ಮೈಸೂರು: ಹಿಂದಿ ಭಾಷೆ ವಿರುದ್ಧ ಕರಾಳ ದಿನ ಆಚರಣೆ ಮಾಡಲು ಕನ್ನಡ ಚಳುವಳಿ ವಾಟಾಳ್ ಪಕ್ಷ ಮುಂದಾಗಿದೆ. ನವೆಂಬರ್ 21ರಿಂದ ಹಿಂದಿ ವಿರೋಧಿ ಚಳುವಳಿ ನಡೆಸಲು ವಾಟಾಳ್ ನಾಗರಾಜ್ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ಕೇಂದ್ರ ಸರ್ಕಾರ ಹಿಂದಿ ಭಾಷೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿ ಮೈಸೂರಿನ ಜಯಚಾಮರಾಜೇಂದ್ರ ವೃತ್ತದ ಬಳಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ನವೆಂಬರ್ 21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥ ನಡೆಸಲಾಗುತ್ತೆ. ಹೋರಾಟಕ್ಕೆ ಕರ್ನಾಟಕದ ಜನರು ಬೆಂಬಲ ನೀಡುವಂತೆ ಕರೆ ನೀಡಿದ್ದಾರೆ.
ಬ್ಯಾಂಕ್ನಲ್ಲಿ ಹಿಂದಿ ಬರಹದ ಚೆಕ್ ಕೊಡುತ್ತಾರೆ. ಬ್ಯಾಂಕ್ಗಳಿಗೆ ಕನ್ನಡಿಗರ ಹಣ ಬೇಕು ಆದರೆ ಕನ್ನಡ ಭಾಷೆ ಬೇಡ. ಇದರ ವಿರುದ್ಧ ಬ್ಯಾಂಕ್ ಗಳಿಗೆ ನುಗ್ಗುತೇವೆ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದ ಸಂಸದರು ಹಿಂದಿಯ ವಿರುದ್ಧ ಲೋಕಸಭೆಯಲ್ಲಿ ಮಾತನಾಡಬೇಕು. ಹಿಂದಿಯ ವಿರುದ್ಧ ಇಡೀ ರಾಜ್ಯ ಒಂದಾಗ ಬೇಕಾಗಿದೆ. ಹಿಂದಿ ಹೇರಿಕೆಯಿಂದ ಕನ್ನಡ ಬೆಳೆಯಲ್ಲ ಕನ್ನಡಕ್ಕೆ ಅವಮಾನ ಆಗುತ್ತದೆ. ರಾಜ್ಯದಲ್ಲಿ ಗುಜರಾತಿ, ತಮಿಳು, ಮಲಯಾಳಿಗಳು ತಿಂದು ತೇಗುತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದಿ ಪ್ರಬಲ ಆಗಿ ಕನ್ನಡಕ್ಕೆ ಅಪಾಯ ಆಗುತ್ತೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹಿಂದಿ ಹೇರಿಕೆ ವಿರುದ್ಧ ಕ್ರಿಯಾ ಸಮಿತಿ ರಚನೆ ಮಾಡುತ್ತೇವೆ. ರಾಜ್ಯದಲ್ಲಿ ಹಿಂದಿ ಹೇರಿಕೆಯಲ್ಲಿ ಬಿಜೆಪಿ, ಆರ್ಎಸ್ಎಸ್ ಪಾತ್ರ ಇದೆ. ಸರ್ಕಾರಿ ಸಮಾರಂಭ ಕನ್ನಡದಲ್ಲಿ ನಡೆಯಬೇಕು. ಕನ್ನಡ ಬಿಟ್ಟು ಯಾವುದೇ ಸಮಾರಂಭ ನಡೆಸಿದರೆ ನಾವು ನುಗ್ಗುತ್ತೇವೆ ಎಂದು ವಾಟಾಳ್ ವಾರ್ನ್ ಮಾಡಿದ್ದಾರೆ.
ಇನ್ನು ಇದೇ ವೇಳೆ ಉಪಚುನಾವಣೆ ಫಲಿತಾಂಶದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ವಾಟಾಳ್, ಈ ಚುನಾವಣೆ ಸಿಎಂ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಇದರಿಂದ ಬಸವರಾಜ್ ಬೊಮ್ಮಾಯಿ ರವರಿಗೆ ಯಾವುದೇ ಅಪಾಯ ಇಲ್ಲ. ಗ್ರಾಮ ಪಂಚಾಯಿತಿ ಸದಸ್ಯರ ಸಂಬಳ ಕೇವಲ ಒಂದು ಸಾವಿರ ಇದೆ. ಇದು ನಿಜಕ್ಕೂ ಅಗೌರವ ಕನಿಷ್ಠ ಸಂಬಳ 5 ಸಾವಿರ ನೀಡಬೇಕು. ಗ್ರಾಮ ಪಂಚಾಯಿತಿಗಳಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದರು.
ಇದನ್ನೂ ಓದಿ: ನನ್ನಂಥವನು ವಿಧಾನಸೌಧಕ್ಕೆ ಹೋಗಬೇಕು ಹೀಗಾಗಿ ಚುನಾವಣೆಗೆ ನಿಲ್ತೀನಿ: ವಾಟಾಳ್ ನಾಗರಾಜ್ ಘೋಷಣೆ