ಮಂಡ್ಯ: ಜಿಲ್ಲೆಯ ಪಾಂಡವಪುರದಲ್ಲಿ (Pandavapura) 2016ರಲ್ಲಿ ನಡೆದಿದ್ದ ಕಾವೇರಿ ಹೋರಾಟದಲ್ಲಿ ಭಾಗಿಯಾದ್ದ 139 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸರ್ಕಾರ ಹಿಂಪಡೆದಿಲ್ಲ. ಹೋರಾಟದಲ್ಲಿ ಭಾಗಿಯಾದವರಿಗೆ ಇದೀಗ ಮತ್ತೆ ಕೋರ್ಟ್ನಿಂದ ಸಮನ್ಸ್ ಜಾರಿಮಾಡಲಾಗಿದೆ. ಈ ಮೊದಲೂ ಹಲವು ಬಾರಿ ಪ್ರಕರಣ ಹಿಂಪಡೆಯುವಂತೆ ಸರ್ಕಾರಗಳಿಗೆ ಹೋರಾಟಗಾರರು ಮನವಿ ಮಾಡಿದ್ದರು. ಸರ್ಕಾರವು ಪ್ರಕರಣ ಹಿಂಪಡೆಯುವ ಭರವಸೆ ನೀಡಿತ್ತು. ಆದರೆ ಈ ಭರವಸೆ ಈಡೇರಿರಲಿಲ್ಲ. ಹೀಗಾಗಿ ಹೋರಾಟಗಾರರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ತಿಂಗಳೊಳಗೆ ಪ್ರಕರಣ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಇದೀಗ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
2016ರಲ್ಲಿ ಕಾವೇರಿ ನೀರಿಗಾಗಿ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ವೇಳೆ ಕಲ್ಲು ತೂರಾಟವಾಗಿ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 139 ಮಂದಿ ಮೇಲೆ ಪಬ್ಲಿಕ್ ಪ್ರಾಪರ್ಟಿ ಡ್ಯಾಮೇಜ್ ಆಕ್ಟ್ ಅಡಿ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣ ಹಿಂಪಡೆಯುವಂತೆ ಹಲವು ಬಾರಿ ಹೋರಾಟಗಾರರು ಮನವಿ ಮಾಡಿದ್ದರು. ಈ ಕುರಿತು ಭರವಸೆಗಳನ್ನು ಕೊಟ್ಟಿದ್ದ ಸರ್ಕಾರ ನಂತರದ ದಿನಗಳಲ್ಲಿ ಈಡೇರಿಸುವುದನ್ನು ಮರೆತಿತ್ತು. ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ನ್ಯಾಯಾಲಯಗಳಿಗೆ ಅಲೆಯಬೇಕಾಗಿರುವ ದುಸ್ಥಿತಿ ಒದಗಿದೆ ಎಂದು ಪ್ರತಿಭಟನೆ ನಡೆಸಿದ್ದರು ಇದೀಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಾವೇರಿ ಜಲ ವಿವಾದ
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ವಿವಾದಕ್ಕೆ ಶತಮಾನಗಳ ಹಿನ್ನೆಲೆಯಿದೆ. ಕಾವೇರಿ ನದಿ ನೀರು ಹಂಚಿಕೆ ಕುರಿತು 6 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧಿಕರಣ 2007ರ ಫೆ.5ರಂದು ಕಾವೇರಿ ನದಿ ಪಾತ್ರದಲ್ಲಿ 740 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 419 ಟಿಎಂಸಿ ನೀರು ತಮಿಳುನಾಡಿಗೆ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪಾಂಡಿಚೇರಿಗೆ 7 ಟಿಎಂಸಿ ಮತ್ತು 4 ಟಿಎಂಸಿ ನೀರು ಸಮುದ್ರಕ್ಕೆ ಹರಿಯುಲು ಬಿಡುವಂತೆ ಅಂತಿಮ ತೀರ್ಪು ನೀಡಿತ್ತು. 2007 ಫೆ.5ರಲ್ಲಿ ಹೊರಡಿಸಿದ್ದ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಬಿದ್ದಿದ್ದು 6 ವರ್ಷಗಳ ಬಳಿಕ. ಅಂದರೆ 2013 ಫೆ. 20ರಂದು. ಅಂದಿನಿಂದ ಇಂದಿನ ವರೆಗೆ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕನ್ನಡಿಗರು ಹೋರಾಟ ಮಾಡಿಕೊಂಡೇ ಬಂದಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ: ನಡೆಯಲಿಲ್ಲ ಮೇಕೆದಾಟು ಯೋಜನೆಯ ಚರ್ಚೆ
ಇದನ್ನೂ ಓದಿ: ಕಾವೇರಿ ಕೂಗು ಯೋಜನೆ ವಿರುದ್ಧದ ಪಿಐಎಲ್ ವಜಾ; ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ