ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ನಟ ಯಶ್(Actor Yash) ಭಾಗಿಯಾಗಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರುವ ಸಿಎಂ ಬೊಮ್ಮಾಯಿ ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಅನಾಮಧೇಯ ಹೋರಾಟಗಾರರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ ಎಂದರು. ಹಾಗೂ ನಟ ಯಶ್ನನ್ನು ಹೊಗಳಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಪ್ರಾಣ ತ್ಯಾಗ ಮಾಡಿದ್ದಾರೆ. ಅನಾಮಧೇಯ ಹೋರಾಟಗಾರರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಅಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಿಸಲಿದ್ದೇವೆ. ದೇಶದ ಗಡಿ ಕಾಯುತ್ತಿರುವ ನನ್ನ ಯೋಧರಿಗೆ ಸಲಾಂ. ಶ್ರಮ ಜೀವಿಗಳಿಗೆ & ಯುವ ಶಕ್ತಿಗೆ ಸಲಾಂ ಎಂದು ಸಿಎಂ ಬೊಮ್ಮಾಯಿ ತಮ್ಮ ಭಾಷಣದಲ್ಲಿ ಹೇಳಿದ್ರು. ಯುವಕರು ನಿಮ್ಮ ಭವಿಷ್ಯದ ಜೊತೆಗೆ ದೇಶದ ಭವಿಷ್ಯ ರೂಪಿಸಬೇಕು. ಮೈಸೂರಿನಲ್ಲಿ ಮಹಾರಾಜ & ಮಹಾರಾಣಿ ಇಬ್ಬರೂ ಮುಖ್ಯವಾಗಿದ್ದಾರೆ. ಮಹಾರಾಜ & ಮಹಾರಾಣಿ ಕಾಲೇಜುಗಳನ್ನ ನವೀಕರಣ ಮಾಡ್ತೇವೆ. ಮಾನಸ ಗಂಗೋತ್ರಿಯಲ್ಲಿ 1 ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸುತ್ತೇವೆ. ಮೈಸೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತದೆ ಎಂದರು.
ರಾಕಿಂಗ್ ಸ್ಟಾರ್ ಯಶ್ ಯೂತ್ ಐಕಾನ್
ಇಂತಹ ಯುವಶಕ್ತಿಯನ್ನು ನಾನು ಎಲ್ಲೂ ನೋಡಿಲ್ಲ. ನಿಮ್ಮನ್ನು ನೋಡಿ ನನ್ನ ಶಕ್ತಿ ಇಮ್ಮಡಿಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಯೂತ್ ಐಕಾನ್ ಆಗಿದ್ದಾರೆ. ಹಾಗಾಗಿ ಯಶ್ ರನ್ನು ಕರೆಸಿದ್ದೇವೆ. ಯಶ್ ಹೆಸರಿನಲ್ಲೇ ಯಶಸ್ಸು ಇದೆ. ಮೈಸೂರಿನಲ್ಲಿ ಬೆಳೆದ ಹುಡುಗ ಇವತ್ತು ರಾಕಿಂಗ್ ಸ್ಟಾರ್. ಯಶ್ ಕೇವಲ ಕನ್ನಡ ಚಿತ್ರದ ರಾಕಿಂಗ್ ಸ್ಟಾರ್ ಅಲ್ಲ. ಕೆಜಿಎಫ್ ಮುಖಾಂತರ ಇಡೀ ಭಾರತದ ರಾಕಿಂಗ್ ಸ್ಟಾರ್. ತನ್ನದೇ ಆದಂತಹ ಛಾಪು ಮೂಡಿಸಿದ್ದಾರೆ ಎಂದು ಭಾಷಣದ ವೇಳೆ ಸಿಎಂ ಬೊಮ್ಮಾಯಿ ನಟ ಯಶ್ರನ್ನು ಹಾಡಿ ಹೊಗಳಿದ್ದಾರೆ.
ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ
ಇನ್ನು ಕಾರ್ಯಕ್ರಮದಲ್ಲಿ ನಟ ಯಶ್ ಕೂಡ ಮಾತನಾಡಿದ್ದು, ನಮ್ಮೂರಿನಲ್ಲಿ ದೇಶದ ಹೆಮ್ಮೆಯ ಧ್ವಜ ಹಿಡಿಯುವ ಕಾರ್ಯಕ್ರಮ ಆಯೋಜಿಸಿರುವುದರಿಂದ ಬಹಳ ಹೆಮ್ಮೆಯಿಂದ ಬಂದಿದ್ದೇನೆ. ವಿದ್ಯಾರ್ಥಿ ದಿಸೆಯಲ್ಲಿ ನಾನು ತಂದೆ ತಾಯಿ ಖುಷಿಯಾಗುವಂತೆ ಇರಲಿಲ್ಲ. ಮೈಸೂರಿನ ಕಾಳಿದಾಸರಸ್ತೆ, ಒಂಟಿಕೊಪ್ಪಲ್, ಪಡುವಾರಹಳ್ಳಿ, ಮಾನಸ ಗಂಗೋತ್ರಿಯಲ್ಲಿ ಓಡಾಡಿಕೊಂಡಿದ್ದೆ. ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ನಾನೇನು ಹೆಚ್ಚು ಬದಲಾಗಿಲ್ಲ. ಮೊದಲು ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ. ನಾವೀಗ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ. ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ರು.
Published On - 3:53 pm, Thu, 11 August 22