ಮೈಸೂರು: ಡಿಜಿಪಿ ರವೀಂದ್ರನಾಥ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರವೀಂದ್ರನಾಥ್ ಎಂಬ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ನಿನ್ನೆ ರಾಜೀನಾಮೆ ನೀಡಿದ್ದಾರೆ. ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿದ್ದರು. ನಕಲಿ ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ತನಿಖೆ ಮಾಡಿ, ಕ್ರಮ ಕೈಗೊಳ್ಳುವುದು ಅವರ ಕರ್ತವ್ಯವಾಗಿತ್ತು. ರವೀಂದ್ರನಾಥ್ ಅವರು ಪ್ರಭಾವಿ ವ್ಯಕ್ತಿಗಳ ಬಗ್ಗೆ ತನಿಖೆ ಮಾಡಿದ್ದು, ಹಾಗಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ ಎಂದು ವರದಿಯಾಗಿದೆ ಹಾಗೂ ಸ್ವತಃ ರವೀಂದ್ರನಾಥ್ ಅವರೇ ಈ ಮಾತು ಹೇಳಿದ್ದಾರೆ. ಸರ್ಕಾರ ಈ ರೀತಿ ಮಾಡಿದ್ದರೆ ಅದು ದೊಡ್ಡ ಅಪರಾಧ ಎಂದರು.
ರೇಣುಕಾಚಾರ್ಯ ತಮ್ಮ ಪುತ್ರಿಗಾಗಿ ಬೇಡ ಜಂಗಮ ಜಾತಿಯ ನಕಲಿ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ. ಈ ವಿಚಾರ ಸದನದಲ್ಲೂ ಚರ್ಚೆಯಾಗಿದೆ. ರೇಣುಕಾಚಾರ್ಯ ಬೇಡ ಜಂಗಮ ಜಾತಿ ಪ್ರಮಾಣಪತ್ರಕ್ಕೆ ಅರ್ಹರಲ್ಲ. ಈ ರೀತಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕಲ್ವ? ಎಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿರುತ್ತದೆ ಅಲ್ಲಿ ಸುಭದ್ರ ಸರ್ಕಾರ, ಜನಪರ ಆಡಳಿತ ಇರಲು ಸಾಧ್ಯವಿಲ್ಲ. ರಾಜ್ಯದಲ್ಲಿ ದುರ್ಬಲವಾದ ಭ್ರಷ್ಟ ಸರ್ಕಾರವಿದೆ, ಇಂತಹ ಸರ್ಕಾರದಲ್ಲಿ ನ್ಯಾಯ ಎಲ್ಲಿ ಸಿಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ರವೀಂದ್ರನಾಥ ಅವರ ರಾಜೀನಾಮೆ ಅಂಗೀಕರಿಸದಂತೆ ಮನವಿ
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ ಅವರ ರಾಜೀನಾಮೆ ಅಂಗೀಕರಿಸದಂತೆ ಅನುಸೂಚಿತ ಜಾತಿ ಪಂಗಡಗಳ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರ ಸ್ವಾಮಿ ನೇತೃತ್ವದ ಸಮಿತಿ ಸದಸ್ಯರು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಭೇಟಿ ಮಾಡಿದ್ದಾರೆ. ಶಾಸಕರಾದ ಮಹೇಶ್, ಪಿ.ರಾಜೀವ್, ಅಬ್ಬಯ್ಯ, ಪ್ರಸಾದ್, ಪ್ರೊ. ಲಿಂಗಣ್ಣ ಇನ್ನಿತರರು ಹಾಜರಿದ್ರು. ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರ ನಾಥ್ ತಮ್ಮ ರಾಜೀನಾಮೆ ಹಿಂಪಡೆಯಲು ತಮ್ನ ಅಭ್ಯಂತರವಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಗಳು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಸಮಿತಿಯಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಉನ್ನತ ಹುದ್ದೆ ಗಿಟ್ಟಿಸಿಕೊಂಡವವರ ವಿರುದ್ದ ತನಿಖೆಗೆ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದ ಆಧಾರದ ಮೇಲೆ ರವೀಂದ್ರ ನಾಥ್ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
Published On - 3:46 pm, Wed, 11 May 22