Trin Trin Bicycle: ಸಾಂಸ್ಕೃತಿಕ ನಗರಿ ಮೈಸೂರಿನ ಟ್ರಿಣ್​ ಟ್ರಿಣ್​​ ಯೋಜನೆಗೆ ಮನಸೋತ ಪ್ರವಾಸಿಗರು: ಪ್ರತ್ಯೇಕ ಟ್ರ್ಯಾಕ್​ ನಿರ್ಮಾಣಕ್ಕೆ ಪಾಲಿಕೆ ಚಿಂತನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 28, 2022 | 7:22 PM

ಮೈಸೂರಿನ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಆರಂಭವಾದ ಈ ಯೋಜನೆಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Trin Trin Bicycle: ಸಾಂಸ್ಕೃತಿಕ ನಗರಿ ಮೈಸೂರಿನ ಟ್ರಿಣ್​ ಟ್ರಿಣ್​​ ಯೋಜನೆಗೆ ಮನಸೋತ ಪ್ರವಾಸಿಗರು: ಪ್ರತ್ಯೇಕ ಟ್ರ್ಯಾಕ್​ ನಿರ್ಮಾಣಕ್ಕೆ ಪಾಲಿಕೆ ಚಿಂತನೆ
ಸಾಂಸ್ಕೃತಿಕ ನಗರಿಯ ಟ್ರಿನ್ ಟ್ರಿನ್
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು (Mysuru) ಸ್ವಚ್ಛ ಸುಂದರ ನಗರಿ. ಜಗತ್ತಿನ ಅತ್ಯುತ್ತಮ ವಾತಾವರಣವನ್ನು ಹೊಂದಿರುವ ನಗರಗಳಲ್ಲಿ ಮೈಸೂರು ಅಗ್ರಸಾಲಿನಲ್ಲಿದೆ. ಇದಕ್ಕೆ ಕಾರಣ ಇಲ್ಲಿನ ಪರಿಸರ. ರಾಜರ ಆಳ್ವಿಕೆ ಕಾಲದಿಂದಲೂ ಇಲ್ಲಿನ ವಾತಾವರಣ ಶ್ರೀಮಂತಿಕೆಯಿಂದ ಕೂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೈಸೂರಿನಲ್ಲಿ ಉತ್ತಮವಾದ ಪರಿಸರದ ವಾತಾವರಣಕ್ಕೆ ಇಲ್ಲಿರುವ ಟ್ರಿಣ್​ ಟ್ರಿಣ್ ಸೈಕಲ್‌ (trin trin cycle) ಗಳು ಕಾರಣ‌. ಸಾರ್ವಜನಿಕರಿಗಾಗಿ ಟ್ರಿಣ್​ ಟ್ರಿಣ್ ಸೈಕಲ್ ಸೇವೆಯನ್ನು 2017ರಲ್ಲಿ ಆರಂಭಿಸಲಾಗಿತ್ತು. ಮೈಸೂರಿನ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಆರಂಭವಾದ ಈ ಯೋಜನೆಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದುವರೆಗೂ ಬರೋಬ್ಬರಿ 14 ಸಾವಿರ ಜನರು ಟ್ರಿಣ್​ ಟ್ರಿಣ್ ಸೈಕಲ್‌ ಯೋಜನೆಗೆ ಚಂದಾದಾರರಾಗಿದ್ದಾರೆ. ಇನ್ನು 4 ವರೆ ಸಾವಿರ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಟ್ರಿಣ್​ ಟ್ರಿಣ್

ಸಾಂಸ್ಕೃತಿಕ ನಗರಿ ಹೇಳಿ ಕೇಳಿ ಪ್ರವಾಸಿಗರ ಸ್ವರ್ಗ. ಪ್ರತಿದಿನ ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಪ್ರವಾಸಿಗರು, ಸ್ಥಳೀಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಸುಮಾರು 45 ಕಡೆ ಟ್ರಿಣ್​ ಟ್ರಿಣ್ ಸೈಕಲ್ ಕೇಂದ್ರಗಳಿವೆ. ಒಟ್ಟು 450 ಸೈಕಲ್‌ಗಳು ಸೇವೆಗೆ ಲಭ್ಯವಿವೆ. ಮೈಸೂರು ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ, ಪ್ರಮುಖ ವೃತ್ತಗಳು, ಕಾಲೇಜುಗಳು, ಪ್ರಮುಖ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಟ್ರಿಣ್​ ಟ್ರಿಣ್ ಸೈಕಲ್ ಸೇವೆ ಲಭ್ಯವಿದೆ. ಚಂದಾದಾರರು ಅತ್ಯಂತ ಸುಲಭವಾಗಿ ಇದರ ಸೇವೆ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Hampi Utsav 2023: ಜನವರಿ 27ರಿಂದ 3 ದಿನಗಳ ಕಾಲ ಹಂಪಿ ಉತ್ಸವ: ಜಿಲ್ಲಾಡಳಿತ ತೀರ್ಮಾನ

ಪ್ರತ್ಯೇಕ ಟ್ರ್ಯಾಕ್ ನಿರ್ಮಾಣ

ಹೊಸ ವರ್ಷಕ್ಕೆ ಮೈಸೂರು ಮಹಾನಗರ ಪಾಲಿಕೆ ಹೊಸದಾಗಿ 1 ಸಾವಿರ ಸೈಕಲ್ ಸೇರ್ಪಡೆ ಮಾಡುತ್ತಿದೆ. ಜಿಪಿ‌ಆರ್‌ಎಸ್ ಸೇರಿ ಅತ್ಯಾಧುನಿಕ ವ್ಯವಸ್ಥೆಯ ಸೈಕಲ್‌ಗಳು ಮೈಸೂರಿಗೆ ಆಗಮಿಸಲಿವೆ. ಈ ಮೂಲಕ ಹೆಚ್ಚಿನ ಜನರಿಗೆ ಸೈಕಲ್ ಸೇವೆ ಸಿಗಲಿದೆ. ಇದರ ಜೊತೆಗೆ ಮೈಸೂರಿನ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ಟ್ರಿಣ್​ ಟ್ರಿಣ್ ಸೈಕಲ್‌ಗಾಗಿ ಪ್ರತ್ಯೇಕ ಟ್ರ್ಯಾಕ್ ಮಾಡಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಇದಕ್ಕಾಗಿ ನೀಲಿ ನಕ್ಷೆ ಸಹಾ ಸಿದ್ದವಾಗಿದೆ. ಸುಮಾರು 8.7 ಕಿಲೋಮೀಟರ್ ಟ್ರ್ಯಾಕ್ ನಿರ್ಮಾಣಕ್ಕೆ ಸಿದ್ದತೆ ನಡೆದಿದೆ. ಮೊದಲ ಹಂತದಲ್ಲಿ ಮಾನಸ ಗಂಗೋತ್ರಿ, ಕುಕ್ಕರಹಳ್ಳಿ ಕೆರೆ ರಸ್ತೆ ರಾಮಸ್ವಾಮಿ ವೃತ್ತದ ರಸ್ತೆ, ಬಲ್ಲಾಳ್ ವೃತ್ತ, ಮೈಸೂರು ವಿವಿ ಸೇರಿ ನಗರದ ಹೃದಯ ಭಾಗದಲ್ಲಿ ಈ ಹೊಸ ಟ್ರ್ಯಾಕ್ ಸಿದ್ದವಾಗಲಿದೆ.

ಈ ಕುರಿತಾಗಿ ಮೇಯರ್​ ಶಿವಕುಮಾರ್ ಅವರು ಮಾತನಾಡಿ, ಟ್ರ್ಯಾಕ್ ನಿರ್ಮಾಣದ ನಂತರ ಟ್ರಿಣ್​ ಟ್ರಿಣ್ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ. ಇದು ಮೈಸೂರಿನ ಪರಿಸರವನ್ನು ಉತ್ತಮವಾಗಿಡಲು ಸಹಕಾರಿಯಾಗಲಿದೆ. ಆ ಸೈಕಲ್‌ಗಳು ಬಂದ ನಂತರ ಸೈಕಲ್ ಬಳಸಲು ಜನರಿಗೆ ಮನವಿ ಮಾಡಲಾಗುವುದು ಜೊತೆಗೆ ಸೈಕಲ್ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು‌ ಎಂದರು.

ಇದನ್ನೂ ಓದಿ: ಕಲರ್ ಪುಲ್ ಬಟ್ಟೆ ತೊಟ್ಟು ರ್‍ಯಾಂಪ್‌ ವಾಕ್ ಮಾಡಿದ ಯುವಕರು; ಮೈಸೂರಿನಲ್ಲಿ ನಡೆದ ಫ್ಯಾಷನ್ ಶೋನ ಝಲಕ್‌ ಇಲ್ಲಿದೆ

ಮೈಸೂರಿನಲ್ಲಿ ಸೈಕಲ್ ಬಳಕೆಗೆ ಉತ್ಸಾಹ ಹೆಚ್ಚಾಗಿದೆ

ಇನ್ನು ಮೈಸೂರು ಮಹಾನಗರ ಪಾಲಿಕೆ ಕಮಿಷನರ್​ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಮೈಸೂರಿನಲ್ಲಿ ಸೈಕಲ್ ಬಳಕೆಗೆ ಉತ್ಸಾಹ ಹೆಚ್ಚಾಗಿದೆ. ಆದರೆ ಸದ್ಯ ಈಗ ಬಳಸುತ್ತಿರುವ ಸೈಕಲ್‌ಗಳು ಹಳೆಯದಾಗಿವೆ. ಆದ ಕಾರಣ ಸೈಕಲ್ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ. ಅದೇ ಕಾರಣಕ್ಕೆ ಹೊಸ ಸೈಕಲ್‌ಗಳನ್ನು ತರಿಸಲಾಗುತ್ತಿದೆ. ಜನವರಿ ಅಂತ್ಯದ ವೇಳೆಗೆ ಹೊಸ ಸೈಕಲ್‌ಗಳು ಹೊಸ ಸೈಕಲ್ ಟ್ರ್ಯಾಕ್ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಆಗ ಬಳಕೆದಾರರ ಸಂಖ್ಯೆ ದ್ವಿಗುಣವಾಗಲಿದೆ ಎಂದು ಹೇಳಿದರು.

ಹೀಗಾಗಲೇ ಮೈಸೂರು ದೇಶದ ನಂಬರ್ 1 ಸ್ವಚ್ಛ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಈ ಟ್ರಿಣ್​ ಟ್ರಿಣ್ ಹೊಸ ರೂಪದಲ್ಲಿ ಬರುತ್ತಿರುವುದರಿಂದ ಮೈಸೂರಿನ ಪರಿಸರ ಮತ್ತಷ್ಟು ಸುಂದರ ಹಾಗೂ ಸ್ವಚ್ಚವಾಗಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ವರದಿ: ರಾಮ್ ಟಿವಿ9, ಮೈಸೂರು

Published On - 7:20 pm, Wed, 28 December 22