AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡದಿ ಇಂಟಿಗ್ರೇಟೆಡ್ ಟೌನ್​ಶಿಪ್​: ಜೆಡಿಎಸ್ ಬೆಂಬಲ ಬೆನ್ನಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡ ರೈತರ ಹೋರಾಟ

ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ವಿರುದ್ಧ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ಜೆಡಿಎಸ್ ಬೆಂಬಲದೊಂದಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಮನಗರದ ಬಿಡದಿ ಬಳಿ ನಡೆಯುತ್ತಿರುವ ಈ ಹೋರಾಟ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಜೆಡಿಎಸ್ ನಾಯಕರು ರೈತರ ಪರ ಧ್ವನಿ ಎತ್ತಿದ್ದಾರೆ.

ಬಿಡದಿ ಇಂಟಿಗ್ರೇಟೆಡ್ ಟೌನ್​ಶಿಪ್​: ಜೆಡಿಎಸ್ ಬೆಂಬಲ ಬೆನ್ನಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡ ರೈತರ ಹೋರಾಟ
ರೈತರ ಪ್ರತಿಭಟನೆ
ಪ್ರಶಾಂತ್​ ಬಿ.
| Updated By: Ganapathi Sharma|

Updated on: Sep 29, 2025 | 7:08 AM

Share

ಬೆಂಗಳೂರು, ಸೆಪ್ಟೆಂಬರ್ 29: ಬಿಡದಿ ಇಂಟಿಗ್ರೇಟೆಡ್ ಟೌನ್​ಶಿಪ್ (Bidadi Integrated Township) ವಿರುದ್ಧದ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ರೈತರ ಹೋರಾಟಕ್ಕೆ ಜೆಡಿಎಸ್ (JDS) ಬಹಿರಂಗವಾಗಿ ಬೆಂಬಲ ಘೋಷಿಸಿದ ಬೆನ್ನಲ್ಲೇ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ನಮ್ಮ ಭೂಮಿ ಕೊಡುವುದಿಲ್ಲ ಎಂದು ಬೀದಿಗೆ ಇಳಿದಿರುವ ರೈತರು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧವೇ ಗರಂ ಆಗಿದ್ದಾರೆ, ಶಾಸಕರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಡದಿ ಇಂಟಿಗ್ರೇಟೆಡ್ ಟೌನ್​ಶಿಪ್: ಏನಿದು ಯೋಜನೆ?

ರಾಜ್ಯ ಸರ್ಕಾರದ, ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವಾಕಾಂಕ್ಷಿ ಯೋಜನೆ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್​ಶಿಪ್​ಗೆ ಪ್ರಾರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ರಾಮನಗರ ‌ತಾಲೂಕಿನ ಬಿಡದಿ ಬಳಿ ಸುಮಾರು 9 ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಗೆ ಸರ್ಕಾರ ಸಜ್ಜಾಗಿದೆ. ಆದರೆ, ಈ ಯೋಜನೆಗೆ ಭೂಮಿ ನೀಡಲ್ಲ ಎಂದು ಬಿಡದಿ ಭಾಗದ ರೈತರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.

ರೈತರ ಹೋರಾಟಕ್ಕೆ ಧುಮುಕಿದ ಜೆಡಿಎಸ್

ಬೈರಮಂಗಲ ಗ್ರಾಮದ ಬಳಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ನಾಯಕರು ಬೆಂಬಲ ಸೂಚಿಸಿದ್ದಾರೆ. ರೈತರ ಭೂಮಿ ಕಸಿಯಲು ಡಿಕೆ ಹುನ್ನಾರ ನಡೆಸಿದ್ದಾರೆ ಅಂತ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇತ್ತೀಚೆಗೆ ರಾಮನಗರ ಡಿಸಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದ ರೈತರ ವಿರುದ್ಧ ಡಿಕೆ ಶಿವಕುಮಾರ್ ಸಿಟ್ಟಾಗಿದ್ದರು. ಈ ಬಗ್ಗೆ ಕಿಡಿಕಾರಿದ ನಿಖಿಲ್​ಕುಮಾರಸ್ವಾಮಿ, ಅವರು (ಡಿಸಿಎಂ) ತೊಡೆತಟ್ಟಿ ಮಾತನಾಡಬಹುದು, ಆದರೆ ತೊಡೆ ಮುರಿಯುವ ಶಕ್ತಿ ರೈತರಿಗೆ ಇದೆ ಎಂದಿದ್ದಾರೆ.

ಏನೇ ಆದ್ರೂ ಬರುತ್ತೇನೆ: ರೈತರಿಗೆ ಕುಮಾರಸ್ವಾಮಿ ಅಭಯ

ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಕೂಡ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ರೈತರಿಗೆ ಏನಾದರೂ ಆದರೆ ಖುದ್ದು ಸ್ಥಳಕ್ಕೆ ಬರುವುದಾಗಿ ಭರವಸೆ ನೀಡಿದರು.

ಸದ್ಯ ಜಿಬಿಎ ಟೌನ್​ಶಿಪ್​ ಯೋಜನೆ ಈಗ ರಾಜಕೀಯ ಜಟಾಪಟಿಯ ವೇದಿಕೆಯಾಗಿದೆ. ಒಂದೆಡೆ, ಯೋಜನೆ ಅನುಷ್ಠಾನಗೊಳಿಸಿಯೇ ಸಿದ್ಧ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದರೆ ಮತ್ತೊಂದೆಡೆ, ಯೋಜನೆ ಮಾಡಲು ಬಿಡುವುದಿಲ್ಲ. ಅದ್ಹೇಗೆ ಮಾಡುತ್ತೀರಿ ನೋಡೋಣ ಎಂದು ದಳಪಡೆ ಸವಾಲು ಎಸೆದಿದೆ.

ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌: ಜಮೀನು ಕೊಟ್ಟವರಿಗೆ 2 ಕೋಟಿ ಅಥವಾ 50*50 ನಿವೇಶನ: ರೈತರಿಗೆ ಡಿಕೆಶಿ ಆಫರ್

ಬಿಡದಿ ಟೌನ್‌ಶಿಪ್ ಯೋಜನೆಗಾಗಿ 7,000 ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 2025 ರ ಮಾರ್ಚ್​​ನಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿತ್ತು. ರಾಮನಗರ ಜಿಲ್ಲೆಯ ರಾಮನಗರ ಮತ್ತು ಹಾರೋಹಳ್ಳಿ ತಾಲ್ಲೂಕುಗಳ ಒಂಬತ್ತು ಹಳ್ಳಿಗಳಲ್ಲಿ 7,293.44 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ರೈತರು ಸರ್ಕಾರದ ಯೋಜನೆ ವಿರುದ್ಧ ಬೀದಿಗಿಳಿದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ