ಮೈಸೂರು: ದಕ್ಷಿಣಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಎರಡು ಕೋಟಿ ಹದಿನೈದು ಲಕ್ಷದ ಎಂಬತ್ತು ಸಾವಿರದ ನಾನೂರು ಅರವತ್ತೇಳು (2,15,80,467) ರೂಪಾಯಿ ಹಣ ಸಂಗ್ರಹವಾಗಿದೆ. ಕಳೆದ ತಿಂಗಳ ಸಂಗ್ರಹಕ್ಕೆ ಹೋಲಿಸಿದರೆ ದೇವಾಯಲದ ಒಟ್ಟು 21 ಹುಂಡಿಗಳಲ್ಲಿ ಈ ಬಾರಿ 57 ಲಕ್ಷ ಹಣ ಹೆಚ್ಚುವರಿ ಸಂಗ್ರಹವಾಗಿದೆ. ಕೊರೊನಾ ನಿಯಮ ಸಡಿಲಿಕೆ ನಂತರ ದೇವಾಲಯಕ್ಕೆ ಹೆಚ್ಚಿದ ಆದಾಯ ಬಂದಿದೆ.
ಈ ಬಾರಿಯೂ ನಿಷೇಧಿತ ನೋಟುಗಳು ದೇವರ ಹುಂಡಿಯಲ್ಲಿ ಪತ್ತೆಯಾಗಿದೆ. ಸುಮಾರು 42 ಸಾವಿರ ಮೌಲ್ಯದ ನಿಷೇಧಿತ ನೋಟುಗಳ ಸಂಗ್ರಹವಾಗಿದೆ. ವಿದೇಶಿ ಭಕ್ತರು ನಂಜುಂಡನಿಗೆ ಕಾಣಿಕೆ ಹಾಕಿದ್ದಾರೆ. 29 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿದ್ದು, ಇದರ ಜೊತೆಗೆ 108 ಗ್ರಾಂ ಚಿನ್ನ ಹಾಗೂ 5 ಕೆಜಿ 750 ಗ್ರಾಂ ಬೆಳ್ಳಿ ಇದೆ. ಬ್ಯಾಂಕ್ ಸಿಬ್ಬಂದಿಗಳು ಸೇರಿ ಸುಮಾರು 40ಕ್ಕೂ ಹೆಚ್ಚು ಜನರು ಎಣಿಕೆ ಕಾರ್ಯವನ್ನು ನಡೆಸಿದ್ದಾರೆ. ಲಾಕ್ಡೌನ್ ತೆರವು ನಂತರ ನಂಜುಂಡೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಹುಂಡಿಗೆ ಕಾಣಿಕೆ ಹೆಚ್ಚಾಗಿದೆ.
ಲಾಕ್ಡೌನ್ ನಂತರ ಕೋಟ್ಯಾಧೀಶನಾದ ನಂಜುಂಡೇಶ್ವರ
ಆಗಸ್ಟ್ ತಿಂಗಳಲ್ಲಿ ಭಕ್ತಾದಿಗಳಿಂದ ಕಾಣಿಕೆ ಹುಂಡಿ ಭರ್ತಿಯಾಗಿತ್ತು. ನಂಜನಗೂಡಿನ ದೇವಸ್ಥಾನದ ಸಿಬ್ಬಂದಿ ಹಾಗೂ ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಬ್ಬಂದಿ ದೇವಸ್ಥಾನದ ಹುಂಡಿಯಲ್ಲಿರುವ ಹಣ ಹಾಗೂ ಚಿನ್ನಾಭರಣ ಎಣಿಕೆ ಮಾಡಿದ್ದರು. ಆ ಪ್ರಕಾರ 50ಗ್ರಾಂ ಚಿನ್ನ, 8 ಕೆಜಿ 200 ಗ್ರಾಂ ಬೆಳ್ಳಿ, 12 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿತ್ತು.
ಫೆಬ್ರವರಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?
ಫೆಬ್ರವರಿಯಲ್ಲಿ ದೇಗುಲದ ಹುಂಡಿಯಲ್ಲಿನ ಹಣವನ್ನು ತಹಶೀಲ್ದಾರ್ ಶರ್ಮಿಳಾ ದತ್ತು ಸಮ್ಮುಖದಲ್ಲಿ ಏಣಿಕೆ ಮಾಡಿದ್ದರು. ಅಂದು ಹುಂಡಿಯಲ್ಲಿ 1,11,64,033 ರೂಪಾಯಿ ಕಾಣಿಕೆ ಸಂಗ್ರಹವಾಗಿತ್ತು. 105 ಗ್ರಾಂ ಚಿನ್ನ, 2 ಕೆ.ಜಿ 250 ಗ್ರಾಂ ಬೆಳ್ಳಿ, 6 ವಿದೇಶಿ ಕರೆನ್ಸಿ ಇದ್ದು, ಚಲಾವಣೆ ಇಲ್ಲದ 1 ಸಾವಿರ ಮುಖಬೆಲೆಯ 11 ನೋಟುಗಳು, 500 ಮುಖಬೆಲೆಯ 87 ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿತ್ತು.
Published On - 9:22 am, Sat, 25 December 21