ಬೆಂಗಳೂರು, ಫೆಬ್ರವರಿ 25: ಕರ್ನಾಟಕ ನೈಋತ್ಯ ರೈಲ್ವೆ ವಲಯದ (South Western Railway Department) 15 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು (ಫೆ.26) ವರ್ಚುವಲ್ ಮೂಲಕ ಚಾಲನೆ ನೀಡಿದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿ (Amrita Bharat Station Project) 372,13 ಕೋಟಿ ರೂ. ವೆಚ್ಚದಲ್ಲಿ 15 ರೈಲು ನಿಲ್ದಾಣಗಳಿಗೆ (Railway Station) ಸ್ಮಾರ್ಟ್ ಟಚ್ ನೀಡಲಾಗುತ್ತದೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕದ ಕೆಂಗೇರಿ, ಕೃಷ್ಣರಾಜಪುರ, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ದೊಡ್ಡಬಳ್ಳಾಪುರ, ಹಿಂದೂಪುರ, ಹೊಸೂರು, ಕುಪ್ಪಂ, ಮಲ್ಲೇಶ್ವರ, ಮಾಲೂರು, ಮಂಡ್ಯ, ರಾಮನಗರ, ತುಮಕೂರು, ವೈಟ್ ಫೀಲ್ಡ್ ರೈಲು ನಿಲ್ದಾಣಗಳು ಒಟ್ಟು 327.13 ರೂ. ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳ್ಳಲಿವೆ.
ತುಮಕೂರು ರೈಲ್ವೆ ನಿಲ್ದಾಣ ಆಧುನೀಕರಣಕ್ಕೆ ಸುಮಾರು 50 ಕೋಟಿ ರೂ. ಮೀಸಲು ಇಡಲಾಗಿದೆ. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದ ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್‌ಪಿ ಅಶೋಕ್ ವೆಂಕಟ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇನ್ನು ವಿಜಯಪುರ ರೈಲ್ವೆ ನಿಲ್ದಾಣ ಆಧುನೀಕರಣ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಂಸದ ರಮೇಶ ಜಿಗಜಿಣಗಿ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು. ಹಾಗೆ ವಿಜಯಪುರದ ಬಿಜೆಪಿ ಮುಖಂಡರು, ವಿದ್ಯಾರ್ಥಿಗಳು, ಪ್ರಯಾಣಿಕರು ಸಹ ಭಾಗಿಯಾಗಿದ್ದರು. ಹಾಗೆ ಕೋಲಾರ ಜಿಲ್ಲೆಯ ಮಾಲೂರು ರೈಲು ನಿಲ್ದಾಣ ಆಧುನೀಕರಣ ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ವೇಳೆ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು. 20.59 ಕೋಟಿ ರೂಪಾಯಿ ವೆಚ್ಚದ ರೈಲು ನಿಲ್ದಾಣ ಉನ್ನತೀಕರಣ ಕಾಮಗಾರಿ ಇದಾಗಿದೆ.
ಮಂಡ್ಯ ರೈಲ್ವೆ ನಿಲ್ದಾಣ ಮೇಲ್ದರ್ಜೇಗೆರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಶ್ ಮತ್ತು ಶಾಸಕ ಗಣಿಗ ರವಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ: ಚೆನ್ನೈ-ಬೆಂಗಳೂರು-ಮೈಸೂರು ಸಂಪರ್ಕಿಸಲಿದೆ ಮಹತ್ವದ ಹೈ ಸ್ಪೀಡ್ ರೈಲು ಯೋಜನೆ; ಭೂಸ್ವಾಧೀನಕ್ಕಾಗಿ ಭೂ ಮಾಲೀಕರೊಂದಿಗೆ ಸಭೆ
ಅಮೃತ ಭಾರತ ನಿಲ್ದಾಣ ಯೋಜನೆಯಡಿ ದೇಶಾದ್ಯಂತ ರೈಲು ನಿಲ್ದಾಣಗಳನ್ನು ಹೆಚ್ಚಿಸುವುದು ಮತ್ತು ಆಧುನೀಕರಿಸುವ ಗುರಿ ಹೊಂದಿದೆ. ಈ ಯೋಜನೆ ಅಡಿಯಲ್ಲಿ ಒಟ್ಟು 1275 ನಿಲ್ದಾಣಗಳನ್ನು ನವೀಕರಿಸಲು ಮತ್ತು ಆಧುನೀಕರಿಸಲು ಉದ್ದೇಶಿಸಿದೆ.
ಈ ಯೋಜನೆ ವಿವಿಧ ನಿಲ್ದಾಣದ ಸೌಲಭ್ಯಗಳನ್ನು ಹೆಚ್ಚಿಸಲು ಮಾಸ್ಟರ್ ಪ್ಲಾನ್‌ಗಳನ್ನು ರಚಿಸುವುದು ಮತ್ತು ಹಂತಗಳಲ್ಲಿ ಅವುಗಳನ್ನು ಕಾರ್ಯಗತಗೊಳಿಸುವುದನ್ನು ಒಳಗೊಂಡಿದೆ. ನಿಲ್ದಾಣದ ಪ್ರವೇಶವನ್ನು ಉತ್ತಮಗೊಳಿಸುವುದು, ವಿಶ್ರಾಂತಿ ಕೊಠಡಿ, ಶೌಚಾಲಯ ಸೌಲಭ್ಯಗಳು, ಲಿಫ್ಟ್ ಮತ್ತು ಎಸ್ಕಲೇಟರ್ ಸ್ಥಾಪನೆ, ಸ್ವಚ್ಛತೆ, ಉಚಿತ ವೈ-ಫೈ ನೀಡುವಿಕೆ, ‘ಒಂದು ನಿಲ್ದಾಣದ ಒಂದು ಉತ್ಪನ್ನ’ ದಂತಹ ಉಪಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜಿಸುವುದು. ಕಾರ್ಯನಿರ್ವಾಹಕ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಪ್ರತಿ ನಿಲ್ದಾಣಕ್ಕೆ ಅದರ ಅವಶ್ಯಕತೆಗಳನ್ನು ಪೂರೈಸುವುದು.
ಇದಲ್ಲದೆ, ಈ ಯೋಜನೆಯ ಅಡಿಯಲ್ಲಿ ನಿಲ್ದಾಣದ ರಚನೆಗಳನ್ನು ನವೀಕರಿಸುವುದು, ಎರಡೂ ಕಡೆಗಳಲ್ಲಿ ಸುತ್ತಮುತ್ತಲಿನ ನಗರ ಪ್ರದೇಶಗಳೊಂದಿಗೆ ನಿಲ್ದಾಣಗಳನ್ನು ಸಂಯೋಜಿಸುವುದು, ಮಲ್ಟಿಮೋಡಲ್ ಸಂಪರ್ಕವನ್ನು ಉತ್ತೇಜಿಸುವುದು, ದಿವ್ಯಾಂಗ ಸ್ನೇಹಿ ಸೌಲಭ್ಯಗಳನ್ನು ಒದಗಿಸುವುದು, ಸುಸ್ಥಿರ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಅನುಷ್ಠಾನಗೊಳಿಸುವುದು, ಬಲ್ಲಾಸ್ಟ್ ರಹಿತ ಟ್ರ್ಯಾಕ್ ಅನ್ನು ಪರಿಚಯಿಸುವುದು, ಅಗತ್ಯವಿರುವ ಕಡೆ ರೂಫ್ ಪ್ಲಾಜಾ ನಿರ್ಮಿಸುವುದು ಮತ್ತು ಸುಧಾರಣೆಗಳ ಕಾರ್ಯಸಾಧ್ಯತೆ ಮತ್ತು ಹಂತವನ್ನು ಪರಿಗಣಿಸಿ ಒತ್ತು ನೀಡಲಾಗುತ್ತದೆ. ದೀರ್ಘಾವಧಿಯಲ್ಲಿ ಈ ನಿಲ್ದಾಣಗಳನ್ನು ರೋಮಾಂಚಕ ನಗರ ಕೇಂದ್ರವನ್ನಾಗಿ ಪರಿವರ್ತಿಸುವುದು ಅಂತಿಮ ಗುರಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Mon, 26 February 24