ಪರಪ್ಪನ ಅಗ್ರಹಾರದಲ್ಲಿ ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ: NCR ದಾಖಲು

ಪರಪ್ಪನ ಅಗ್ರಹಾರದಲ್ಲಿ ರೌಡಿ ಶೀಟರ್, ಕೊಲೆ ಆರೋಪಿ ಗುಬ್ಬಚ್ಚಿ ಸೀನಾನ ಹುಟ್ಟುಹಬ್ಬ ಆಚರಣೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಾಗಿದೆ. ಮತ್ತೊಂದೆಡೆ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹಣ ಪಡೆದು ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಆರೋಪ ಕೇಳಿಬಂದಿರುವ ಕಾರಣ, ಹಲವರ ತಲೆದಂಡವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಪರಪ್ಪನ ಅಗ್ರಹಾರದಲ್ಲಿ ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ: NCR ದಾಖಲು
ಪರಪ್ಪನ ಅಗ್ರಹಾರ
Updated By: ಪ್ರಸನ್ನ ಹೆಗಡೆ

Updated on: Oct 06, 2025 | 4:32 PM

ಬೆಂಗಳೂರು, ಅಕ್ಟೋಬರ್​ 06: ಜೈಲಿನಲ್ಲಿ ರೌಡಿ ಶೀಟರ್ ಗುಬ್ಬಚ್ಚಿ ಸೀನಾ ಅದ್ದೂರಿ‌ ಬರ್ತ್​ ಡೇ ಆಚರಣೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಾಗಿದೆ. ಮಾಧ್ಯಮಗಳ ವರದಿ ಬಳಿಕ ವಿಷಯ ಗಮನಕ್ಕೆ ಬಂದಿದೆ ಎಂದು ದೂರು ದಾಖಲಾಗಿದ್ದು, ಜೈಲು ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ಕಂಪ್ಲೇಂಟ್​ ನೀಡಿದ್ದಾರೆ. ಶ್ರೀನಿವಾಸ್ ಅಲಿಯಾಸ್​ ಗುಬ್ಬಚ್ಚಿ ಸೀನಾ, ಆನಂದ್, ಅರುಣ, ಪ್ರವೀಣ್, ಸೂರ್ಯ, ಮಿಥುನ್, ಪ್ರಜ್ವಲ್, ಚೇತನ್, ಅರವಿಂದ್, ಕಾರ್ತಿಕ್ ಸೇರಿ ಹನ್ನೊಂದು ಮಂದಿಯ ವಿರುದ್ದ NCR ದಾಖಲಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಟವರ್ 1ರ 6ನೇ ಬ್ಯಾರಕ್ ನ 7ನೇ ಕೊಠಡಿಯಲ್ಲಿ ರೌಡಿ ಶೀಟರ್​ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಲಾಗಿತ್ತು. ಸಹಚರರ ಜೊತೆ ಬರ್ತ್​ ಡೇ ಆಚರಿಸಿಕೊಂಡಿದ್ದ ಕೊಲೆ ಆರೋಪಿ ಗುಬ್ಬಚ್ಚಿ ಸೀನಾನ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿದ್ದವು. ಜೈಲಿನ ಬೇಕರಿಯಿಂದ ಗುಬ್ಬಚ್ಚಿ ಸೀನಾನ ಸಹಚರರು ಕೇಕ್​ ತರಿಸಿಕೊಂಡಿದ್ದರು ಎನ್ನಲಾಗಿದ್ದು, ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಹಣ ಪಡೆದು ಕೈದಿಗಳಿಗೆ ರಾಜಾತಿಥ್ಯ ನೀಡಿರುವ ಆರೋಪ ಕೇಳಿಬಂದಿತ್ತು. ಆ ಬೆನ್ನಲ್ಲೇ ಪ್ರಕರಣ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ADGP ದಯಾನಂದ್ ಇಲಾಖಾ ವರದಿ ಕೇಳಿದ್ದರು.

ಇದನ್ನೂ ಓದಿ: ನೀರು ಕೊಡದಿದ್ದಕ್ಕೆ ಪತಿಯಿಂದ ಹಲ್ಲೆ: ಕೋಮಾಗೆ ಜಾರಿದ್ದ ಮಹಿಳೆ ಸಾವು

ಅಧಿಕಾರಿಗಳು ಮತ್ತು ಸಿಬ್ಬಂದಿ ತಲೆದಂಡ?

ರೇಣುಕಾಸ್ವಾಮಿ ಕೊಲೆ ಕೇಸ್​ ನಲ್ಲಿ ಜೈಲು ಸೇರಿದ್ದ ನಟ ದರ್ಶನ್​ ಗೂ ರಾಜಾತಿಥ್ಯ ನೀಡಿದ್ದ ಫೋಟೋಗಳು ವೈರಲ್​ ಆಗಿದ್ದವು. ಘಟನೆ ವಿಚಾರವಾಗಿ ಅಧಿಕಾರಿಗಳು ಮತ್ತು ಸಿಬ್ಬಂಗಳ ತಲೆದಂಡವೂ ಆಗಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಜೈಲಿನ ಮುಖ್ಯ ಅಧೀಕ್ಷಕ ಕೆ.ಸುರೇಶ್, ಅಧೀಕ್ಷಕ ಐ.ಜೆ.ಮ್ಯಾಗೇರಿ, ದಕ್ಷಿಣ ವಲಯ ಡಿಐಜಿ ಕೆ.ಸಿ. ದಿವ್ಯಶ್ರೀ, ಸಹಾಯಕ ಅಧಿಕ್ಷಕ ಅಶೋಕ್ ಭಜಂತ್ರಿ, ಕರ್ಣ ಮತ್ತು ಜೈಲರ್ ಕಾಂತಪ್ಪ ಪೂಜಾರಿಸೇರಿದಂತೆ ಹಲವು ಅಧಿಕಾರಿ ಮತ್ತು ಸಿಬ್ಬಂದಿಗಳ ತಲೆದಂಡವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸುಮಾರು ಇಪ್ಪತ್ತು ಮಂದಿ ಅಧಿಕಾರಿ, ಸಿಬ್ಬಂದಿಯನ್ನ ಬೇರೆ ಜೈಲುಗಳಿಗೆ ವರ್ಗಾವಣೆಗೂ ಚಿಂತನೆ ನಡೆಸಿರುವ ಬಗ್ಗೆ ಮಾಹಿತಿ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.