದೆ. ಬೆಂಗಳೂರು ನಗರದ ಹೆಸರು ಇವರ ನಡವಳಿಕೆಯಿಂದ ಹಾಳಗುತ್ತಿದೆ ಎಂದು ಟಿವಿ9ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಹೊಂದಾಣಿಕೆಯಿಲ್ಲ
ಡಿಕೆ ಶಿವಕುಮಾರ, ಕುಮಾರಸ್ವಾಮಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ವಿಚಾರವಾಗಿ ಮಾತನಾಡಿದ ಅವರು ನನ್ನ, ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಹೊಂದಾಣಿಕೆಯಿಲ್ಲ ಎಂದು ಸ್ಪಷ್ಟನೆ ನೀಡಿದರು. ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಲು ಹೊರಟಿದ್ದಾರೆ. ನನ್ನ ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಹೊರಟ್ಟಿದ್ದೇನೆ. ನಾವು ಚುನಾವಣೆಯಲ್ಲಿ ಎದುರಾಳಿಗಳು.
ನಾವೇನೂ ವೈರಿಗಳಲ್ಲ, ನಾವೇನೂ ಭಾರತ-ಪಾಕಿಸ್ತಾನನಾ? ದೇವರ ದಯೆಯಿಂದ ಬಹುಮತ ಇಲ್ಲದಿದ್ರು ಸಿಎಂ ಆಗಲಿಲ್ವಾ?
ನನಗೆ ಚಾಮುಂಡೇಶ್ವರಿ ಆಶೀರ್ವಾದ ಇದ್ರೆ ಸಿಎಂ ಆಗುತ್ತೇನೆ. ಸಮುದಾಯದ ಸ್ವಾಮೀಜಿ ಕೆಲವು ಸೂಚನೆಗಳನ್ನು ನೀಡಿದ್ದಾರೆ
ಅದರಂತೆ ನಡೆದುಕೊಳ್ಳುತ್ತಿದ್ದೇವೆ ಎಂದು H.D.ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:12 pm, Fri, 26 August 22