ನೀರು ಕೊಡದಿದ್ದಕ್ಕೆ ಪತಿಯಿಂದ ಹಲ್ಲೆ: ಕೋಮಾಗೆ ಜಾರಿದ್ದ ಮಹಿಳೆ ಸಾವು
ಕುಡಿಯಲು ನೀರು ಕೊಟ್ಟಿಲ್ಲ ಎಂಬ ಕಾರಣಕ್ಕೆ ಪತಿ ನಡೆಸಿದ ಹಲ್ಲೆಯಿಂದ ಕೋಮಾಗೆ ಜಾರಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಮನೆಗೆ ಕುಡಿದು ಬಂದಿದ್ದ ಪತಿ ಪತ್ನಿ ಮೇಲೆ ಸಿಟ್ಟಾಗಿ ಲಟ್ಟಣಿಗೆಯಿಂದ ಹಲ್ಲೆ ನಡೆಸಿದ ಕಾರಣ ಮಹಿಳೆಯ ತಲೆಗೆ ಗಂಭೀರಾಗಿ ಪೆಟ್ಟಾಗಿತ್ತು.

ಬೆಂಗಳೂರು ಅಕ್ಟೋಬರ್ 06: ಪತಿ ನಡೆಸಿದ ಹಲ್ಲೆಯಿಂದಾಗಿ ಕೋಮಾಗೆ ಜಾರಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರೀತಿ ಸಿಂಗ್ (26) ಮೃತ ಮಹಿಳೆಯಾಗಿದ್ದು, ಆರೋಪಿ ಛೋಟೆಲಾಲ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿ ಪೀಣ್ಯ ಬಳಿಯ ಚೊಕ್ಕಸಂದ್ರದಲ್ಲಿ ನೆಲೆಸಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 24ರಂದು ಮನೆಗೆ ಬಂದ ಛೋಟೆಲಾಲ್ ಹೆಂಡತಿ ಬಳಿ ಕುಡಿಯಲು ನೀರು ಕೇಳಿದ್ದ. ಈ ವೇಳೆ ನಾನು ಕೆಲಸಕ್ಕೆ ಹೋಗಬೇಕು. ಹಾಗಾಗಿ ನೀನೇ ನೀರು ತೆಗೆದುಕೊಂಡು ಕುಡಿ ಎಂದು ಆಕೆ ಹೇಳಿದ್ದಾಳೆ. ಅದಾಗಲೇ ಮದ್ಯ ಸೇವಿಸಿ ಬಂದಿದ್ದ ಛೋಟೆಲಾಲ್ ಹೆಂಡತಿಯ ಈ ಮಾತುಗಳನ್ನ ಕೇಳಿ ಸಿಟ್ಟಾಗಿದ್ದು, ಲಟ್ಟಣಿಗೆಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ತಲೆಗೆ ಗಂಭೀರವಾಗಿ ಪೆಟ್ಟಾದ ಹಿನ್ನಲೆ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ ಅದು ಫಲಿಸದೆ ಆಕೆ ಉಸಿರು ಚೆಲ್ಲಿದ್ದಾಳೆ. ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಛೋಟೆಲಾಲ್ ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಅರೆಬೆಂದ ಶವ ಪತ್ತೆ
ಅಸ್ಸಾಂ ಮೂಲದ ವ್ಯಕ್ತಿ ಮೇಲೆ ಹಲ್ಲೆ
ಅಸ್ಸಾಂ ಮೂಲದ ವ್ಯಕ್ತಿ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ನೆಲಮಂಗಲ ಬಸ್ ನಿಲ್ದಾಣದ ಮಂಜುನಾಥ ಹೋಟೆಲ್ ಬಳಿ ನಡೆದಿದೆ. ಗಾಯಾಳುವನ್ನು ರಾಜು (35) ಎಂದು ಗುರುತಿಸಲಾಗಿದೆ. ಹೋಟೆಲ್ ಓಪನ್ ಮಾಡಲು ಬಂದ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನ ಕಂಡು ಶಾಕ್ ಆಗಿದ್ದಾರೆ. ಕೂಡಲೇ ನೆಲಮಂಗಲ ಟೌನ್ ಪೊಲೀಸರಿಗೆ ಕರೆ ಮಾಡಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



