
ಮೈಸೂರು, ನವೆಂಬರ್ 24: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಹುಂಡಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (Govt School) ಶಿಕ್ಷಕರು ವಿದ್ಯಾರ್ಥಿಗಳ ಬಳಿ ಸಂಪ್‌ನಿಂದ ನೀರು ಸೇದಿಸಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಿರುವ ಬಗ್ಗೆ ವರದಿಯಾಗಿದ್ದು, ಆಕ್ಷೇಪ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ನವೆಂಬರ್ 20 ರಂದು ಗ್ರಾಮಸ್ಥರಾದ ಸಿದ್ದರಾಜು ಎಂಬವರು ತಮ್ಮ ಮಗಳನ್ನು ಅಂಗನವಾಡಿಯಿಂದ ಕರೆದುಕೊಂಡು ಬರಲು ಶಾಲೆಗೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
‘ಶಾಲಾ ಆವರಣದಲ್ಲಿರುವ ಸಂಪ್‌ನಿಂದ ಮಕ್ಕಳು ನೀರು ಸೇದುತ್ತಿರುವುದನ್ನು ನಾನು ನೋಡಿದೆ. ಮೊದಲಿಗೆ, ಯಾರೋ ಒಳಗೆ ಬಿದ್ದಿರಬಹುದು, ಅದಕ್ಕಾಗಿ ಸಂಪ್ನ ಇಣುಕಿ ನೋಡುತ್ತಿದ್ದಾರೆ ಎಂದು ನಾನು ಭಾವಿಸಿದೆ. ಈ ಬಗ್ಗೆ ಅಲ್ಲಿದ್ದವರನ್ನು ವಿಚಾರಿಸಿದಾಗ, ವಿದ್ಯಾರ್ಥಿಗಳಿಗೆ ಶಿಕ್ಷಕರು ನೀರು ತರಲು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಹೇಳಿದ್ದರು ಎಂಬುದು ತಿಳಿಯಿತು. ನಾನು ಘಟನೆಯನ್ನು ನನ್ನ ಸೆಲ್‌ಫೋನ್‌ನಲ್ಲಿ ರೆಕಾರ್ಡ್ ಮಾಡಿ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಗೆ ದೂರು ಸಲ್ಲಿಸಿದೆ. ಬಿಇಒ ನಿರ್ದೇಶನದಂತೆ, ನಂತರ ನಾನು ಲಿಖಿತ ದೂರು ಸಲ್ಲಿಸಿದೆ’ ಎಂದು ಸಿದ್ದರಾಜು ಎಂಬವರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಶಿಕ್ಷಕರ ಈ ವರ್ತನೆಗೆ ಸಿದ್ದರಾಜು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕೋಲಾರದಲ್ಲಿ ವಿದ್ಯಾರ್ಥಿಯೊಬ್ಬ ಸಂಪ್‌ಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ಬಳಿ ಸಂಪ್‌ನಿಂದ ನೀರು ಸೇದಿಸುವ ಘಟನೆ ಆತಂಕಕಾರಿಯಾಗಿದೆ ಎಂದು ಸಿದ್ದರಾಜು ಹೇಳಿದ್ದಾರೆ. ಅಲ್ಲದೆ, ಮುಖ್ಯೋಪಾಧ್ಯಾಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಅವರನ್ನು ಒತ್ತಾಯಿಸಿದ್ದಾರೆ. ಶಾಲೆಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಸರಿಯಾದ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸಿಎಂ ಆಗಲೆಂದು ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಪೂಜೆ!
ಘಟನೆ ಬಗ್ಗೆ ಸೋಮವಾರದೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬಿಇಒಗೆ ಡಿಡಿಪಿಐ ಎಸ್.ಟಿ. ಜವರೇಗೌಡ ಸೂಚಿಸಿದ್ದಾರೆ. ತನಿಖಾ ವರದಿಯಲ್ಲಿ ಸಲ್ಲಿಕೆಯಾದ ಮಾಹಿತಿಯ ಆಧಾರದ ಮೇಲೆ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.