ಸಾಹಿತ್ಯ ಲೋಕದ ದಿಗ್ಗಜ ಎಸ್.ಎಲ್ ಭೈರಪ್ಪನವರಿಗೆ ಕೇಂದ್ರ ಸರ್ಕಾರದಿಂದ ಅಂತಿಮ ಗೌರವ

ಕನ್ನಡದ ಖ್ಯಾತ ಸಾಹಿತಿ ಎಸ್​.ಎಲ್. ಭೈರಪ್ಪನವರ ಅಂತ್ಯಕ್ರಿಯೆ ಇಂದು ನೆರವೇರಿದೆ. ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಪ್ರಲ್ಹಾದ್ ಜೋಶಿ ಪುಷ್ಪನಮನ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರ ಶೋಕ ಸಂದೇಶದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಹೆಸರು, ಪ್ರತಿಷ್ಠೆ ಎರಡೂ ಬಂದರೂ ಬೀಗದಂತಹ ಸರಳಾತಿ ಸರಳ ಸಾಹಿತಿ ಭೈರಪ್ಪನವರು ಎಂದು ಪ್ರಲ್ಹಾದ್ ಜೋಶಿ ಸ್ಮರಿಸಿದ್ದಾರೆ.

ಸಾಹಿತ್ಯ ಲೋಕದ ದಿಗ್ಗಜ ಎಸ್.ಎಲ್ ಭೈರಪ್ಪನವರಿಗೆ ಕೇಂದ್ರ ಸರ್ಕಾರದಿಂದ ಅಂತಿಮ ಗೌರವ
Pralhad Joshi Final Tribute To Sl Bhyrappa

Updated on: Sep 26, 2025 | 6:59 PM

ಮೈಸೂರು, ಸೆಪ್ಟೆಂಬರ್ 26: ನಾಡಿನ ಹೆಸರಾಂತ ಸಾಹಿತಿ, ಸರಸ್ವತಿ ಸಮ್ಮಾನ್‌, ಪದ್ಮಶ್ರೀ ಪುರಸ್ಕೃತ ಕಾದಂಬರಿಕಾರ, ಸಂಶೋಧಕರಾದ ಡಾ. ಎಸ್‌.ಎಲ್‌. ಭೈರಪ್ಪ (SL Bhyrappa) ಅವರ ಪಾರ್ಥಿವ ಶರೀರಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಂತಿಮ ಗೌರವಾರ್ಪಣೆ ಸಲ್ಲಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಮೈಸೂರಿಗೆ ತೆರಳಿ ಭೈರಪ್ಪ ಅವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಶೋಕ ಸಂದೇಶ ನೀಡಿದರಲ್ಲದೆ, ಪಾರ್ಥಿವ ಶರೀರಕ್ಕೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಪರವಾಗಿ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಚಾಮುಂಡಿ ಬೆಟ್ಟದ ಬಳಿ ರುದ್ರಭೂಮಿಗೂ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಶೃದ್ಧಾಂಜಲಿ ಸಲ್ಲಿಸಿದರು.

ಮೇರು ಸಾಹಿತಿ ಭೈರಪ್ಪ ಅವರಿಂದು ಪಂಚಭೂತಗಳಲ್ಲಿ ಲೀನರಾಗಿದ್ದು, ಅವರೆಂದೂ ನೇಮ್‌-ಫೇಮ್‌ ಬಂದರೂ ಬೀಗುತ್ತಿರಲಿಲ್ಲ. ಅತ್ಯಂತ ಸರಳಾತಿ ಸರಳ ವ್ಯಕ್ತಿತ್ವದವರಾಗಿದ್ದರು. ಪ್ರಶಸ್ತಿ ಮೌಲ್ಯವನ್ನೆಲ್ಲ ಬಡವರಿಗೆ, ಸಮಾಜಕ್ಕೇ ಕೊಡುಗೆಯಾಗಿ ನೀಡುತ್ತಿದ್ದಂತಹ ಸಹೃದಯಿ ಸಾಹಿತಿಯಾಗಿದ್ದರು ಎಂದು ಸಚಿವ ಪ್ರಲ್ಹಾದ್ ಜೋಶಿ ಸ್ಮರಿಸಿದರು.

ಇದನ್ನೂ ಓದಿ: ಮಕ್ಕಳು ಅಂತ್ಯಕ್ರಿಯೆ ನಡೆಸುವಂತಿಲ್ಲವೆಂದು ಎಸ್‌ ಎಲ್‌ ಭೈರಪ್ಪ ವಿಲ್: ಇದು ನಿಜವೇ?

ಡಾ.ಎಸ್‌.ಎಲ್‌.ಭೈರಪ್ಪ ಅವರು ನಾಡು ಕಂಡಂತ ಅತ್ಯಂತ ಪ್ರತಿಭಾನ್ವಿತ ಬರಹಗಾರರು. ಅವರು ಯಾವುದೇ ಕಾದಂಬರಿಯನ್ನೂ ಸಮಗ್ರ ಅಧ್ಯಯನ ಇಲ್ಲದೆ ಬರೆಯುತ್ತಿರಲಿಲ್ಲ. ವಿಷಯಾಧಾರಿತವಾಗಿ ಓದಿ, ಅಧ್ಯಯನ, ವಿಮರ್ಶೆ ಮಾಡಿ ತಮ್ಮದೇ ವಿಶಿಷ್ಠ ಧಾಟಿಯಲ್ಲಿ ಬರೆಯುತ್ತಿದ್ದರು ಎಂದು ನೆನಪಿಸಿಕೊಂಡರು.

ಭೈರಪ್ಪ ಅವರದ್ದು ಒಂದು ಐತಿಹಾಸಿಕ ಅಧ್ಯಯನ. ಅವರ 25ಕ್ಕೂ ಹೆಚ್ಚಿನ ಕಾದಂಬರಿಗಳು ಭಾಷಾಂತರಗೊಂಡಿವೆ. ಮರಾಠಿ, ತೆಲುಗು ಮಾತ್ರವಲ್ಲದೆ ಚೈನಾ, ರಷ್ಯಾ ಹೀಗೆ ಅನೇಕ ಭಾಷೆಗಳಲ್ಲಿ ಅನುವಾದವಾಗಿವೆ. ಅವರ ಸಾಕಷ್ಟು ಕೃತಿಗಳು ಬಹು ಸಂಖ್ಯೆಯಲ್ಲಿ ಮರುಮುದ್ರಣವಾಗಿವೆ. ಕನ್ನಡ ನಾಡಿನ ಹೊರತಾಗಿಯೂ ಅವರು ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಬಣ್ಣಿಸಿದರು.

ಯಾವುದೇ ಪ್ರಶಸ್ತಿಯನ್ನೂ ಭೈರಪ್ಪ ಅವರು ಕೇಳಿರಲಿಲ್ಲ. ಯಾವುದೇ ಶಿಫಾರಸ್ಸು ಮಾಡುತ್ತಿರಲಿಲ್ಲ. ಅವರ ಸಾಹಿತ್ಯ ಕೃಷಿಗೆ ಸರಸ್ವತಿ ಸಮ್ಮಾನ್‌, ಪದ್ಮಭೂಷಣ, ಪದ್ಮಶ್ರೀಗಳಂತಹ ಪ್ರತಿಷ್ಠಿತ ಪ್ರಶಸ್ತಿಗಳೇ ಅವರನ್ನು ಅರಸಿ ಹೋಗಿದ್ದು, ನಾಡಿನಾದ್ಯಂತ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾದ ಹಿರಿಮೆಯ ಸಾಹಿತಿ ಎಂದು ಭಾವುಕರಾಗಿ ನುಡಿದರು.

ಇದನ್ನೂ ಓದಿ: SL Bhyrappa’s Funeral: ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಎಸ್​​ಎಲ್​​ ಭೈರಪ್ಪ

ಪ್ರಧಾನಿ ಕಂಬನಿ, ಶೋಕ ಸಂದೇಶ:

ʼಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಒಬ್ಬ ಧೀಮಂತ ಸಾಹಿತಿ, ಸಂಶೋಧಕರನ್ನು ಕಳೆದುಕೊಂಡಂತಾಗಿದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಂಬನಿ ಮಿಡಿದಿದ್ದು, ಶೋಕ ಸಂದೇಶ ಕಳಿಸಿದ್ದಾರೆ. ಭೈರಪ್ಪ ಅವರ ಕುಟುಂಬಕ್ಕೆ ಸ್ಥೈರ್ಯ ನೀಡಿದ್ದಾರೆ. ಭಾರತ ಸರ್ಕಾರ, ಪ್ರಧಾನಿ ಮೋದಿ ಅವರ ಪರವಾಗಿ ಮತ್ತು ವೈಯಕ್ತಿಕವಾಗಿ ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದೇನೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ