ಕರ್ನಾಟಕ ಗೃಹ ಮಂಡಳಿಗಾಗಿ ಭೂ ಸ್ವಾಧೀನಕ್ಕೆ ಪ್ಲ್ಯಾನ್: ಸರ್ಕಾರದ ನಡೆಗೆ ಸಿಡಿದೆದ್ದ ರೈತರು
ಬೆಂಗಳೂರು ಹೊರವಲಯದಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನ ಕರ್ನಾಟಕ ಗೃಹ ಮಂಡಳಿಗಾಗಿ ಸ್ವಾಧೀನಕ್ಕೆ ಪ್ಲ್ಯಾನ್ ಮಾಡಿರೋ ರಾಜ್ಯ ಸರ್ಕಾರದ ವಿರುದ್ಧ 5 ಗ್ರಾಮಗಳ ರೈತರಿಂದ ಸಮಾವೇಶ ನಡೆದಿದೆ. ಪ್ರಾಣ ಬೇಕಾದ್ರೂ ಬಿಡ್ತೇವೆ ಭೂಮಿ ಬಿಡಲ್ಲ ಅಂತಾ ಅನ್ನದಾತರು ಎಚ್ಚರಿಕೆ ನೀಡಿದ್ದು, ಗೃಹ ಮಂಡಳಿ ನೀಡಿದ್ದ ನೋಟಿಸ್ ಗಳನ್ನ ಬೆಂಕಿ ಹಚ್ಚಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 05: ಕರ್ನಾಟಕ ಗೃಹ ಮಂಡಳಿಗಾಗಿ ಬೆಂಗಳೂರು ಹೊರವಲಯದಲ್ಲಿ ರೈತರ ಸಾವಿರಾರು ಎಕರೆ ಭೂಮಿ ಸ್ವಾಧೀನಕ್ಕೆ (Land acquisition) ರಾಜ್ಯ ಸರ್ಕಾರ ಪ್ಲ್ಯಾನ್ ಮಾಡಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಒಟ್ಟು 2670 ಎಕರೆ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ನಿರ್ಧರಿಸಲಾಗಿದೆ.
ದೊಡ್ಡಹೆಜ್ಜಾಜಿ, ವೆಂಕಟೇಶಪುರ, ಕಾರೇಪುರ, ಕಸಾಘಟ್ಟ ಹಾಗೂ ಅಯ್ಯನಹಳ್ಳಿ ಗ್ರಾಮಗಳ 2760 ಎಕರೆ ಭೂಸ್ವಾಧೀನಕ್ಕೆ ತೀವ್ರ ವಿರೋಧ ಕೇಳಿಬಂದಿದ್ದು, ಕೃಷಿ ಭೂಮಿ ಸ್ವಾಧೀನ ಖಂಡಿಸಿ 5 ಗ್ರಾಮಗಳ ರೈತರಿಂದ ಸಮಾವೇಶ ನಡೆದಿದೆ. ಚಿಕ್ಕಬೆಳವಂಗಲದಿಂದ ದೊಡ್ಡಬೆಳವಂಗಲದವರೆಗೆ ಪಾದಯಾತ್ರೆ ನಡೆಸಿರುವ ರೈತರು, ಗೃಹ ಮಂಡಳಿ ನೀಡಿದ್ದ ನೋಟಿಸ್ ಗಳನ್ನ ಬೆಂಕಿ ಹಚ್ಚಿ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಟೌನ್ ಶಿಪ್, ಕ್ವಿನ್ ಸಿಟಿ, ಕೆಐಎಡಿಬಿಗೆ ಭೂಮಿ ಸ್ವಾಧೀನ ಮಾಡಲಾಗಿದ್ದು, ರೈತರ 10 ಸಾವಿರ ಎಕರೆ ಕೃಷಿ ಭೂಮಿ ರಾಜ್ಯ ಸರ್ಕಾರದ ಪಾಲಾಗಿದೆ. ಈಗ ಸರ್ಕಾರ ಗೃಹ ಮಂಡಳಿಗೆ ಎಂದು ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿದ್ದು, ಪ್ರಾಣ ಬೇಕಾದ್ರೂ ಬಿಡ್ತೇವೆ ಭೂಮಿ ಬಿಡಲ್ಲ ಅಂತಾ ಅನ್ನದಾತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಿಡದಿ ಇಂಟಿಗ್ರೇಟೆಡ್ ಟೌನ್ಶಿಪ್: ಜೆಡಿಎಸ್ ಬೆಂಬಲ ಬೆನ್ನಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡ ರೈತರ ಹೋರಾಟ
ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಗೂ ವಿರೋಧ
ರಾಜ್ಯ ಸರ್ಕಾರದ, ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವಾಕಾಂಕ್ಷಿ ಯೋಜನೆ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಗೂ ಪ್ರಾರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ರಾಮನಗರ ತಾಲೂಕಿನ ಬಿಡದಿ ಬಳಿ ಸುಮಾರು 9 ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಗೆ ಸರ್ಕಾರ ಸಜ್ಜಾಗಿದೆ. ಆದರೆ, ಈ ಯೋಜನೆಗೆ ಭೂಮಿ ನೀಡಲ್ಲ ಎಂದು ಬಿಡದಿ ಭಾಗದ ರೈತರು ಪಟ್ಟು ಹಿಡಿದಿದ್ದಾರೆ. ಯೋಜನೆಗಾಗಿ 7,000 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2025 ರ ಮಾರ್ಚ್ ನಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿತ್ತು. ರಾಮನಗರ ಜಿಲ್ಲೆಯ ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕುಗಳ ಒಂಬತ್ತು ಹಳ್ಳಿಗಳಲ್ಲಿ 7,293.44 ಎಕರೆ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:27 pm, Sun, 5 October 25



